ಸಮುದ್ರಕ್ಕೆ ಕಡಿವಾಣ ಹೇಗೆ?

ಬದ್ರುದ್ದೀನ್ ಸರ್ಕಾರ್ ಪಶ್ಚಿಮ ಬಂಗಾಳದ ಸುಂದರಬನ ನದಿಮುಖಜ ಭೂಮಿಯ ಅಂಚಿನಲ್ಲಿರುವ ಬಾಲಿ ದ್ವೀಪದ ಕರಾವಳಿಯಲ್ಲಿ ಮ್ಯಾಂಗ್ರೋ ಸಸಿಗಳನ್ನು ನೆಡುವುದರಲ್ಲಿ ವ್ಯಸ್ತನಾ ಗಿದ್ದ. ಅಲೆಗಳು ಎತ್ತರಕ್ಕೆ ಏರುತ್ತಿವೆ. ‘‘ನನ್ನ ಜಮೀನು, ನನ್ನ ಮನೆ ಮತ್ತು ನನ್ನ ದ್ವೀಪವನ್ನು ಉಳಿಸಲು ನನಗಿರುವ ದಾರಿ ಇದೊಂದೆ’’ ಎಂದು ನಿವೃತ್ತ ಶಾಲಾ ಶಿಕ್ಷಕನಾಗಿರುವ ಆತ ಹೇಳುತ್ತಾನೆ. ನೆದರ್ಲ್ಯಾಂಡ್ಸ್‌ನ ಡೋರ್‌ಡ್ರೆಶ್ ನಗರದ ತಜ್ಞರು ಅಲ್ಲಿನ ನಿವಾಸಿಗಳನ್ನು ಏರುತ್ತಿರುವ ಸಮುದ್ರ ಮಟ್ಟದ ಪರಿಣಾಮದ ಬಗ್ಗೆ ಜಾಗರೂಕಗೊಳಿಸುವುದಾದರೂ ಹೇಗೆ ಎಂಬ ಬಗ್ಗೆ ಚಿಂತಿತರಾಗಿದ್ದಾರೆ. ‘‘ನಮ್ಮ ಅಧ್ಯಯನದ ಪ್ರಕಾರ ನಮ್ಮ ತಡೆ ಗೋಡೆಗಳು 2050ರ ನಂತರ ಹಲವು ಮನೆಗಳನ್ನು ನೀರಿನಲ್ಲಿ ಮುಳುಗದಂತೆ ರಕ್ಷಿಸಲು ಸಾಧ್ಯವಾಗದು’’ ಎಂದು ಮುನ್ಸಿಪಲ್ ಕಾರ್ಪೊರೇಶನ್‌ನ ಅಕಾರಿ ತಿಳಿಸುತ್ತಾರೆ. ‘‘ನಾವು ನಿವಾಸಿಗಳಿಗೆ ಕೆಲವೊಂದು ಮಾಹಿತಿಗಳನ್ನು ನೀಡಿದ್ದೇವೆ, ಆದರೆ ಮತ್ತಷ್ಟು ವಿವರಿಸುವಾಗ ಅವರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬುದು ನಮಗೆ ತಿಳಿದಿಲ್ಲ’’ ಎಂದವರು ಹೇಳುತ್ತಾರೆ. ‘‘ನಾವು ಸಮುದ್ರವನ್ನು ತಡೆಯಲು ಕೇವಲ ತಡೆಗೋಡೆಗಳನ್ನು ಮಾತ್ರ ಅವಲಂಬಿಸಿಲ್ಲ’’ ಎಂದು ಯೂರೋಪ್‌ನ ರೊಟರ್‌ಡಾಮ್ ಬಂದರಿನ ಅಕಾರಿಯೊಬ್ಬರು ಹೇಳುತ್ತಾ, ಹಡಗುಗಳು ಆಗಮಿಸುವಾಗ ಮೇಲಕ್ಕೆತ್ತಬಹುದಾದ ತಡೆಗೋಡೆಯತ್ತ ಬೆರಳು ತೋರಿಸುತ್ತಾರೆ.
ನೀರನ್ನು ರೋಟರ್‌ಡಾಮ್‌ನಿಂದ ಬೇರೆಡೆಗೆ ತಿರುಗಿಸಲು ನಾವು ಅಲೆಗಳನ್ನು ಮತ್ತು ಪ್ರವಾಹಗಳನ್ನು ಅಭ್ಯಸಿಸುತ್ತಿದ್ದೇವೆ ಮತ್ತು ಕರಾವಳಿ ತೀರದಲ್ಲಿ ಮರಳನ್ನು ಸುರಿಯುತ್ತಿದ್ದೇವೆ ಎಂದವರು ಹೇಳುತ್ತಾರೆ. ಆದರೆ ಇದು ಆರ್ಥಿಕವಾಗಿ ದುರ್ಬಲವಾಗಿರುವ ಡೋರ್‌ಡ್ರೆಶ್‌ನಂಥಾ ನಗರಗಳಲ್ಲಿ ಕಷ್ಟನಷ್ಟಗಳನ್ನು ತರಬಹುದು. ಏರುತ್ತಿರುವ ಸಮುದ್ರ ಜನರನ್ನು ಎರಡು ವಿಧಗಳಲ್ಲಿ ಕಾಡುತ್ತದೆ. ಒಂದು ಅದು ಕರಾವಳಿಯನ್ನು ಕೊರೆಯುತ್ತದೆ ಮತ್ತೆ ಎರಡನೆಯದಾಗಿ ಅದು ಪದೇಪದೇ ಮತ್ತು ತೀವ್ರವಾದ ಅಲೆಗಳನ್ನು ಮತ್ತು ಪ್ರವಾಹಗಳನ್ನು ಉಂಟು ಮಾಡುತ್ತದೆ. ಹವಾಮಾನ ವೈಪರೀತ್ಯದಿಂದ ಸಮುದ್ರ ಮಟ್ಟ ಏರುತ್ತಿರುವು ದರಿಂದ ಜಗತ್ತಿನಾದ್ಯಂತ ತಜ್ಞರು ತಮ್ಮ ಕರಾವಳಿಗಳನ್ನು ರಕ್ಷಿಸಲು ಇರುವಂತಹ ಅತ್ಯುತ್ತಮ ವಿಧಾನದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ: ಸಮುದ್ರ ಗೋಡೆ ಮತ್ತು ದಡಗಳು ಅಥವಾ ಮ್ಯಾಂಗ್ರೊವ್, ಮರಳು ಮತ್ತು ಹವಳ. ಶೇಕಡಾ 40 ಮಾನವಕುಲ ಕರಾವಳಿ ಭಾಗದಲ್ಲಿ ಮುಖ್ಯವಾಗಿ ಕರಾವಳಿ ನಗರಗಳಲ್ಲಿ ತುಂಬಿರುವುದರಿಂದ ಮತ್ತು ಬಿಸಿಯಾಗುತ್ತಿರುವ ಭೂಮಿಯಲ್ಲಿ ಸಮುದ್ರ ಮಟ್ಟವು ಈಗಾಗಲೇ 1993ರಿಂದ 206ಮಿ.ಮೀ.ನಿಂದ 209ಮಿ.ಮೀ ವರೆಗೆ ಏರಿರುವುದರಿಂದ ಕರಾವಳಿಗಳನ್ನು ರಕ್ಷಿಸುವುದು ಅತ್ಯಂತ ಕ್ಲಿಷ್ಟಕರ.
ರೊಟರ್‌ಡಾಮ್‌ನಲ್ಲಿ ಮೇ 10-13ರಂದು ನಡೆದ ‘ಅಡಾಪ್ಟೇಶನ್ ್ಯೂಚರ್ಸ್’ ಸಮಾವೇಶದಲ್ಲಿ ಈ ಬಗ್ಗೆ ಇರುವ ವಿಕಲ್ಪಗಳನ್ನು ಚರ್ಚಿಸಲಾಯಿತು. ಶ್ರೀಮಂತ ದೇಶಗಳ ಯೋಜನಾಕಾರರು ಸಮುದ್ರ ಗೋಡೆ ಮತ್ತು ಕಟ್ಟೆಗಳನ್ನು ಆರಿಸಿಕೊಂಡರು. 2012ರಲ್ಲಿ ಸ್ಯಾಂಡಿ ಸುಂಟರಗಾಳಿಯ ಹೊಡೆತ ತಿಂದಿರುವ ನ್ಯೂಯಾರ್ಕ್ ನಗರ ಈಗಾಗಲೇ ತನ್ನ ಗೋಡೆಗಳನ್ನು ಭದ್ರಪಡಿಸುತ್ತಿದೆ. 2005ರಲ್ಲಿ ಕತ್ರೀನಾ ಸುಂಟರಗಾಳಿಯಿಂದಾಗಿ ನೆರೆಯಿಂದ ಬಸವಳಿದ ಲೂಸಿಯಾನ ಕೂಡಾ ತನ್ನ ರಕ್ಷಣಾ ಗೋಡೆಯನ್ನು ಏರಿಸುತ್ತಿದೆ. ಲಂಡನ್‌ನಲ್ಲಿ ತೇಲುವ ಗೋಡೆ ಯಿದ್ದು ಇದು ನಗರದ ಹಿರಿಮೆ ಕೂಡಾ ಆಗಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಯೋಜನಾಕಾರರು ನಾವು ಕೂಡಾ ಜಗತ್ತಿನಾದ್ಯಂತ ಅಂಥದ್ದೇ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೇ ಎಂಬ ಬಗ್ಗೆ ಯೋಚನೆಯಲ್ಲಿದ್ದಾರೆ. ಮುಂಬೈ, ಕರಾಚಿ, ಶಾಂಘೈ ಮತ್ತು ರಿಯೋ ಡಿ ಜೆನೈರೊ ಇದೇ ರೀತಿ ಎತ್ತರದ ಗೋಡೆಗಳನ್ನು ನಿರ್ಮಿಸಬೇಕೇ? ಅದು ಆರ್ಥಿಕವಾಗಿ ಸಾಧ್ಯವೇ?
ಪರಿಸ್ಥಿತಿಯನ್ನು ಎದುರಿಸಲು ತಜ್ಞರ ಒಂದು ಪಂಗಡ ವಿಭಿನ್ನ ಕ್ರಮವನ್ನು ಸೂಚಿಸುತ್ತದೆ: ಮ್ಯಾಂಗ್ರೊವ್‌ಗಳನ್ನು ಮತ್ತು ಸಮುದ್ರ ಹುಲ್ಲನ್ನು ಕರಾವಳಿ ಭಾಗದಲ್ಲಿ ನೆಡುವ ಮೂಲಕ ಕೊರೆತವನ್ನು ನಿಯಂತ್ರಿಸುವುದು ಮತ್ತು ಡಚ್ಚರು ಹಲವು ಶತಮಾನಗಳಿಂದ ಮಾಡಿಕೊಂಡು ಬಂದಿರುವಂತೆ ಪ್ರವಾಹಗಳನ್ನು ದೂರ ಮಾಡಲು ಮರಳನ್ನು ಸುರಿಯುವುದು. ಎಲ್ಲ ಕರಾವಳಿಗಳಿಗೆ ಒಂದೇ ಪರಿಹಾರ ಸಾಧ್ಯವಿಲ್ಲ. ಉದಾಹರಣೆಗೆ, ಮ್ಯಾಂಗ್ರೊವ್ ಆಗಲಿ ಅಥವಾ ಹವಳಗಳಾಗಲಿ ಉಷ್ಣವಲಯದ ನೀರಿನಿಂದ ಹೊರಗಡೆ ಬೆಳೆಯು ವುದಿಲ್ಲ. ಎತ್ತರದ ಸಮುದ್ರ ಗೋಡೆ ನಿರ್ಮಿಸಿದರೆ ಬೀಚ್ ಪ್ರವಾಸೋದ್ಯಮ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರ ಸಂಕಷ್ಟಕ್ಕೀಡಾಗುತ್ತದೆ. ಇಂಥಾ ಗೋಡೆಗಳು ಎಷ್ಟು ಎತ್ತರ ಇರಬೇಕು? ಹವಾಮಾನ ಬದಲಾವಣೆಯಿಂದ ಸಮುದ್ರವು ಹೇಗೆ ಮತ್ತು ಯಾವಾಗ ಏರುತ್ತದೆ ಎಂಬುದಕ್ಕೆ ಬಹಳಷ್ಟು ಮುನ್ಸೂಚನೆಗಳನ್ನು ನೀಡಲಾಗಿದೆ.
ಇಂತಹ ಸಂದರ್ಭದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ, ಆದರೂ ಬಹುತೇಕ ಯೋಜನಾಕಾರರು ತ್ವರಿತವಾಗಿ ಏನಾದರೂ ಕ್ರಮ ತೆಗೆದುಕೊಳ್ಳಲೇಬೇಕೆಂಬುದನ್ನು ಒಪ್ಪುತ್ತಾರೆ. ಈ ಸಮಯದ ಸಹಮತವೆಂದರೆ ಪ್ರಯತ್ನಗಳ ಸಂಯೋಜನೆ ಬಹುಶಃ ಸಹಾಯಕವಾಗಬಹುದು. ಮೊದಲಿಗೆ ಸರಳವಾದ ದಾರಿಗಳನ್ನು ಬಳಸುವುದು ಮುಖ್ಯವಾಗಿ ಮ್ಯಾಂಗ್ರೊವ್ ನೆಡುವುದು ಮತ್ತು ಹವಳದ ದಿಬ್ಬಗಳನ್ನು ರಕ್ಷಿಸುವುದು ಮತ್ತು ನಂತರ ಗೋಡೆಗಳನ್ನು ಮತ್ತು ಕಟ್ಟೆಗಳನ್ನು ನಿರ್ಮಿಸುವುದು ಮುಖ್ಯವಾಗಿ ನಗರಗಳು ಮತ್ತು ವೌಲ್ಯಯುತ ಆಸ್ತಿಗಳ ಸುತ್ತ. ರೋಟರ್‌ಡಾಮ್‌ಗಿಂತ ಬಹಳ ದೂರ ಬಂಗಾಳಕೊಲ್ಲಿಯಲ್ಲಿ ರುವ ಬಾಲಿ ದ್ವೀಪದಲ್ಲಿ ಸರ್ಕಾರ್ ತನ್ನ ಮನೆ ಮತ್ತು ಜಮೀ ನನ್ನು ಏರುತ್ತಿರುವ ಸಮುದ್ರದಿಂದ ರಕ್ಷಿಸುತ್ತಿರುವ ಐದು ಮೀಟರ್ ಎತ್ತರದ ಕಟ್ಟೆಯ ಮೇಲೆ ಬಂಗಾಳ ಕೊಲ್ಲಿಗೆ ಮುಖ ಮಾಡಿ ನಿಂತಿದ್ದಾರೆ. ತಾನು ಭೂಗೋಳಶಾಸ ಓದಿಸುತ್ತಿದ್ದೆ ಎಂದಾತ ನೆನಪಿಸಿಕೊಳ್ಳುತ್ತಾರೆ. ‘‘ನಮಗೆ ಸಮುದ್ರವು ಈ ರೀತಿ ಏರಿಕೆಯಾಗುತ್ತದೆ ಎಂಬುದು ತಿಳಿದಿರಲೂ ಇಲ್ಲ ಮತ್ತು ನಾವದನ್ನು ಮಕ್ಕಳಿಗೆ ಬೋಸಿದ್ದೂ ಇಲ್ಲ. ಇದು ಆಧುನಿಕ ಜಗತ್ತು. ನಿಮಗೆ ಆ ಮರದ ಕೊರಡು ಕಾಣಿಸುತ್ತಿದೆಯಾ?’’ ಎಂದು ಹೇಳುತ್ತಾ ಅದೇನನ್ನೋ ಅಸ್ಪಷ್ಟವಾಗಿ ಕಾಣಿಸುತ್ತಿರುವುದರತ್ತ ಬೆರಳು ತೋರಿಸಿ, ‘‘ನಮ್ಮ ಮನೆ ಮೊದಲು ಅಲ್ಲಿತ್ತು, ಆದರೆ ಸಮುದ್ರ ಅದನ್ನು ನುಂಗಿ ಬಿಟ್ಟಿತು. ಈಗ ನಮ್ಮನ್ನು ಮತ್ತೆ ಹಿಂದಕ್ಕೆ ಸರಿಯುವಂತೆ ಒತ್ತಡ ಹೇರಿದೆ’’ ಎಂದಾತ ತಿಳಿಸಿದರು. ಚಂಡಮಾರುತದ ಸಮಯದಲ್ಲಿ ಅಲೆಗಳು ಬಂದು ಕಟ್ಟೆಗೆ ಬಡಿಯುತ್ತವೆ. ಉಪ್ಪುನೀರು ಸರ್ಕಾರ್‌ನ ಭತ್ತದ ಗದ್ದೆ ಮತ್ತು ಶುದ್ಧ ನೀರಿನ ಬಾವಿಯನ್ನು ಹಾಳುಗೈದಿದೆ. ಆತ ಮತ್ತಾತನ ಕುಟುಂಬ ಶೀಘ್ರದಲ್ಲೇ ಕೊಲ್ಕತ್ತಾಗೆ ಪ್ರಯಾಣಿಸಲಿದ್ದಾರೆ. ಅವರು ಕೂಡಾ ಹವಾಮಾನ ನಿರಾಶ್ರಿತರಾಗಲಿದ್ದಾರೆ.
ಕೃಪೆ: thewire.in







