ಅಪಾಯಕ್ಕೆ ಆಹ್ವಾನ ನೀಡುವ ಕೊಳವೆ ಬಾವಿ
ಸುಳ್ಯ, ಜೂ.3: ಇಲ್ಲಿನ ಶಾಸ್ತ್ರಿ ವೃತ್ತದ ಬಳಿ ರಿಕ್ಷಾ ಪಾರ್ಕಿಂಗ್‌ನ ಪಕ್ಕ ಇರುವ ಕೊಳವೆ ಬಾವಿಯ ಸುತ್ತ ಮಣ್ಣು ಕುಸಿದಿದ್ದು, ಅಪಾಯಕಾರಿ ಸ್ಥಿತಿ ನಿರ್ಮಾಣಗೊಂಡಿದೆ. ಕೊಳವೆ ಬಾವಿಯ ಸುತ್ತಲು ಮಣ್ಣು ಕುಸಿದಿದ್ದು, ದೊಡ್ಡ ಹೊಂಡವೊಂದು ನಿರ್ಮಾಣವಾಗಿದೆ. ಸ್ಥಳೀಯ ರಿಕ್ಷಾ ಚಾಲಕರು ಕಲ್ಲು ತುಂಬಿಸಿದ್ದರೂ ಹಾಕಿದ ಕಲ್ಲು ಹೊಂಡದಲ್ಲಿ ಹೂತು ಹೋಗಿ ಮತ್ತಷ್ಟು ಕುಸಿತ ಉಂಟಾಗುತ್ತಿದೆ. ಶಾಲಾ ಕಾಲೇಜುಗಳು ಪಕ್ಕದಲ್ಲಿದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಇದೇ ಕೊಳವೆ ಬಾವಿಯ ಪಕ್ಕದಲ್ಲಿಯೇ ಸಂಚರಿಸುತ್ತಿದ್ದಾರೆ. ಸಣ್ಣ ಮಕ್ಕಳು ಆಟವಾಡುತ್ತಾ ಈ ಕೊಳವೆ ಬಾವಿಗೆ ಬೀಳುವ ಅಪಾಯವೂ ಇದೆ. ಮುನ್ನೆಚ್ಚರಿಕೆಯಾಗಿ ರಿಕ್ಷಾ ಚಾಲಕರು ತಾತ್ಕಾಲಿಕವಾಗಿ ದೊಡ್ಡ ಕಲ್ಲುಗಳನ್ನಿಟ್ಟು ಅಪಾಯವನ್ನು ತಪ್ಪಿಸಿದ್ದಾರೆ. ಆದರೆ ಇದಕ್ಕೆ ಶಾಶ್ವತ ಪರಿಹಾರವನ್ನು ಪಟ್ಟಣ ಪಂಚಾಯತ್ ಆಡಳಿತ ಮಾಡಬೇಕು ಎಂದು ರಿಕ್ಷಾ ಚಾಲಕ ಅಕ್ಷತ್ ಕ್ರಾಸ್ತಾ ಒತ್ತಾಯಿಸಿದ್ದಾರೆ.
Next Story





