ನಾನೀಗ ಕಾಂಚ ಐಲಯ್ಯ ಶೆರ್ಡ್ ನಾನ್ಯಾಕೆ ಹೆಸರು ಬದಲಾಯಿಸಿದೆ ?

ಮೇ 15 ಹಾಗೂ 16ರಂದು ಆಂಧ್ರಪ್ರದೇಶ ಹಾಗೂ ತೆಲಂಗಾಣದ ಬ್ರಾಹ್ಮಣ ಸಂಘಟನೆಗಳು ನನ್ನ ಪ್ರತಿಕೃತಿಗಳನ್ನು ದಹಿಸಿದವು, ನನ್ನನ್ನು ಖಂಡಿಸುವ ಹೇಳಿಕೆಗಳನ್ನು ನೀಡಿದವು. ಆಂಧ್ರಪ್ರದೇಶ ಬ್ರಾಹ್ಮಣ ಕಾರ್ಪೊರೇಶನ್‌ನ ಅಧ್ಯಕ್ಷ ಐ.ವಿ.ಕೃಷ್ಣ ರಾವ್ ಮಾರ್ಗದರ್ಶನದಲ್ಲಿ ಅವರು ಹೈದರಾಬಾದ್‌ನ ವೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿವಿಯಲ್ಲಿರುವ ನನ್ನ ಕಚೇರಿಗೆ ಆಗಮಿಸಿದ್ದರು. ಕೃಷ್ಣರಾವ್ ಅವರು ಆಂಧ್ರಪ್ರದೇಶ ಸರಕಾರದ ಮಾಜಿ ಕಾರ್ಯದರ್ಶಿಯೂ ಹೌದು.
ಮೇಲ್ನೋಟಕ್ಕೆ ತೋರುವಂತೆ ರಾವ್ ಅವರೇ ಮೇ 16ರಂದು ಸುಮಾರು 15 ಮಂದಿಯನ್ನು ನನ್ನ ಕಚೇರಿಗೆ ಕಳುಹಿಸಿದ್ದರು. ಆನಂತರ ಅವರು ತೆಲುಗು ಸುದ್ದಿ ಪತ್ರಿಕೆಗಳಿಗೆ ನನ್ನ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡಿದರು. ಬ್ರಾಹ್ಮಣರೆಂದು ಹೇಳಿಕೊಳ್ಳುವ ಈ ವ್ಯಕ್ತಿಗಳು, ನನ್ನ ಕಚೇರಿಗೆ ಕರೆಗಳನ್ನು ಮಾಡಿ, ತಮ್ಮ ಪೂರ್ವಜರಾದ ಪರಶುರಾಮರು ತನ್ನ ಶಕ್ತಿಶಾಲಿ ಕೊಡಲಿಯಿಂದ ಕ್ಷತ್ರಿಯರಿಗೆ ಗತಿ ಕಾಣಿಸಿದಂತೆ, ನನಗೂ ತಕ್ಕ ಶಾಸ್ತಿ ಮಾಡುವುದಾಗಿ ಬೆದರಿಕೆ ಹಾಕಿದರು. ಬ್ರಾಹ್ಮಣ ಪರಶುರಾಮರು, ನೂರಾರು ಕ್ಷತ್ರಿಯರನ್ನು ಹತ್ಯೆಗೈದ ಕತೆಯು, ಒಂದು ಪೌರಾಣಿಕ ಕಥೆಯಾಗಿದ್ದು, ಹೆಚ್ಚು ಜನಪ್ರಿಯವಾಗಿಲ್ಲ. ಆದರೆ ಅದೊಂದು ಭಯಾನಕ ಕತೆಯಾಗಿದೆ.
ಹೈದರಾಬಾದ್‌ನ ಸರೂರ್ ನಗರ್ ಪೊಲೀಸ್ ಠಾಣೆಯಲ್ಲಿ, 2016ರ ಮೇ 26ರಂದು ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 295ಎ (ಧರ್ಮ ಹಾಗೂ ಧಾರ್ಮಿಕ ಭಾವನೆಗಳನ್ನು ಅಪಮಾನಗೊಳಿಸುವ ಮೂಲಕ ಯಾವುದೇ ವರ್ಗವನ್ನು ಕೆರಳಿಸುವಂತಹ ಉದ್ದೇಶಪೂರ್ವಕವಾದ ಹಾಗೂ ದ್ವೇಷಪೂರ್ಣವಾದ ಕೃತ್ಯಗಳು), 153ಎ (ಧರ್ಮದ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ಶತ್ರುತ್ವವನ್ನು ಬೆಳೆಸುವುದು) ಹಾಗೂ 298 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡುವ ಉದ್ದೇಶದ ಪದಗಳನ್ನು ಬಳಸುವುದು, ಇತ್ಯಾದಿ) ಅನ್ವಯ ನನ್ನ ವಿರುದ್ಧ ಪ್ರಕರಣ ವನ್ನು ದಾಖಲಿಸಲಾಯಿತು.
ಆದಾಗ್ಯೂ, 2014ರಲ್ಲಿ ಹೊಸದಿಲ್ಲಿಯಲ್ಲಿ ಬಿಜೆಪಿಯು ಅಕಾರಕ್ಕೇರಿದ ಬಳಿಕ ತೀವ್ರವಾದಿ ಬ್ರಾಹ್ಮಣ ಜಾತಿ ಸಂಘಟನೆಗಳು ರಚನೆಯಾಗುತ್ತಿರುವುದು ನೂತನ ವಿದ್ಯಮಾನವಾಗಿದೆ.
ಈಗ ಇದೆಲ್ಲಾ ಯಾಕೆ?
ಇವರೆಲ್ಲಾ ಯಾಕೆ ಈ ಸಲ ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ?. 2016ರ ಮೇ 14ರಂದು ವಿಜಯವಾಡ (ಅಮರಾವತಿ)ದಲ್ಲಿ ಸಿಪಿಎಂ ಪಕ್ಷದ ಕಾರ್ಮಿಕ ಘಟಕವಾದ ಐಟಕ್‌ನ ಸಭೆಯಲ್ಲಿ ಭಾಷಣ ಮಾಡಿದ ಸಂದರ್ಭದಲ್ಲಿ ನಾನು ಹೀಗೆ ಹೇಳಿದ್ದೆ:
‘‘ಒಂದು ಸಮುದಾಯವಾಗಿ ಬ್ರಾಹ್ಮಣರು ಭಾರತ ದೇಶದ ಉತ್ಪಾದನಾ ಪ್ರಕ್ರಿಯೆಗೆ ಯಾವುದೇ ಕೊಡುಗೆಯನ್ನು ನೀಡಿಲ್ಲ. ಈಗ ಕೂಡಾ ಉತ್ಪಾದನಾ ಚಟುವಟಿಕೆ ಆಧರಿಸಿದ ಮೂಲಭೂತ ಮಾನವ ಜೀವನೋಪಾಯ ಚಟುವಟಿಕೆಗಳಲ್ಲಿ ಅವರ ಪಾತ್ರ ಕಂಡುಬರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಅವರು, ಉತ್ಪಾದನೆಯು ಮಲಿನವೆಂಬುದನ್ನು ಪದೇ ಪದೇ ಪುನರುಚ್ಚರಿಸುವ ಆಧ್ಯಾತ್ಮಿಕ ಸಿದ್ಧಾಂತವನ್ನು ರೂಪಿಸಿದರು.’’ ಈ ರೀತಿಯ ಬ್ರಾಹ್ಮಣವಾದದ ಅತಿಕ್ರಮಣಕ್ಕೆ ಕೆಲವು ಎಡಪಂಥೀಯ ಸಂಘಟನೆಗಳು ಸೇರಿದಂತೆ ದಲಿತ-ಬಹುಜನ, ಆದಿವಾಸಿ ಸಂಘಟನೆಗಳು ಪ್ರತಿಭಟನೆಗಳನ್ನು ಹಾಗೂ ಸಮಾವೇಶಗಳನ್ನು ನಡೆಸುವ ಮೂಲಕ ಪ್ರತ್ಯುತ್ತರ ನೀಡುತ್ತಾ ಬಂದಿವೆ. ಮೇ 21ರಂದು ನಡೆದ ಪುಚಲಪಲ್ಲಿ ಸುಂದರಯ್ಯ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾದ ಮಹತ್ವದ ಸಭೆಯೊಂದರಲ್ಲಿ ನನ್ನ ಕವನವೊಂದನ್ನು ನಾನು ಬಿಡುಗಡೆಗೊಳಿಸಿದ್ದೆ.
ನಾನು ಯಾಕೆ ಹಿಂದೂ ಅಲ್ಲವೆಂದು, ನಾನು ಬರೆದಾಗಿ ನಿಂದ ಹಲವಾರು ಮಂದಿ ಬ್ರಾಹ್ಮಣ ಪುರುಷರು ಹಾಗೂ ಕೆಲವು ಮಹಿಳೆಯರೂ ಕೂಡಾ ನನ್ನ ಬಗ್ಗೆ ತುಂಬಾ ಆಕ್ರೋಶಗೊಂಡಿ ದ್ದಾರೆಂಬುದು ನನಗೆ ತಿಳಿದಿದೆ. ತಮ್ಮ ಐತಿಹಾಸಿಕ ಯಜಮಾನಿಕೆ ಹಾಗೂ ನಿಯಂತ್ರಣದ ಮೇಲೆ ನಡೆಸಿದ ನೇರ ಆಕ್ರಮಣ ಇದೆಂದು ಅವರು ಭಾವಿಸಿದ್ದಾರೆ. ನನ್ನ ಪುಸ್ತಕ ಕೃತಿಗಳಾದ ‘ಪೋಸ್ಟ್-ಹಿಂದೂ-ಇಂಡಿಯಾ’, ‘ಬೆಲೋ ನ್ಯಾಶನಲಿಸಂ’ ಹಾಗೂ ‘ಅನ್‌ಟಚೇಬಲ್ ಗಾಡ್’ ಬಗ್ಗೆಯೂ ಅವರು ಕ್ರುದ್ಧರಾಗಿದ್ದಾರೆ. ಈ ಪುಸ್ತಕಗಳು ಭಾರತವನ್ನು ಪರಿವರ್ತಿಸುವ ಉದ್ದೇಶವನ್ನು ಹೊಂದಿವೆ ಹಾಗೂ ಈ ವಿಷಯದಲ್ಲಿ ತಥಾಕಥಿತ ರಾಜಕೀಯ ವಿಚಾರಧಾರೆಗಳನ್ನು ಮೀರಿ ಬ್ರಾಹ್ಮಣರು ಹೊಂದಿರುವ ಭಾವನೆಗಳನ್ನು ನಾನು ತಿಳಿದುಕೊಂಡಿದ್ದೇನೆ.
ಬ್ರಾಹ್ಮ್ಮಣ್ಯಕ್ಕೆ ಪರ್ಯಾಯವಾದ ವ್ಯವಸ್ಥೆಯನ್ನು ಗೌತಮ ಬುದ್ಧನು ಒದಗಿಸಿದ್ದನಾದರೂ, ಹಾಲಿ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿಯೂ ಕೂಡಾ ಅವರ ಯಜಮಾನಿಕೆಯನ್ನು ಕಿತ್ತೊಗೆಯಲು ಸಾಧ್ಯವಾಗಿಲ್ಲ.
ವಾಸ್ತವವಾಗಿ ಪ್ರಸಕ್ತ ಪ್ರಜಾತಾಂತ್ರಿಕ ವ್ಯವಸ್ಥೆಯು ಅವರಿಗೆ ಜಾಗತಿಕ ದೃಷ್ಟಿಕೋನ, ಸಂಪರ್ಕಶೀಲತೆ, ಸಾಂಸ್ಕೃತಿಕ ದಾರ್ಷ್ಟವನ್ನು ನೀಡಿದೆ. ದಲಿತ-ಬಹುಜನ ಅಥವಾ ಶೂದ್ರ ಮೇಲ್ಜಾತಿ ಸಮುದಾಯಗಳು ಆಧುನಿಕ ಮಾರುಕಟ್ಟೆಯಲ್ಲಿ ಆಂಗ್ಲಭಾಷೆಯ ಮೇಲೆ ಹಿಡಿತವನ್ನು ಸಾಸಿಲ್ಲ. ತಾವು ದೇವಭಾಷೆಯೆಂದು ವ್ಯಾಖ್ಯಾನಿಸುತ್ತಿರುವ ಸಂಸ್ಕೃತದ ಮೇಲೆ ಅವರ ನಿಯಂತ್ರಣವು ಈಗಲೂ ಅಚಲವಾಗಿಯೇ ಉಳಿದಿದೆ. ದಲಿತ-ಬಹುಜನ ಸುಧಾರಕರು ಎಲ್ಲಾ ರೀತಿಯ ವಿಧಾನಗಳನ್ನು ಪ್ರಯತ್ನಿಸಿದರೂ ಕೂಡಾ ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಬ್ರಾಹ್ಮಣ್ಯದ ನಿಯಂತ್ರಣವನ್ನು ಅಲುಗಾಡಿಲು ಅವರಿಗೆ ಸಾಧ್ಯವಾಗಿಲ್ಲ.
ದಲಿತ-ಬಹುಜನರು ತಮ್ಮದೇ ಆದ ಜಗತ್ತಿಗೆ ಸಂಪರ್ಕಿಸುವಂತಹ ಸಮಯ ಬಂದಿದೆ. ಯಾಕೆಂದರೆ ಅವರನ್ನು ಇನ್ನು ಮುಂದೆ ನಿಯಂತ್ರಿಸಲು ಸಾಧ್ಯವಿಲ್ಲ.
ಭಾಷಾ ಯಜಮಾನಿಕೆ
ಯಾವುದೇ ದೇಶವೂ ಮೂಲಭೂತ ಆಹಾರ ಉತ್ಪಾದನೆ, ಸೇವಾ ಸಾಮಗ್ರಿಗಳು ಹಾಗೂ ಸಾಂಸ್ಕೃತಿಕ ಸಾಧನಗಳಿಲ್ಲದೆ ಬದುಕುಳಿಯಲಾರದು. ಈ ವೃತ್ತಿಗಳಲ್ಲಿ ಒಳಗೊಂಡಿರುವವರು, ಯಾವುದೇ ಮೂಲಭೂತ ಉತ್ಪಾದನಾ ಕೆಲಸವನ್ನು ಮಾಡದ ಜಾತಿಗಳನ್ನು ಇನ್ನು ಮುಂದೆ ಅವಲಂಬಿಸಬಾರದು. ಈ ಜಾತಿಗಳು, ಉತ್ಪಾದನಾ ಮಣ್ಣಿನ ಬಗ್ಗೆ ದ್ವೇಷಭಾವನೆಯನ್ನು ಮಾತ್ರವೇ ಹೊಂದಿದ್ದಾರೆ ಹಾಗೂ ತಾವು ಕೆಳಗಿನವರೆಂದು ಹೇಳಿಕೊಳ್ಳುವ ಸಮುದಾಯಗಳ ಶ್ರಮದಿಂದ ಉತ್ಪಾದಿಸಲ್ಪಟ್ಟ ಆಹಾರದಲ್ಲಿ ದೊಡ್ಡ ಪಾಲನ್ನು ಪಡೆಯುವುದು ತಮ್ಮ ಹಕ್ಕೆಂಬುದಾಗಿ ಪರಿಗಣಿಸಿದ್ದಾರೆ.
ಉತ್ಪಾದಕ ವರ್ಗವು, ತಮ್ಮನ್ನು ಪರಸ್ಪರ ಸಂಪರ್ಕಿಸಲು ಅವಕಾಶ ನೀಡುವ ಭಾಷೆಯ ಹೆಸರುಗಳನ್ನು ಅಳವಡಿಸಿಕೊಳ್ಳುವುದನ್ನು ಆರಂಭಿಸಬೇಕು ಹಾಗೂ ಆ ಮೂಲಕ ತಮಗೆ ನಿರಾಕರಿಸಲಾದ ಸಾಮಾಜಿಕ ಗೌರವವನ್ನು ಗಳಿಸಿಕೊಳ್ಳಬೇಕು.
ಬ್ರಾಹ್ಮಣರು ಶರ್ಮಾ, ಶಾಸಿ, ಚತುರ್ವೇದಿ, ಉಪಾಧ್ಯಾಯ ಇತ್ಯಾದಿ ಸಂಸ್ಕೃತ ಹೆಸರುಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಸಾಂಸ್ಕೃತಿಕ ಹೆಸರುಗಳ ಮೂಲಕ ಅವರು ಅಖಿಲಭಾರತ ಮಟ್ಟದಲ್ಲಿ ಸಂಪರ್ಕವನ್ನು ಸ್ಥಾಪಿಸಿಕೊಂಡರು. ಆದರೆ ದಲಿತ-ಬಹುಜನರು ಯಾವುದೇ ಗೌರವಯುತ ಹೆಸರುಗಳನ್ನು ಹೊಂದದೆ ಬದುಕಿದರು. ಬಹುತೇಕವಾಗಿ ತಮ್ಮ ವೃತ್ತಿಗಳು ಬೇರೆ ಬೇರೆ ಭಾಷೆಗಳಲ್ಲಿ ವಿಭಿನ್ನವಾಗಿ ಕರೆಯಲ್ಪಡುವು ದರಿಂದ, ಅವರು ಅಖಿಲ ಭಾರತ ಮಟ್ಟದ ಯಾವುದೇ ಗುರುತನ್ನು ಹೊಂದಿಲ್ಲ ಹಾಗೂ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದ ನಡುವೆ ಸಂಪರ್ಕಶೀಲತೆ ಯನ್ನು ಹೊಂದಿಲ್ಲ.
ಜಾಗತೀಕರಣಗೊಂಡಿರುವ ಪ್ರಪಂಚದಲ್ಲಿ ಇಂಗ್ಲಿಷ್ ಮೂಲಕ ಸಂಸ್ಕೃತವನ್ನು ಜಯಿಸುವುದೇ ದಲಿತ-ಬಹುಜನರಿಗೆ ಉಳಿದಿರುವ ಏಕೈಕ ದಾರಿಯಾಗಿದೆ. ಇವರಲ್ಲಿ ಅನೇಕರು ಇಂಗ್ಲಿಷ್ ಭಾಷೆಯಲ್ಲಿ ಸುಶಿಕ್ಷಿತರಲ್ಲದಿದ್ದರೂ, ಅವರು ಎಲ್ಲ ವಿಷಯಗಳಲ್ಲೂ ಇಂಗ್ಲಿಷನ್ನು ತಮ್ಮ ಭಾಷೆಯೆಂಬುದಾಗಿ ಪರಿಗಣಿಸಬೇಕು. ತಮ್ಮ ಹೆಸರುಗಳಿಂದ ಹಿಡಿದು ದೇವರನ್ನು ಪ್ರಾರ್ಥಿಸುವಲ್ಲಿಯೂ ಇಂಗ್ಲಿಷ್ ಭಾಷೆಯನ್ನು ಅಳವಡಿಸಿಕೊಳ್ಳಬೇಕು. ಅವರ ಪ್ರಾರ್ಥನೆಗಳು ಸಮಾನತೆಯ ದೇವರಿಗಿರಬೇಕೇ ಹೊರತು ಅಸಮಾನತೆಯ ಬ್ರಾಹ್ಮಣ ದೇವರುಗಳಿಗಲ್ಲ.
ದಲಿತ-ಬಹುಜನ ಸಮುದಾಯಗಳು, ಇಂಗ್ಲಿಷ್ ಭಾಷೆಯಲ್ಲಿ ಆರಾಸಿದಾಗ ಆ ಭಾಷೆಯು ಅರಿಯುವುದಿಲ್ಲವೆಂದು ತಿಳಿಯಲ್ಪಡುವ ತಮ್ಮ ಸ್ಥಳೀಯ ಅಥವಾ ರಾಷ್ಟ್ರೀಯ ದೇವರು ಗಳನ್ನು ಬದಿಗಿಟ್ಟು, ಸಾರ್ವತ್ರಿಕ ದೇವರನ್ನು ಪ್ರಾರ್ಥಿಸಲು ಆರಂಭಿಸ ಬೇಕಾಗಿದೆ. ಸಂಸ್ಕೃತದಲ್ಲಿ ತಮ್ಮ ದೇವರನ್ನು ಪೂಜಿಸುವ ಬ್ರಾಹ್ಮಣರ ಹಕ್ಕನ್ನು ಒಪ್ಪಿಕೊಳ್ಳುವಾಗ, ಇಂಗ್ಲಿಷ್ ಬಲ್ಲ ದೇವರನ್ನು ಇಂಗ್ಲಿಷ್‌ನಲ್ಲಿ ಆರಾಸುವ ನಮ್ಮ ಹಕ್ಕನ್ನು ಕೂಡಾ ಸಂಪೂರ್ಣವಾಗಿ ಗೌರವಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ನಾವು ಬಲಾಬಲ ಪ್ರದರ್ಶನಕ್ಕೆ ಸಿದ್ಧರಾಗಬೇಕಾಗುತ್ತದೆ. ದೇವರು ಕೂಡಾ ತಥಾಕಥಿತ ರಾಷ್ಟ್ರೀಯ ಗಡಿಗಳೊಳಗೆ ಬದುಕಬೇಕಾಗುತ್ತದೆಯೆಂದು ಜಗತ್ತಿನ ಯಾವುದೇ ಪುರೋಹಿತ ಶಕ್ತಿಯು ಹೇಳಿಲ್ಲ. ಕೇವಲ ಭಾರತದಲ್ಲಿನ ಬ್ರಾಹ್ಮಣರು ಮಾತ್ರ ದೇವರುಗಳು ಕೂಡಾ ರಾಷ್ಟ್ರೀಯತೆಯನ್ನು ಹೊಂದಿದ್ದಾರೆಂದು ಕತೆಕಟ್ಟಿದರು ಹಾಗೂ ಇಡೀ ವಿಶ್ವವನ್ನು ಸೃಷ್ಟಿಸಿದವನೆಂದು ಹೇಳಲಾದ ಭಗವಂತನನ್ನು ನಂಬುವವರನ್ನು ದೇಶದ್ರೋಹಿಗಳೆಂದು ಬೆದರಿಸಿದರು. ಈ ಶಕ್ತಿಗಳ ಆದಿಮಕಾಲದ ಚಿಂತನೆಯನ್ನು ದಲಿತ ಬಹುಜನರು ಸರ್ವಶಕ್ತಿಯನ್ನು ಕ್ರೋಡೀಕರಿಸಿ ಹೋರಾಡಬೇಕಾಗಿದೆ.
ನಾಮದ ಬಲ
ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ರಾಂತಿಯ ಪ್ರಥಮ ಹೆಜ್ಜೆಯಾಗಿ ದಲಿತ-ಬಹುಜನ ಸಮೂಹಗಳು ತಮ್ಮ ಪ್ರಸಕ್ತ ಅಥವಾ ಪೂರ್ವಿಕರ ವೃತ್ತಿಗಳ ಹೆಸರುಗಳನ್ನು, ಈಗ ಅಸ್ತಿತ್ವದಲ್ಲಿರುವ ಅಥವಾ ಹೊಸ ಹೆಸರಿನ ಜೊತೆ ಸೇರಿಸಿಕೊಳ್ಳಬೇಕಾಗಿದೆ. ಆದರೆ ಅದು ಇಂಗ್ಲಿಷ್‌ಗೆ ಭಾಷಾಂತರಗೊಂಡಿರಬೇಕು. ನಾನು ಕುರುಬ ಸಮುದಾಯದವನಾಗಿದ್ದರಿಂದ ನಾನು ನನ್ನ ಹೆಸರಿನ ಜೊತೆ, ಶೆರ್ಡ್ (ಇಂಗ್ಲಿಷ್ ಭಾಷೆಯಲ್ಲಿ ಕುರುಬನಿಗೆ ಶೆರ್ಡ್ ಎನ್ನಲಾಗುತ್ತದೆ) ಎಂಬ ಹೆಸರನ್ನು ಲಗತ್ತಿಸಿಕೊಂಡಿದ್ದೇನೆ. ನಾನು ನಿಮ್ಮ ಆಧ್ಯಾತ್ಮಿಕ ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿಲ್ಲ ವೆಂಬುದನ್ನು ಬ್ರಾಹ್ಮಣರಿಗೆ ತಿಳಿಸಲು ಇದು ಅತ್ಯುತ್ತಮವಾದ ಮಾರ್ಗವೆಂಬುದಾಗಿ ನಾನು ಭಾವಿಸಿದ್ದೇನೆ. ನನ್ನ ಪೂರ್ವಿಕರ ಮಹಾನ್ ಉತ್ಪಾದಕ ಪರಂಪರೆಯೊಂದಿಗೆ ನನ್ನನ್ನು ಬೆಸೆಯುವ ಮೂಲಕ ನಾನು ವಿಶ್ವಭ್ರಾತೃತ್ವಕ್ಕೆ ಸೇರ್ಪಡೆಗೊಳ್ಳುವೆ ಹಾಗೂ ನಿಮಗಿಂತಲೂ ಅಕ ರಾಷ್ಟ್ರೀಯವಾದಿಯಾಗಿ ಉಳಿಯುವೆ. ನೀವು ನನಗೆ ರಾಷ್ಟ್ರೀಯವಾದವನ್ನು ಬೋಸುವ ಅಗತ್ಯವಿಲ್ಲ.
ಸಮಾನತೆಯ ದೇವರ ವಿಶ್ವಾಸಿಯಾಗಿರುವುದು, ಅಸಮಾನತೆಯನ್ನು ಹುಟ್ಟುಹಾಕುವ ದೇವರು ಗಳನ್ನು ಪೂಜಿಸುವವನಿಗಿಂತ ಹೆಚ್ಚು ಉತ್ತಮನಾದ ರಾಷ್ಟ್ರೀಯವಾದಿಯಾಗಿದ್ದಾನೆ. ಈವರೆಗೂ ಬ್ರಾಹ್ಮಣರು ಮಾಡಿರುವುದು ಅದನ್ನೇ. ಈ ಅಮಾನವೀಯ ಸಂಸ್ಕೃತಿಯ ಕಾರಣದಿಂದಾಗಿ ನನ್ನ ಪೂರ್ವಿಕರು ಅಪಮಾನವನ್ನು ಅನುಭವಿಸಿದರು. ನನ್ನ ಪ್ರಚಲಿತದಲ್ಲಿರುವ ಹೆಸರಿನ ಜೊತೆಗೆ ಸಾರ್ವತ್ರಿಕವಾಗಿ ಅರಿಯಲ್ಪಡುವ ಭಾಷೆಯ ಹೆಸರನ್ನು ಸೇರಿಸಿಕೊಳ್ಳುವ ಮೂಲಕ ನಾನು ಅವರಿಗೆ ಸೂರ್ತಿ ತುಂಬಿದ್ದೇನೆ. ಈಗ ಪೂರ್ವಿಕರ ವೃತ್ತಿಯು ಜಾಗತಿಕವಾಗಿ ಪ್ರಕಟಗೊಳ್ಳುತ್ತದೆ.
ರೈತ ಸಮುದಾಯಗಳು ಶ್ರೀ ಅಥವಾ ಶ್ರೀಮತಿ ಟಿಲ್ಲರ್ ಹೆಸರನ್ನು ಹೊಂದಬಹುದು. ದಲಿತರು ಶ್ರೀಮತಿ ಅಥವಾ ಶ್ರೀ ಕೋಬ್ಲರ್, ಟ್ಯಾನರ್, ಶೂಮೇಕರ್ ಇತ್ಯಾದಿ ಹೆಸರು ಗಳನ್ನು ಹೊಂದಬಹುದು. ಹೀಗೆಯೇ ಕುಂಬಾರರು, ಪಾಟರ್, ಕಮ್ಮಾರರು ಅಥವಾ ಅಕ್ಕಸಾಲಿಗರು ಸ್ಮಿತ್ ಎಂಬ ಉಪನಾಮಗಳನ್ನು ಹೊಂದಬಹುದು. ಹೀಗೆ ಶೋಷಿತ ಸಮುದಾಯಗಳು ವಾಶರ್‌ಮ್ಯಾನ್ (ದೋಬಿ)ನಿಂದ ಹಿಡಿದು ಫಿಶರ್‌ಮ್ಯಾನ್ (ಬೆಸ್ತ)ತನಕವೂ ಇಂಗ್ಲಿಷ್ ಉಪನಾಮಗಳನ್ನು ಹೊಂದಬಹುದಾಗಿದೆ.
ಈ ಕ್ರಮದ ಹೆಸರುಗಳಿಂದ ಉತ್ಪಾದಕ ವೃತ್ತಿಯು ಜಾಗತಿಕ ವಾಗಿ ಗೌರವ ಹಾಗೂ ಘನತೆಯನ್ನು ಪಡೆಯಲಿದೆ. ನಮ್ಮ ಘನತೆರಾಹಿತ್ಯತೆಯು, ಪರಿಶುದ್ಧವಾದ ನೀರಿನಿಂದ ತೊಳೆಯಲ್ಪ ಡಲಿದೆ. ನಮ್ಮ ಮಕ್ಕಳು ಜಾಗತಿಕವಾಗಿ ಪ್ರೀತಿಪಾತ್ರರಾಗುತ್ತಾರೆ. ಜಾತಿಯ ಕೊಳೆಯಿಂದ ಹೊರಬಂದು, ನಮ್ಮಲ್ಲಿ ಪ್ರತಿಯೊಬ್ಬರ ಭವ್ಯವಾದ ಉತ್ಪಾದಕ ವೃತ್ತಿಯ ಮೂಲಕ ನಮ್ಮನ್ನು ಪರಿಚಯಿಸಿ ಕೊಂಡಲ್ಲಿ ದೇವರು ನಮ್ಮನ್ನು ಇನ್ನೂ ಹೆಚ್ಚಾಗಿ ಪ್ರೀತಿಸುವನು. ಯಾಕೆಂದರೆ ಆತನು ಆಹಾರವನ್ನು ಉತ್ಪಾದಿಸದೆ ತಿನ್ನುವವರಿಗಿಂತ, ಉತ್ಪಾದಕರನ್ನು ಹೆಚ್ಚು ಪ್ರೀತಿಸುತ್ತಾನೆ.
ಇಡೀ ಜಗತ್ತಿನ ಬ್ರಾಹ್ಮಣರು ಕೂಡಾ ಮುಂದೆ, ಮಣ್ಣನ್ನು ಆಹಾರವಾಗಿ ಪರಿವರ್ತಿಸುವ ಕಾಯಕದಲ್ಲಿ ಕೈಜೋಡಿಸಲಿದ್ದಾರೆ. ನಮ್ಮ ಎಲ್ಲಾ ಮಹಿಳೆಯರು ಜಾತಿಭೇದವಿಲ್ಲದೆ ಯಾತನೆಯನ್ನು ಅನುಭವಿಸುತ್ತಿದ್ದಾರೆ ಹಾಗೂ ಋತುಸ್ರಾವ ಹಾಗೂ ಶಿಶು ಜನನದ ಸಮಯದಲ್ಲಿ ಈಗಲೂ ಅಸ್ಪಶ್ಯತೆಯನ್ನು ಅನುಭವಿಸುತ್ತಿದ್ದಾರೆ. ಯಾಕೆಂದರೆ, ಅವರ ದೇಹದಿಂದ ‘ಸೃಷ್ಟಿಶೀಲವಾದ ಮಣ್ಣು’ ಹೊರಬರುತ್ತದೆ. ಸಮಾನತೆಯ ಆರೋಗ್ಯಕರ ವಾತಾವರಣದಲ್ಲಿ ಅವರು ಮುಗುಳ್ನಗೆ ಬೀರಲಿದ್ದಾರೆ ಹಾಗೂ ನಮ್ಮ ಮಕ್ಕಳನ್ನು ಬೆಳೆಸಲಿದ್ದಾರೆ. ಆಗ, ಜಗತ್ತು ವೈಭವಶಾಲಿಯಾಗಲಿದೆ ಹಾಗೂ ದೇವರ ಸಾಮ್ರಾಜ್ಯವೆಂದೆನಿಸಿಕೊಳ್ಳಲಿದೆ. ದೇವರು ಭಾರತವನ್ನು ಆಶೀರ್ವದಿಸಲಿ.
ಕೃಪೆ:scroll.in







