ಪೊಲೀಸ್ ಮುಷ್ಕರದ ರಾಜಕಾರಣ

ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಪಟ್ಟಭದ್ರ ಜಾತಿವಾದಿ ಹಿತಾಸಕ್ತಿಗಳು ಸರಕಾರದ ವಿರುದ್ಧ ಮಸಲತ್ತು ನಡೆಸುತ್ತಲೇ ಬಂದಿವೆ. ಹಲವಾರು ವರ್ಷಗಳ ಕಾಲ ರಾಜಕೀಯ ಸುಖವನ್ನು ಅನುಭವಿಸಿದ ಪಟ್ಟಭದ್ರ ಹಿತಾಸಕ್ತಿಗಳಿಗೆ ಸಮಾಜದ ಹಿಂದುಳಿದ ವರ್ಗಗಳು ರಾಜಕೀಯ ಅಧಿಕಾರ ಸೂತ್ರ ಹಿಡಿದಿರುವುದನ್ನು ಕಂಡು ಹೊಟ್ಟೆಯುರಿಯುತ್ತಿದೆ. ಈ ಸರಕಾರವನ್ನು ಉರುಳಿಸಲು ಅವು ನಾನಾ ಕುತಂತ್ರಗಳನ್ನು ನಡೆಸಿದವು. ಒಂದೇ ಒಂದು ಭ್ರಷ್ಟಾಚಾರದ ಆರೋಪವೂ ಇಲ್ಲದ ಈ ಸರಕಾರವನ್ನು ಅಪಖ್ಯಾತಿಗೆ ಗುರಿಪಡಿಸಲು ಬಹುಜನ ವಿರೋಧಿ ಶಕ್ತಿಗಳು ಮಸಲತ್ತು ನಡೆಸಿ ವಿಫಲಗೊಂಡಿವೆ. ಪೊಲೀಸ್ ಮುಷ್ಕರಕ್ಕೆ ಪ್ರಚೋದನೆ ನೀಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ಇದೇ ವಿಷಯ ಚರ್ಚೆಯಾಗುತ್ತಿವೆ. ಕೋಮುವಾದಿಗಳು, ರಾಜಕಾರಣಿಗಳು ಮತ್ತು ಚಳವಳಿಗಾರರು ಪೈಪೋಟಿಗೆ ಇಳಿದವರಂತೆ ಈ ಮುಷ್ಕರವನ್ನು ಬೆಂಬಲಿಸಿದ್ದಾರೆ. ಹಾಗೆಂದು ಪೊಲೀಸರಿಗೆ ಸಮಸ್ಯೆ ಇಲ್ಲ ಎಂದಲ್ಲ. ಪೊಲೀಸರಿಗೆ ಅನ್ಯಾಯವಾಗುತ್ತಿಲ್ಲವೆಂದಲ್ಲ. ಪೊಲೀಸ್ ಇಲಾಖೆಯಲ್ಲಿ ಬ್ರಿಟಿಷ್ ಕಾಲದ ಗುಲಾಮಗಿರಿ ಪದ್ಧತಿ ಇನ್ನೂ ಜಾರಿಯಲ್ಲಿದೆ. ಸಾಮಾನ್ಯ ಪೇದೆಗಳನ್ನು ಅತ್ಯಂತ ಹೀನಾಯವಾಗಿ ಶೋಷಣೆಗೆ ಗುರಿಪಡಿಸಲಾಗುತ್ತಿದೆ. ಮೇಲಧಿಕಾರಿಗಳ ಮನೆಯಲ್ಲಿ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಕೆಲಸವನ್ನು ಮಾಡುವಂತಹ ಆದೇಶಿತ ಪದ್ಧತಿ ಪೊಲೀಸ್ ಇಲಾಖೆಯಲ್ಲಿ ಇನ್ನೂ ಅಸ್ತಿತ್ವದಲ್ಲಿದೆ.
ಪೊಲೀಸರಿಗೆ ವಾರದ ರಜೆ ಇಲ್ಲ. ಹಂದಿಗೂಡಿನಂತಹ ಮನೆಗಳಲ್ಲಿ ಅವರು ವಾಸಿಸುತ್ತಾರೆ. ದಿನದ 24 ಗಂಟೆಯೂ ಕೆಲಸ ಮಾಡುತ್ತಾರೆ. ಅವರ ಆರೋಗ್ಯ ಹದಗೆಟ್ಟರೆ ಸರಕಾರ ರಕ್ಷಣೆಗೆ ಬರುವುದಿಲ್ಲ. ಇವೆಲ್ಲ ವಾಸ್ತವವಾಗಿದೆ. ಅಂತಲೆ ಪೊಲೀಸ್ ವ್ಯವಸ್ಥೆಯ ಸುಧಾರಣೆಗೆ ಧರ್ಮವೀರ ಆಯೋಗ ಸೇರಿದಂತೆ ಕೆಲ ಆಯೋಗಗಳು ಅನೇಕ ಶಿಫಾರಸುಗಳನ್ನು ಮಾಡಿದ್ದರೂ ಈ ಶಿಫಾರಸುಗಳು ಜಾರಿಗೆ ಈಗ ಮುಷ್ಕರಕ್ಕೆ ಬೆಂಬಲ ನೀಡುತ್ತಿರುವ ರಾಜಕಾರಣಿಗಳು ಅಧಿಕಾರದಲ್ಲಿದ್ದಾಗಲೂ ಕೂಡಾ ಪೊಲೀಸರು ಇದೇ ರೀತಿಯಾಗಿ ಶೋಷಣೆಗೆ ಒಳಗಾಗಿದ್ದರು. ಆದ್ದರಿಂದಲೇ ಈ ಹೋರಾಟವನ್ನು ಬೆಂಬಲಿಸಲೇ ಬೇಕಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅವರನ್ನು ರಾಜಕೀಯವಾಗಿ ಮುಗಿಸಲು ಈ ಹೋರಾಟವನ್ನು ಅಸ್ತ್ರವನ್ನಾಗಿ ಬಳಸಬಾರದು. ರಾಜಕೀಯ ಅಧಿಕಾರವನ್ನು ಸದಾ ತಮ್ಮ ಕೈಯಲ್ಲಿ ಇಟ್ಟುಕೊಳ್ಳಬೇಕೆಂಬ ಮೇಲ್ಜಾತಿ ಮತ್ತು ಮೇಲ್ವರ್ಗಗಳ ಸಂಚಿಗೆ ಪೊಲೀಸರು ಬಲಿಯಾಗಬಾರದು. ಕರ್ನಾಟಕದಲ್ಲಿ ಶನಿವಾರ ನಡೆಯಲಿರುವ ಪೊಲೀಸ್ ಮುಷ್ಕರಕ್ಕೆ ಕೆಲ ಅನಿರೀಕ್ಷಿತ ವಲಯಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ.
ಈ ಹಿಂದೆ ಪೊಲೀಸ್ ಮುಷ್ಕರ ನಡೆದಾಗ ಹಾಗೂ ಕಾರ್ಮಿಕರು ಮತ್ತು ರೈತರು ಚಳವಳಿ ನಡೆಸಿದಾಗ ಎಂದೂ ಬೆಂಬಲ ನೀಡದ ವಿಶ್ವಹಿಂದೂ ಪರಿಷತ್‌ನಂತಹ ಸಂಘಟನೆ ಪೊಲೀಸ್ ಮುಷ್ಕರಕ್ಕೆ ಬೆಂಬಲ ನೀಡುತ್ತಿದೆ. ಕೆಲ ಮಠಾಧೀಶರು ಬಹಿರಂಗವಾಗಿ ಪೊಲೀಸ್ ಮುಷ್ಕರವನ್ನು ಬೆಂಬಲಿಸಿದ್ದಾರೆ. ಇದರ ಹಿನ್ನೆಲೆ ಏನೆಂಬುದು ಸ್ಪಷ್ಟವಾಗಿಲ್ಲ. ಮುಷ್ಕರಕ್ಕೆ ಕರೆ ನೀಡಿದ ಶಶಿಧರ್ ಎಂಬ ವ್ಯಕ್ತಿ ಮುಷ್ಕರವನ್ನು ಸಿಪಾಯಿ ದಂಗೆ ಎಂದು ಬಣ್ಣಿಸಿದ್ದಾರೆ. ಇಷ್ಟೆಲ್ಲ ಹೇಳಿಕೆಗಳನ್ನು ಗಮನಿಸಿದರೆ ಮುಷ್ಕರದ ಹಿಂದಿನ ಉದ್ದೇಶದ ಬಗ್ಗೆ ಸಹಜವಾಗಿ ಸಂಶಯ ಮೂಡುತ್ತದೆ. ಪೊಲೀಸರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ. ಇನ್ನು ಮುಂದೆ ವಾರಕ್ಕೆ ಒಂದು ದಿನ ಕಡ್ಡಾಯ ರಜೆ ನೀಡುವುದಾಗಿ ಘೋಷಿಸಿದ್ದಾರೆ. ವಸತಿ ಸೌಕರ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮುಷ್ಕರವನ್ನು ಕೈಬಿಟ್ಟು ತಮ್ಮ ಸಮಸ್ಯೆಯ ಪರಿಹಾರಕ್ಕೆ ಸರಕಾರದೊಂದಿಗೆ ಮಾತುಕತೆಗೆ ಮುಂದಾಗಬೇಕಾಗಿದೆ. ನಾಗರಿಕ ಸಮಾಜವೂ ಪೊಲೀಸರ ಬೇಡಿಕೆಗೆ ಬೆಂಬಲವಾಗಿ ನಿಂತು ಬಗೆಹರಿಸಲು ಸರಕಾರದ ಮೇಲೆ ಒತ್ತಡ ತರಬೇಕಾಗಿದೆ. ಯಾವುದೇ ಕಾರಣಕ್ಕೂ ಪೊಲೀಸರು ಕೋಮುವಾದಿ ಮತ್ತು ರಾಜಕೀಯ ಹಿತಾಸಕ್ತಿಗಳಿಗೆ ಬಲಿಯಾಗಬಾರದು. ಈವರೆಗಿನ ಯಾವುದೇ ಸರಕಾರಗಳು ಮಾಡಲಾಗದ್ದನ್ನು ಈಗಿನ ಸರಕಾರ ಮಾಡಬೇಕೆಂದು ಒತ್ತಾಯಿಸುವುದರಲ್ಲಿ ಅರ್ಥವಿಲ್ಲ. ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಶಾಂತಿಯುತವಾಗಿ ಈ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕಾಗಿದೆ.
ಪೊಲೀಸರ ಬೇಡಿಕೆಗಳ ಬಗ್ಗೆ ಯಾರ ಅಭ್ಯಂತರವೂ ಇಲ್ಲ. ಶೋಷಣೆಯನ್ನು ಸಹಿಸಿ ಸಾಕಾಗಿ ಅವರು ಧ್ವನಿ ಎತ್ತಿದ್ದಾರೆ. ಆದರೆ, ಈ ಅಸಮಾಧಾನವನ್ನು ಬಳಸಿಕೊಂಡು ನಾಯಕತ್ವ ವಹಿಸಿದ ವ್ಯಕ್ತಿಯ ಬಗ್ಗೆ ಸಹಜವಾಗಿ ಸಂದೇಹ ಉಂಟಾಗುತ್ತದೆ. ಈತ ಕೋಮುವಾದಿ ರಾಜಕೀಯ ಶಕ್ತಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾನೆ ಎಂಬ ವರದಿಗಳೂ ಇವೆ. ಬೆಳಗಾವಿಯಲ್ಲಿ ಕೋಮುವಾದಿ ಸಂಘಟನೆಯೊಂದರ ಸಭೆಯಲ್ಲಿ ಈತ ಪಾಲ್ಗೊಂಡಿದ್ದರ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಆದರೂ ಪೊಲೀಸರ ಬೇಡಿಕೆಗಳ ಬಗ್ಗೆ ಸರಕಾರ ಸಹಾನುಭೂತಿಯಿಂದ ವರ್ತಿಸಬೇಕು. ಅವರ ಬೇಡಿಕೆಗಳನ್ನು ಈಡೇರಿಸಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಶತಮಾನದಿಂದ ಪೊಲೀಸ್ ಇಲಾಖೆಯಲ್ಲಿ ಬೇರುಬಿಟ್ಟಿರುವ ಗುಲಾಮಿ ಪದ್ಧತಿಯನ್ನು ರದ್ದುಪಡಿಸಲು ಸರಕಾರ ಕ್ರಮಕೈಗೊಳ್ಳಬೇಕು. ಇದು ಬರೀ ರಾಜ್ಯಸರಕಾರದ ವ್ಯಾಪ್ತಿಗೆ ಒಳಪಡುವುದಿಲ್ಲ.
ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ಧರ್ಮವೀರ ಆಯೋಗದ ವರದಿಯನ್ನು ಜಾರಿಗೆ ತರಬೇಕು. ಪೊಲೀಸ್ ಇಲಾಖೆಯಲ್ಲಿ ಇತ್ತೀಚೆಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಮಹಿಳಾ ಸಿಬ್ಬಂದಿಯ ಪರಿಸ್ಥಿತಿ ಶೋಚನೀಯವಾಗಿದೆ. ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಗರ್ಭಿಣಿಯರು ತಮ್ಮ ಪಾಲಿನ ರಜೆಗಾಗಿ ಅಧಿಕಾರಿಗಳನ್ನು ಗೋಗರೆಯಬೇಕಾಗುತ್ತದೆ. ಆದ್ದರಿಂದ ಮಹಿಳಾ ಪೊಲೀಸ್ ಸಿಬ್ಬಂದಿಯ ಪರಿಸ್ಥಿತಿಯ ಸುಧಾರಣೆಗೂ ಸರಕಾರ ಕ್ರಮಕೈಗೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕೋಮುವಾದಿ ರಾಜಕೀಯ ಶಕ್ತಿಗಳು ಪೊಲೀಸ್ ಮುಷ್ಕರವನ್ನು ದುರುಪಯೋಗ ಪಡಿಸಿಕೊಳ್ಳದಂತೆ ಸರಕಾರ ಕ್ರಮಕೈಗೊಳ್ಳಬೇಕು. ಪ್ರಗತಿಪರ ಸಂಘಟನೆಗಳೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ.







