ಕೇಂದ್ರದಿಂದಲೇ ‘ಮಂಗಳೂರು ಬಂದರು ಅಭಿವೃದ್ಧಿ’ ಕೇಂದ್ರಸಚಿವ ನಿತಿನ್ ಗಡ್ಕರಿ ಸ್ಪಷ್ಟನೆೆ

ಬೆಂಗಳೂರು, ಜೂ. 3: ‘ಮಂಗಳೂರು ಬಂದರು ಅಭಿವೃದ್ಧಿ ಕಾಮಗಾರಿ ಯನ್ನು ಖಾಸಗಿ ಕಂಪೆನಿಗೆ ನೀಡುವುದಿಲ್ಲ. ಕೇಂದ್ರ ಸರಕಾರದಿಂದಲೇ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಬಂದರು ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಇಂದಿಲ್ಲಿ ಸ್ಪಷ್ಟಪ ಡಿಸಿದ್ದಾರೆ.
ಶುಕ್ರವಾರ ವಿಶ್ವೇಶ್ವರಯ್ಯ ಟವರ್‌ನಲ್ಲಿರುವ ರಾಷ್ಟ್ರೀಯ ಮಾಹಿತಿ ಕೇಂದ್ರ ಸಭಾಂಗಣದಲ್ಲಿ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ವೀಡಿಯೊ ಕಾನ್ಫ್ ರೆನ್ಸ್‌ನಲ್ಲಿ ಮಾಧ್ಯಮದ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದ ಅವರು, ಮಂಗಳೂರು ಬಂದರು ಅಭಿವೃದ್ಧಿಗೆ ಖಾಸಗಿ ಕಂಪೆನಿಗೆ ನೀಡಲಾಗುತ್ತಿದೆ ಎಂಬ ವಾದ ಸುಳ್ಳು ಎಂದು ತಳ್ಳಿ ಹಾಕಿದರು.
ಬಂದರು ಹಾಗೂ ಭೂ ಸಾರಿಗೆ ವಿಷಯದಲ್ಲಿ ಕೆಲ ಯೋಜನೆ ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾ ಗುತ್ತಿದೆ. ಆದರೆ, ಎಲ್ಲ ಯೋಜನೆಗಳನ್ನು ಅದೇ ಮಾದರಿಯಲ್ಲೇ ಕೈಗೊಳ್ಳಲಾ ಗುತ್ತದೆ ಎಂಬುದು ಸರಿಯಲ್ಲ. ಭದ್ರತೆ ದೃಷ್ಟಿಯಿಂದ ಮಂಗಳೂರು ಬಂದರನ್ನು ಕೇಂದ್ರ ಸರಕಾರದಿಂದಲೇ ಅಭಿವೃದ್ಧಿಪಡಿಸಲಾ ಗುವುದು ಎಂದರು.
ಬೇಲೆಕೇರಿ ಬಂದರು ಅಭಿವೃದ್ಧಿ: ಕಾರವಾರದ ಬೇಲೆಕೇರಿ ಬಂದರನ್ನು ನಾಲ್ಕು ಸಾವಿರ ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿ ಕರ್ನಾಟಕದ ಹೆಬ್ಬಾಗಿಲನ್ನಾಗಿ ಮಾಡಲಾಗುವುದು ಎಂದ ಅವರು, ಈ ಬಂದರು ಅಭಿವೃದ್ಧಿಯಿಂದ ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳಲ್ಲಿ ಕೈಗಾರಿಕಾ ಬೆಳವಣಿಗೆಗೆ ಸಹಕಾರಿ ಎಂದು ನುಡಿದರು.
ಬೇಲೆಕೇರಿ ಬಂದರು ಅಭಿವೃದ್ಧಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ಹಸಿರು ಪೀಠದಲ್ಲಿ ಆಕ್ಷೇಪಣೆಯಿದೆ. ಈ ಸಂಬಂಧ ಸಿಎಂ ಸಿದ್ಧರಾಮಯ್ಯನವರ ಗಮನಕ್ಕೆ ತರಲಾಗಿದೆ. ಪರಿಸರ ಇಲಾಖೆ ಆಕ್ಷೇಪಣೆ ತೆರವುಗೊಳಿಸಿ ಬಂದರು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪೆಟ್ರೋ-ಕೆಮಿಕಲ್ ಹಬ್
ಸಾಗರ್‌ಮಾಲಾ ಯೋಜನೆಯಡಿ 220 ಕೋಟಿ ರೂ.ವೆಚ್ಚದಲ್ಲಿ ಮಂಗಳೂರಿನಲ್ಲಿ ಪೆಟ್ರೋ-ಕೆಮಿಕಲ್ ಹಬ್ ಯೋಜನೆ ರೂಪಿಸಲಾಗಿದೆ. ಪೆಟ್ರೋ-ಕೆಮಿಕಲ್ ಹೊಸ ಘಟಕಗಳನ್ನು ಆರಂಭಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.
ಗಣಿ ಉದ್ಯಮಕ್ಕೆ ಅನುಕೂಲವಾಗಲು ಹೊಸಪೇಟೆ- ಬಳ್ಳಾರಿ-ಅಂಕೋಲ ನಡುವೆ 1ಸಾವಿರ ಕೋಟಿ ರೂ.ವೆಚ್ಚದಲ್ಲಿ ರೈಲು, ರಸ್ತೆ ಸಂಪರ್ಕ ಕಲ್ಪಿಸುವ ಯೋಜನೆ ಕೈಗೆತ್ತಿಕೊಳ್ಳಲಾ ಗುವುದು ಎಂದ ಅವರು, ಬೇಲೆಕೇರಿ-ಬಳ್ಳಾರಿ ನಡುವೆ 1,400 ಕೋಟಿ ರೂ.ವೆಚ್ಚದಲ್ಲಿ ರಸ್ತೆ-ರೈಲು ಸಂಪರ್ಕ ಕಲ್ಪಿಸುವ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿನ ಕಾವೇರಿ, ಕೃಷ್ಣಾ, ತುಂಗಭದ್ರಾ ನದಿಯನ್ನು ಜಲ ಸಾರಿಗೆಗೆ ಪರಿಗಣಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಹೊಸ ಜಲ ಸಾರಿಗೆ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದ ಅವರು, ಕಾರವಾರ ಬಳಿಯ ಲೈಟ್ ಹೌಸ್ ಪ್ರವಾಸ ತಾಣವನ್ನಾಗಿ ಅಭಿವೃದ್ಧಿಪಡಿ ಸಲಾಗುವುದು ಎಂದರು.
ಶಿರಾಡಿಘಾಟ್ ರಸ್ತೆ ಚತುಷ್ಪಥ
ಮಳೆಗಾಲದಲ್ಲಿ ಸಂಚಾರಕ್ಕೆ ಸಂಕಷ್ಟ ತಂದೊಡ್ಡುತ್ತಿರುವ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೇರಿಸುವ ಕಾಮಗಾರಿ ಆರಂಭ ಗೊಂಡಿದೆ. 1,200 ಕೋಟಿ ರೂ.ವೆಚ್ಚದಲ್ಲಿ ಆ ಭಾಗದಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಶಿರಾಡಿ ಘಾಟ್‌ನಿಂದ ಮಂಗಳೂರು ಮಾರ್ಗವಾಗಿ ಸುರಂಗ ಮಾರ್ಗ ನಿರ್ಮಾಣ ಕುರಿತಂತೆ ಕರ್ನಾಟಕ ಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಬಗ್ಗೆ ರಾಜ್ಯ ಸರಕಾರದೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.







