ಭಾರತದಲ್ಲಿ ಕಾಂಗೊ ಪ್ರಜೆಯ ಹತ್ಯೆಯ ಕುರಿತು ವಿಶ್ವಸಂಸ್ಥೆ ಕಳವಳ

ವಿಶ್ವಸಂಸ್ಥೆ, ಜೂ.4: ಭಾರತದಲ್ಲಿ ಇತ್ತೀಚೆಗೆ ನಡೆದಿರುವ ಕಾಂಗೊ ಪ್ರಜೆಯೊಬ್ಬನ ಹತ್ಯೆ ಹಾಗೂ ಆಫ್ರಿಕದ ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲವು ದಾಳಿ ಘಟನೆಗಳ ಕುರಿತು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ತಾನು ಪ್ರತಿಯೊಂದು ದೇಶದಲ್ಲಿ ಸಹಿಷ್ಣುತೆ ಹಾಗೂ ಒಳಗೊಳಿಸಿಕೊಳ್ಳುವಿಕೆಗೆ ಪ್ರೋತ್ಸಾಹ ನೀಡುತ್ತಿದ್ದೇನೆಂದು ಅದು ಹೇಳಿದೆ.
ಅಂತಹ ಪ್ರಕರಣಗಳ ಮಾಹಿತಿ ಬಂದರೆ ತಾವು ಕಳವಳಗೊಳ್ಳುತ್ತೇವೆ. ಆದರೆ, ತಾವು ಹೋದಲ್ಲೆಲ್ಲ ಮಾಡಲು ಪ್ರಯತ್ನಿಸುವುದೇನೆಂದರೆ, ಪ್ರತಿಯೊಂದು ದೇಶದಲ್ಲೂ ಸಹಿಷ್ಣುತೆ ಹಾಗೂ ಒಳಗೊಳಿಸಿಕೊಳ್ಳುವಿಕೆಗೆ ಉತ್ತೇಜನ ನೀಡುವುದೆಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್‌ರ ಉಪ ವಕ್ತಾರ ಫರ್ಹಾನ್ ಹಕ್ ನಿನ್ನೆ ಪತ್ರಕರ್ತರಿಗೆ ತಿಳಿಸಿದ್ದಾರೆ.
ಮೇ 20ರಂದು ನಡೆದ ಕಾಂಗೊದ 29ರ ಹರೆಯದ ಮಸೊಂಡಾ ಕಟಾಡಾ ಆಲಿವರ್ ಎಂಬಾತನ ಹತ್ಯೆಯ ಕುರಿತು ಅವರನ್ನು ಪ್ರಶ್ನಿಸಲಾಗಿತ್ತು.
ವಿಶ್ವಸಂಸ್ಥೆಯು ಜನಾಂಗೀಯ ಹಾಗೂ ಬೇರೆ ದೇಶದವರ ಬಗೆಗಿರುವ ಭೀತಿಪೂರ್ಣ ದ್ವೇಷದ ವಿರುದ್ಧ ಹೋರಾಟವನ್ನು ಬೆಂಬಲಿಸುತ್ತದೆಂದು ಹಕ್ ಹೇಳಿದ್ದಾರೆ.
ತಾವು ಸದಾ ಸಹಿಷ್ಣುತೆ ಹಾಗೂ ತಿಳುವಳಿಕೆಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡಲು ಪ್ರಯತ್ನಿಸಿದ್ದೇವೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಘಟನೆ(ಯುನೆಸ್ಕೊ) ಅಥವಾ ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಇತ್ಯಾದಿ ಅಂತಹ ಸಹಿಷ್ಣುತೆಯ ಸಂದೇಶವನ್ನು ಸಾರುವ ವಿಶ್ವಸಂಸ್ಥೆಯ ವ್ಯವಸ್ಥೆಯಲ್ಲಿರುವ ಶೈಕ್ಷಣಿಕ ವಿಭಾಗಗಳ ಮೂಲಕ ಅಪಾರ ಪ್ರಯತ್ನ ನಡೆಸಿದ್ದೇವೆ. ಇತರ ದೇಶಗಳಂತೆಯೇ ಭಾರತದಲ್ಲೂ ಅದನ್ನು ಮಾಡಲಿದ್ದೇವೆಂದು ಅವರು ತಿಳಿಸಿದ್ದಾರೆ.
ಆಟೊ ರಿಕ್ಷಾ ಒಂದನ್ನು ಬಾಡಿಗೆಗೆ ಪಡೆಯುವ ವಿಚಾರದಲ್ಲಿ ವಸಂತಕುಂಜ್ ಪ್ರದೇಶದಲ್ಲಿ ನಡೆದ ವಾಗ್ವಾದವೊಂದರ ಹಿನ್ನೆಲೆಯಲ್ಲಿ ಆಲಿವರ್‌ನನ್ನು ಥಳಿಸಿ ಕೊಲ್ಲಲಾಗಿತ್ತು. ಹೈದರಾಬಾದ್‌ನಲ್ಲಿ 23ರ ಹರೆಯದ ನೈಜೀರಿಯನ್ ವಿದ್ಯಾರ್ಥಿಯೊಬ್ಬ ಸೇರಿದಂತೆ ಆಫ್ರಿಕನ್ ವಿದ್ಯಾರ್ಥಗಳ ಮೇಲೆ ಅನೇಕ ಹಲ್ಲೆ ಪ್ರಕರಣಗಳು ಕಳೆದ ಕೆಲವು ದಿನಗಳಲ್ಲಿ ನಡೆದಿವೆ.
ಆಫ್ರಿಕನ್ ಪ್ರಜೆಗಳ ಸುರಕ್ಷೆಯ ಕುರಿತಾತಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಆ ದೇಶದ ರಾಯಭಾರಿಗಳಿಗೆ ಭರವಸೆ ನೀಡಿದ್ದಾರೆ.





