ನೂತನ ಐಎಎಸ್ ಅಧಿಕಾರಿಗಳಿಗೆ ಆರೆಸ್ಸೆಸ್ ನಿಂದ ಮಾರ್ಗದರ್ಶನ !

ಹೊಸದಿಲ್ಲಿ, ಜೂ.4: ಆರೆಸ್ಸೆಸ್‌ನ ಜಂಟಿ ಪ್ರಧಾನ ಕಾರ್ಯದರ್ಶಿ(ಸಹ ಸರಕಾರ್ಯವಾಹಿ) ಕೃಷ್ಣ ಗೋಪಾಲ್, ಜು.17ರಂದು ದಿಲ್ಲಿಯಲ್ಲಿ 600ಕ್ಕೂ ಹೆಚ್ಚು ಮಂದಿ ಯಶಸ್ವಿ ನಾಗರಿಕ ಸೇವಾ ಅಭ್ಯರ್ಥಿ ಅಭ್ಯರ್ಥಿಗಳೊಂದಿಗೆ ಸಲಹಾ ಸಭೆಯೊಂದನ್ನು ನಡೆಸಲಿದ್ದಾರೆ.
ಯುಪಿಎಸ್‌ಸಿಯಲ್ಲಿ ಅಗ್ರ ಸ್ಥಾನ ಗಳಿಸಿರುವ ಟೀನಾ ದಾಬಿ ಹಾಗೂ ಆಥರ್ ಆಮಿರ್ ಸಹಿತ ಹಲವರು ಅದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ‘ಸಂಕಲ್ಪ’ದಲ್ಲಿ ಪಾಠ ಹಾಗೂ ತರಬೇತಿಗಳಿಗೆ ಹಾಜರಾಗಿದ್ದ ಯಶಸ್ವಿ ಅಭ್ಯರ್ಥಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಕಲ್ಪ ಎಂಬುದು ಆರೆಸ್ಸೆಸ್ ನಡೆಸುತ್ತಿರುವ ಒಂದು ಶಿಕ್ಷಣ ಸಂಸ್ಥೆಯಾಗಿದ್ದು, ಅದರ ಶಾಖೆಗಳು ದಿಲ್ಲಿಯಲ್ಲಿ 3 ಹಾಗೂ ದೇಶಾದ್ಯಂತ 14 ಇವೆ.
ತಮ್ಮ ಅಭ್ಯರ್ಥಿಗಳ ಯಶಸ್ಸಿನ ಪ್ರಮಾಣ ಉನ್ನತವಾಗಿದೆ. ಇಬ್ಬರು ಅಗ್ರ ಸ್ಥಾನಿಗಳಾದ, ದಿಲ್ಲಿಯ ದಾಬಿ ಹಾಗೂ ಅನಂತನಾಗ್ ಮೂಲದ ಆಮಿರ್, ಯುಪಿಎಸ್‌ಸಿಯ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಸಂದರ್ಶನಗಳ ತರಬೇತಿಗಾಗಿ ಸಂಕಲ್ಪಕ್ಕೆ ಬಂದಿದ್ದರೆಂದು ಸಂಕಲ್ಪದ ಸಂಚಾಲಕ ಪ್ರಕಾಶ್ ಎಂಬವರು ತಿಳಿಸಿದ್ದಾರೆ.
ಯುಪಿಎಸ್‌ಸಿ ಪರೀಕ್ಷೆಯ ಅಂತಿಮ ಚರಣಕ್ಕೆ ತಯಾರಿ ನಡೆಸಲು ಅಣಕು ಸಂದರ್ಶಗಳಿಗಾಗಿ ಸಂಕಲ್ಪಕ್ಕೆ ಹೋಗಿದ್ದುದನ್ನು ಇ.ಟಿ.ಗೆ ಆಮಿರ್ ಖಚಿತಪಡಿಸಿದ್ದಾರೆ.
ಹೌದು, ತಾನು ಅಣಕು ಸಂದರ್ಶನಗಳಿಗಾಗಿ ಸಂಕಲ್ಪಕ್ಕೆ ಹೋಗಿದ್ದೆ. ಸಂದರ್ಶನಕ್ಕೆ ಸಿದ್ಧತೆ ನಡೆಸಲು ಅನೇಕರು ಅಲ್ಲಿಗೆ ಬರುತ್ತಾರೆ. ಅವು ಚೆನ್ನಾಗಿ ಸಿದ್ಧಗೊಳ್ಳಲು ಸಹಾಯ ಮಾಡುತ್ತವೆ. ಅದಕ್ಕೆ ಸಂಸ್ಥೆ ಯಾವುದೇ ಶುಲ್ಕ ಪಡೆಯುವುದಿಲ್ಲ ಎಂದವರು ತಿಳಿಸಿದ್ದಾರೆ. ಆದಾಗ್ಯೂ, ಜು.17ರ ಸಭೆಗೆ ಹಾಜರಾಗಲು ಸಾಧ್ಯವಾಗಲಿದೆಯೇ ಎಂಬುದನ್ನು ಆಮಿರ್ ಖಚಿತಪಡಿಸಿಲ್ಲ.
ಆದರೆ, ದಾಬಿ, ಇ.ಟಿ.ಯ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿಲ್ಲ.







