ಕುಸಿಯುವ ಭೀತಿಯಲ್ಲಿ ಕುಂಬಳೆ ಬಸ್ ನಿಲ್ದಾಣ ಸಮುಚ್ಚಯ ಕಟ್ಟಡ!
ಕಾಸರಗೋಡು, ಜೂ.3: ಕುಂಬಳೆ ಬಸ್ ನಿಲ್ದಾಣ ಸಮುಚ್ಚಯ ಕಟ್ಟಡ ಅಪಾಯದಲ್ಲಿದ್ದು, ಯಾವುದೇ ಸಂದರ್ಭ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಮಳೆಗಾಲ ಆರಂಭವಾಗಿರುವುದರಿಂದ ಮತ್ತಷ್ಟು ಆತಂಕ ಹೆಚ್ಚಿಸಿದೆ. ಎರಡು ದಿನಗಳ ಹಿಂದೆ ಕಾಂಕ್ರಿಟ್ ತುಂಡು ಕಳಚಿ ಬಿದ್ದಿದ್ದು, ಪ್ರಯಾಣಿಕರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದರು.
ಎರಡು ಮೂರು ವರ್ಷಗಳಿಂದ ನಿಲ್ದಾಣದ ಕೆಲಭಾಗಗಳು ಕುಸಿಯುತ್ತಲೇ ಇದೆ. ಅಪಾಯ ಭೀತಿಯಲ್ಲಿರುವ ಕುಂಬಳೆ ಬಸ್ ನಿಲ್ದಾಣ ಸಮುಚ್ಚಯವನ್ನು ಕೆಡವುವಂತೆ ಹಲವು ವರ್ಷಗಳಿಂದ ಒತ್ತಾಯ ಕೇಳಿಬರುತ್ತಿದೆ. ಆದರೆ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿಲ್ಲ. ಎರಡು ತಿಂಗಳ ಹಿಂದೆ ಕುಂಬಳೆ ಪಂಚಾಯತ್ ಕಾರ್ಯದರ್ಶಿ ಕಟ್ಟಡದೊಳಗೆ ಪ್ರಯಾಣಿಕರು ಪ್ರವೇಶಿಸದಂತೆ ಫಲಕ ಅಳವಡಿಸಿದ್ದರು. ಅಲ್ಲದೆ ಬಸ್ ನಿಲ್ದಾಣದೊಳಗೆ ಪ್ರವೇಶಿಸದಂತೆ ಕಲ್ಲು ಕಟ್ಟಲಾಗಿತ್ತು. ಆದರೆ ಪ್ರಯಾಣಿಕರಿಗೆ ನಿಲ್ಲಲು ಬೇರೆ ಸ್ಥಳ ಇಲ್ಲದಿರುವುದರಿಂದ ಈ ನಿಲ್ದಾಣದಲ್ಲೇ ನಿಲ್ಲಬೇಕಾದ ಸ್ಥಿತಿಯುಂಟಾಗಿದೆ. ಈ ಕಟ್ಟಡ ಸಮುಚ್ಚಯದಲ್ಲಿ 25ಕ್ಕೂ ಅಧಿಕ ವ್ಯಾಪಾರ ಮಳಿಗೆಗಳಿವೆ.
ಕಟ್ಟಡ ಅಪಾಯದ ಸೂಚನೆ ನೀಡುತ್ತಿದ್ದರೂ ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲುತ್ತಿದ್ದು ಭೀತಿಗೆ ಕಾರಣವಾಗಿದೆ. ಇದೀಗ ಶಾಲೆ ಪ್ರಾರಂಭಗೊಂಡಿರುವುದರಿಂದ ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣಿಕರು ಈ ಬಸ್ ನಿಲ್ದಾಣದತ್ತ ಸುಳಿಯುತ್ತಿದ್ದಾರೆ. ಒಟ್ಟಿನಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಕುಂಬಳೆ ಪೇಟೆಗೆ ಸೂಕ್ತ ಬಸ್ ನಿಲ್ದಾಣ ಇಲ್ಲವಿಲ್ಲದಿರುವುದು ವಿಪರ್ಯಾಸ.





