ಕಾರು-ಮಿನಿ ಬಸ್ ನಡುವೆ ಭೀಕರ ಅಪಘಾತ
ಸಹೋದರರಿಬ್ಬರ ಸಾವು
ತೀರ್ಥಹಳ್ಳಿ, ಜು. 3: ಮಾರುತಿ ಓಮ್ನಿ ಹಾಗೂ ಮಿನಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಹೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಆಗುಂಬೆ ಸಮೀಪದ ಕೌರಿಹಕ್ಲು ತಿರುವಿನಲ್ಲಿ ಸಂಜೆ ಸಂಭವಿಸಿದೆ.
ಮೃತರನ್ನು ಸಹೋದರರಾದ ಪ್ರಕಾಶ್ (35) ಪ್ರದೀಪ್ (32) ಎಂದು ಗುರುತಿಸಲಾಗಿದೆ. ಮೃತರು ತೀರ್ಥಹಳ್ಳಿ ಸಮೀಪದ ಭೀಮನಕಟ್ಟೆಯವರಾಗಿದ್ದು, ತೀರ್ಥಹಳ್ಳಿಯಲ್ಲಿ ಪಿ.ಪಿ. ಕೇಟರರ್ಸ್‌ನಲ್ಲಿ ಅಡುಗೆ ಕಂಟ್ರಾಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ತೀರ್ಥಹಳ್ಳಿಯಿಂದ ಉಡುಪಿಗೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ್ದ ಕಾರಿಗೆ ಮಲ್ಪೆಯಿಂದ ಆಗುಂಬೆ ಮಾರ್ಗವಾಗಿ ಬರುತ್ತಿದ್ದ ಪ್ರವಾಸಿ ಮಿನಿ ಬಸ್ ನಡುವೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೃತರ ತಾಯಿ ಸುಧಾ (75), ಪ್ರಕಾಶ್‌ರ ಪತ್ನಿ ರೇಖಾ (30), ಸುಜಿತ್ (18), ಪ್ರಶಾಂತ್(35) ಮತ್ತು ಸಂಧ್ಯಾ (32) ಹಾಗೂ ಅರ್ಚನಾ (30) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಿನಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತೀರ್ಥಹಳ್ಳಿ ಜೆ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





