ಮುಖ್ಯಮಂತ್ರಿಗೊಂದು ಮನವಿ
ತಿಮ್ಮಕ್ಕನ ನೆರವಿಗೆ ಇನ್ನಾದರೂ ಧಾವಿಸಿ

ಮಾನ್ಯರೆ,
ಇಡೀ ಜಗತ್ತಿಗೆ ಪರಿಸರ ಸಂಸರಕ್ಷಣೆಯಲ್ಲಿ ಜೀವಂತ ದಂತಕತೆಯಾದ ವನರಾಣಿ, ವನದೇವತೆ, ವೃಕ್ಷಮಾತೆ ಎಂದೇ ಕರೆಯಲ್ಪಡುವ ತಾಯಿ ಸಾಲುಮರದ ತಿಮ್ಮಕ್ಕನಿಗೆ 104 ವರ್ಷ.
ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ಪರಿಸರ ದಿನ (ಜೂನ್ 5) ಬಂದಿದೆ. ತಿಮ್ಮಕ್ಕನಿಗೆ ಒಂದು ಶತಮಾನ ದಾಟಿದೆ. ಈ ನಾಡಿಗೆ ತಿಮ್ಮಕ್ಕ ಕೊಟ್ಟ ಕಾಣಿಕೆ ಅಳೆಯಲು ಯಾವುದರಿಂದಲೂ ಸಾಧ್ಯವಿಲ್ಲ. ಆದರೆ ತಿಮ್ಮಕ್ಕನಿಗೆ ನೀವೇನು ಕೊಟ್ಟಿದ್ದೀರಿ...? ನಿಮ್ಮದು ಬಡವರ, ದಲಿತರ, ಹಿಂದುಳಿದವರ ಸರಕಾರ ಎಂದು ಎಲ್ಲರೂ ಹೇಳುತ್ತಿದ್ದಾರೆ. ಈ ಇಳಿವಯಸ್ಸಿನಲ್ಲೂ ‘‘ಸಾಯುವುದರೊಳಗೆ ಮತ್ತೊಂದಿಷ್ಟು ಸಸಿ ನೆಟ್ಟು ನನ್ನ ಮಕ್ಕಳನ್ನು ರಕ್ಷಿಸಬೇಕು’’ ಎನ್ನುವ ತಿಮ್ಮಕ್ಕನಿಗೆ ನೀವು ಕೊಟ್ಟಿರುವ ಕೊಡುಗೆಯಾದರೂ ಏನು..? ನೀವು ಮುಖ್ಯಮಂತ್ರಿಯಾಗಿದ್ದಾಗಲೇ 2 ವರ್ಷದ ಹಿಂದೆ ರಣಜಿ ಟ್ರೋಫಿ ಗೆದ್ದ ಕರ್ನಾಟಕ ತಂಡಕ್ಕೆ 2 ಕೋಟಿ ಕೊಟ್ಟಿದ್ದೀರಿ.. ಗ್ರಾಮಿ ಪ್ರಶಸ್ತಿ ಪಡೆದವರಿಗೆ ಕರೆದು 25 ಲಕ್ಷ ಕೊಟ್ಟಿದ್ದೀರಿ.. ಆದರೆ ಇಂದಿನ ಬೆಲೆ ಸುಮಾರು 6 ಲಕ್ಷ ಕೋಟಿ ರೂಪಾಯಿ ಬೆಲೆಯ ಮರಗಳನ್ನು ಬೆಳೆಸಿರುವ ತಿಮ್ಮಕ್ಕನಿಗೆ ನೀವು ಕೊಡುತ್ತಿರುವುದು ತಿಂಗಳಿಗೆ 500 ರೂಪಾಯಿ ವೃದ್ದಾಪ್ಯ ವೇತನ ಮಾತ್ರ. ಆರೋಗ್ಯ ಕೆಟ್ಟಾಗ ತನ್ನ ಜೀವನ ನಿರ್ವಹಣೆಗೆ ಸಾಲದ ಸುಳಿಯಲ್ಲಿ ಸಿಲುಕಿ ಇಂದಿಗೂ ಯಾವಾಗ ಜೀವ ಹೋಗುತ್ತದೆ ಎಂದು ಹೆದರುತ್ತಲೆ ಅಭದ್ರತೆಯಿಂದ ಜೀವನ ನಡೆಸುತ್ತಿರುವ ಈ ಮಹಾ ತಾಯಿಗೆ ಕೊಡುವ ಗೌರವ ಇದೆಯೇ.?
ಬೆಂಗಳೂರಿನ ಮಂಜುನಾಥನಗರದಲ್ಲಿ ತನ್ನ ಸಾಕು ಮಗ ಬಳ್ಳೂರು ಉಮೇಶ್‌ರೊಂದಿಗೆ ಜೀವನ ಸವೆಸುತ್ತಿರುವ ತಿಮ್ಮಕ್ಕ ಬದುಕಿದ್ದರಾ..? ಸತ್ತಿದ್ದಾರಾ..? ಎಂದು ಒಂದು ದಿನವಾದರೂ ನಿಮ್ಮ ಇಲಾಖೆಯ ಯಾರೊಬ್ಬ ಅಧಿಕಾರಿಗಳು ಹೋಗಿದ್ದಾರೆಯೇ? ವಿಚಾರಿಸಿದ್ದರೆಯೇ? ಇದೇನಾ ನಿಮ್ಮ ಬಡವರ ಕಾಳಜಿ, ಸಾಧಕರಿಗೆ ತೋರಿಸುವ ಗೌರವ... ತಿಂಗಳ ಹಿಂದೆ ತಿಮ್ಮಕ್ಕರಿಗೆ ತೀವ್ರ ಅನಾರೋಗ್ಯವಾಗಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇದು ಸರಕಾರದ ಯಾರೊಬ್ಬರ ಗಮನಕ್ಕೂ ಬಂದಿರಲಿಲ್ಲ. ಅವರು ಈಗಲೂ ‘‘ನಮ್ಮೂರಿಗೆ ಒಂದು ಹೆರಿಗೆ ಆಸ್ಪತ್ರೆ ಕೊಡಿಸಿ’’ ಎಂದು ಕಂಡ ಕಂಡ ಪತ್ರಕರ್ತರಲ್ಲಿ, ಸಿಕ್ಕ ಸಿಕ್ಕ ರಾಜಕಾರಣಿಗಳಲ್ಲಿ ಕೇಳುತ್ತಲೇ ಇದ್ದಾರೆ. ಪರಿಸರಕ್ಕೆ ಜೀವ ತೇಯ್ದ ಹಿರಿಯ ಜೀವದ ಒಂದು ಬೇಡಿಕೆ ಈಡೇರಿಸಲು ಸಾಧ್ಯವಿಲ್ಲವೇ.. ಮುಖ್ಯಮಂತ್ರಿಯವರೆ...? ಅಥವಾ ನಿಮ್ಮ ಗಮನಕ್ಕೆ ಬಂದಿಲ್ಲವೇ.....? ಮಂಜುನಾಥ ನಗರದ ಮನೆ ನಂ. 16 ರಲ್ಲಿ ತಿಂಗಳಿಗೆ 9 ಸಾವಿರ ಬಾಡಿಗೆ ಕಟ್ಟಿಕೊಂಡು ಅಂಗಡಿ ರೇಷನ್‌ಗೆ ಸಾಲ ಕಟ್ಟಲಾರದೆ ಆಸ್ಪತ್ರೆ ವೆಚ್ಚಗಳಿಗೆ ಸಾಲ ಮಾಡಿಕೊಂಡು ಯಾರಿಗೂ ನೋವು ಹೇಳಿಕೊಳ್ಳದೆ ಇದ್ದಷ್ಟು ದಿನ ಬದುಕೋಣ ಎಂದು ಆತಂಕದಿಂದ ದಿನಗಳನ್ನು ಎಣಿಸುತ್ತಿರುವ ತಿಮ್ಮಕ್ಕನ ಧಾರುಣ ಸ್ಥಿತಿಯೂ ತಮ್ಮ ಗಮಕ್ಕೆ ಬಂದಿಲ್ಲವೇ?.
ತಮ್ಮ ಸರಕಾರದ ಮಂತ್ರಿಗಳಾದ ಆಂಜನೇಯರವರು ‘‘1 ಕೋಟಿ ರೂ. ಕೊಡ್ತೀನಿ’’ ಎಂದದ್ದು, ಶ್ರೀನಿವಾಸ್ ಪ್ರಸಾದ್ 10 ಎಕರೆ ಜಾಗ ಕೊಡ್ತಿನಿ ಎಂದದ್ದು ಎಲ್ಲವೂ ಅಂತೆ ಕಂತೆಯೇ? ಆದ್ದರಿಂದ ಮಾನ್ಯ ಮುಖ್ಯಮಂತ್ರಿಯವರೇ ಇನ್ನಾದರೂ ನಿಮ್ಮ ಅಧಿಕಾರಿಗಳನ್ನು ತಿಮ್ಮಕ್ಕನ ಮನೆಗೆ ಕಳಿಸಿ ಅವರ ಸಮಸ್ಯೆ ಏನೆಂದು ವಿಚಾರಿಸಿಕೊಳ್ಳಿ. ಸಾಧ್ಯವಾದಷ್ಟು ಸಹಾಯ ಮಾಡಿ. ಏಕೆಂದರೆ ತಿಮ್ಮಕ್ಕ ಇಲ್ಲಿ ಹುಟ್ಟಿ ಇಡೀ ಜಗತ್ತಿಗೆ ಪರಿಸರ ಸಂರಕ್ಷಣೆಯ ಪಾಠ ಹೇಳಿಕೊಟ್ಟಿದ್ದಾರೆ.... ಒಮ್ಮೆಯಾದರೂ ಇತ್ತ ಗಮನಿಸಿ ತಿಮ್ಮಕ್ಕನ ನೆರವಿಗೆ ಧಾವಿಸಿ. ಈ ಬಾರಿಯ ಪರಿಸರ ದಿನಾಚರಣೆಗೊಂದು ಅರ್ಥ ಕಲ್ಪಿಸಿ.







