ಉಡುಪಿ: ಸಿಡಿಲು ಬಡಿದು ಹಲವೆಡೆ ಹಾನಿ
ಉಡುಪಿ, ಜೂ.3: ಗುರುವಾರ ಸಂಜೆಯಿಂದ ಸುರಿದು ಸಾಧಾರಣ ಮಳೆ ಹಾಗೂ ಸಿಡಿಲಿನಿಂದ ಜಿಲ್ಲೆಯ ಅನೇಕ ಕಡೆಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಕೊಟ್ಟಿಗೆಯಲ್ಲಿದ್ದ ದನ ಸಾವಿಗೀಡಾದ ಬಗ್ಗೆ ವರದಿಯಾಗಿದೆ.
ಶುಕ್ರವಾರ ಸಂಜೆ 4 ಗಂಟೆಗೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮ ಕಾವೇರಡ್ಕದ ಲಕ್ಷ್ಮೀ ಸಫಲಿಗರ ಮನೆಗೆ ಸಿಡಿಲು ಬಡಿದು 50 ಹೆಂಚು ಹಾಗೂ ಗೋಡೆಗಳಿಗೆ ಹಾನಿಯಾಗಿರುವುದಾಗಿ ವರದಿಯಾಗಿದೆ. ಇದರಿಂದ 5,000 ರೂ. ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ. ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ಗುರುವಾರ ಸಂಜೆ ಜಯ ಎನ್.ಭಂಡಾರಿಯ ಮನೆಯ ವಿದ್ಯುತ್ ಸಂಪಿಗೆ ಸಿಡಿಲು ಬಡಿದು ಸಂಪೂರ್ಣ ಹಾನಿಯಾಗಿದ್ದು, 15,000 ರೂ. ನಷ್ಟವಾಗಿದೆ.
ಉಡುಪಿ ತಾಲೂಕು ಕುಕ್ಕೆಹಳ್ಳಿ ಗ್ರಾಮದ ಚೆಲ್ಲಬೆಟ್ಟು ಎಂಬಲ್ಲಿರುವ ನಾಗರಾಜ ಹೆಬ್ಬಾರ್‌ರ ಮನೆಯ ಕೊಟ್ಟಿಗೆಗೆ ಗುರುವಾರ ರಾತ್ರಿ 9:30ರ ಸುಮಾರಿಗೆ ಸಿಡಿಲು ಬಡಿದು ಅಲ್ಲಿ ಕಟ್ಟಿ ಹಾಕಿದ್ದ ದನ ಸಾವಿಗೀಡಾಗಿದೆ. ಇದರಿಂದ 25,000ರೂ. ನಷ್ಟದ ಅಂದಾಜು ಮಾಡಲಾಗಿದೆ.
ಬೆಳ್ಮಣ್‌ನಲ್ಲಿ ಬುಧವಾರ ಮಧ್ಯರಾತ್ರಿ ಮನೆಯೊಂದಕ್ಕೆ ಸಿಡಿಲು ಬಡಿದು ವಿದ್ಯುತ್ ಸ್ವಿಚ್‌ಬೋರ್ಡ್ ಬಳಿ ಇದ್ದ ನಾರಾಯಣ ದೇವಾಡಿಗ (55) ಎಂಬವರು ಮೃತಪಟ್ಟಿದ್ದರು.
ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಆಸುಪಾಸಿನ ಅನೇಕ ಮನೆಗಳಿಗೆ ಗುರುವಾರ ಸಂಜೆ ವೇಳೆ ಸಿಡಿಲು ಬಡಿದು ಅಪಾರ ಹಾನಿಯಾಗಿದೆ. ಸಿದ್ದಾಪುರದ ಚಂದ್ರಕಾಂತ ಭಂಡಾರಿಯ ಮನೆ ಹಾಗೂ ಕೊಟ್ಟಿಗೆಗೆ ಸಿಡಿಲು ಬಡಿದು 40,000ರೂ.ನಷ್ಟ ಸಂಭವಿಸಿದೆ. ಸಿಡಿಲಿನಿಂದ ಕೊಟ್ಟಿಗೆ ಪಕ್ಕದಲ್ಲಿದ್ದ ಬೈಹುಲ್ಲಿನ ಸಂಗ್ರಹಕ್ಕೆ ಬೆಂಕಿಬಿದ್ದು ಕೊಟ್ಟಿಗೆ ಸುಟ್ಟುಹೋಗಿದೆ.
ಸಿದ್ದಾಪುರದ ಜನ್ಸಾಲೆಯ ಮಹಾಬಲ ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ವಯರಿಂಗ್ ಹಾಗೂ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿ ರುವುದಾಗಿ ತಿಳಿದುಬಂದಿದೆ.
ಮಳೆ ಪ್ರಮಾಣ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸರಾಸರಿ 14.2ಮಿ.ಮಿ. ಮಳೆಯಾಗಿದೆ. ಉಡುಪಿಯಲ್ಲಿ 11.7ಮಿ.ಮೀ., ಕಾರ್ಕಳದಲ್ಲಿ 20.6ಮಿ.ಮೀ. ಹಾಗೂ ಕುಂದಾಪುರದಲ್ಲಿ 10.2ಮಿ.ಮೀ. ಮಳೆಯಾಗಿದೆ.







