ಐಸಿಸಿಯಿಂದ ಪಾಕ್‌ನ ನಾಲ್ವರು ಆಟಗಾರರ ಡೋಪಿಂಗ್ ಟೆಸ್ಟ್
ಲಾಹೋರ್, ಜೂ.3: ಈ ವರ್ಷಾರಂಭದಲ್ಲಿ ಅಮಾನತುಗೊಂಡಿರುವ ಲೆಗ್ ಸ್ಪಿನ್ನರ್ ಯಾಸಿರ್ ಷಾ ಸಹಿತ ನಾಲ್ವರು ಪಾಕಿಸ್ತಾನಿ ಆಟಗಾರರನ್ನು ಐಸಿಸಿ ಡೋಪಿಂಗ್ ಪರೀಕ್ಷೆಗೆ ಗುರಿಪಡಿಸಿದೆ ಎಂದು ಪಾಕ್ ತಂಡದ ಮ್ಯಾನೇಜರ್ ಇಂತಿಕಾಬ್ ಆಲಂ ಶುಕ್ರವಾರ ದೃಢಪಡಿಸಿದ್ದಾರೆ.
ಪಾಕಿಸ್ತಾನದ ಟೆಸ್ಟ್ ತಂಡದ ನಾಯಕ ಮಿಸ್ಬಾವುಲ್ ಹಕ್ ಕೂಡ ಐಸಿಸಿಯಿಂದ ಡೋಪಿಂಗ್ ಪರೀಕ್ಷೆಗೆ ಒಳಗಾಗಿದ್ದಾರೆ.
ಡೋಪಿಂಗ್ ಪರೀಕ್ಷೆಯಲ್ಲಿ ಋಣಾತ್ಮಕ ಫಲಿತಾಂಶ ಬಂದರೆ ಮುಂಬರುವ ಇಂಗ್ಲೆಂಡ್ ಪ್ರವಾಸದ ವೇಳೆ ಪ್ರತಿಕೂಲ ಪರಿಣಾಮ ಬೀರಬಹುದು. ಡೋಪಿಂಗ್ ಪರೀಕ್ಷೆಯ ಫಲಿತಾಂಶ ಆ ವೇಳೆಗೆ ಹೊರಬರುವ ಸಾಧ್ಯತೆಯಿದೆ.
ಐಸಿಸಿ ವಿಶ್ವ ಉದ್ದೀಪನಾ ತಡೆ ಘಟಕ(ವಾಡಾ)ದೊಂದಿಗೆ ಸಹಿ ಹಾಕಿದ್ದು, 2006ರಿಂದ ನಿರಂತರವಾಗಿ ಆಟಗಾರರ ಡೋಪಿಂಗ್ ಪರೀಕ್ಷೆ ನಡೆಸುತ್ತಾ ಬಂದಿದೆ.
ಪಾಕ್ ಲೆಗ್ ಸ್ಪಿನ್ನರ್ ಯಾಸಿರ್ ಷಾ ವಾಡಾದ ನಿಷೇಧಿತ ಪಟ್ಟಿಯಲ್ಲಿರುವ ರಾಸಾಯನಿಕ ಸೇವಿಸಿದ ಆರೋಪದಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದರು. ಕಳೆದ ಮಾರ್ಚ್‌ನಲ್ಲಿ ಯಾಸಿರ್ ವಿರುದ್ಧ ನಿಷೇಧ ಹಿಂಪಡೆಯಲಾಗಿದ್ದು, ಅವರು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಅರ್ಹತೆ ಪಡೆದಿದ್ದಾರೆ.
ಷಾರಲ್ಲದೆ, ಟೆಸ್ಟ್ ನಾಯಕ ಮಿಸ್ಬಾವುಲ್ ಹಕ್, ಏಕದಿನ ತಂಡದ ನಾಯಕ ಅಝರ್ ಅಲಿ ಹಾಗೂ ವೇಗದ ಬೌಲರ್ ಜುನೈದ್ ಖಾನ್‌ರನ್ನು ಡೋಪಿಂಗ್ ಟೆಸ್ಟ್‌ಗೆ ಗುರಿಪಡಿಸಲಾಗಿದೆ. ಷಾರನ್ನು ಗುರಿಪಡಿಸಿ ಪರೀಕ್ಷೆ ನಡೆಸಲಾಗಿದೆ ಎಂದು ಇಂತಿಕಾಬ್ ಆಲಂ ಆರೋಪಿಸಿದರು.
ಜುಲೈ 14 ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಷಾ ಪಾಕಿಸ್ತಾನದ ಪ್ರಮುಖ ಬೌಲರ್ ಆಗಿದ್ದಾರೆ.







