ತೋಡಾರು ಯೆನೆಪೋಯ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ: ರ್ಯಾಂಕ್ ವಿಜೇತೆ ಮಧುಶ್ರೀಗೆ ಸಮ್ಮಾನ

ಮೂಡುಬಿದಿರೆ : ತೋಡಾರ್‌ನಲ್ಲಿರುವ ಯೆನೆಪೊಯ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇ ಆ್ಯಂಡ್ ಸಿ ವಿದ್ಯಾರ್ಥಿನಿಯಾಗಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ 2014-15ನೇ ಶೈಕ್ಷಣಿಕ ವರ್ಷದ ಅಂತಿಮ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದಲ್ಲಿ ವಿ.ವಿ. ಮಟ್ಟದಲ್ಲಿ 6ನೇ ರ್ಯಾಂಕ್ ಗಳಿಸಿದ ಮೂಡಬಿದಿರೆಯ ಮಧುಶ್ರೀ ಕೆ. ಅವರನ್ನು ಸಂಸ್ಥೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಯೆನೆಪೊಯ ವಿ.ವಿ. ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಸಮ್ಮಾನಿಸಿದರು.
ನಂತರ ಮಾತನಾಡಿದ ಕುಂಞಿ ಅವರು ವಿದ್ಯಾರ್ಥಿಗಳು ನಿಶ್ಚಿತ ಗುರಿಯ ಪರಿಕಲ್ಪನೆ ಹೊಂದಿರುವ ಜತೆಗೆ ದೃಢಸಂಕಲ್ಪ, ಧೈರ್ಯದಿಂದ ಪರಿಶ್ರಮಪಡುವ ಮನೋಭಾವ ಹೊಂದಿದ್ದಾಗ ಯಶಸ್ಸು ಖಂಡಿತ ಲಭಿಸುವುದು ಎಂದು ಯೆನೆಪೊಯ ವಿ.ವಿ. ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ ಹೇಳಿದರು. ‘ ಮಧುಶ್ರೀ ಸಾಸಬೇಕೆನ್ನುವವ ವಿದ್ಯಾರ್ಥಿಗಳಿಗೆ ಆದರ್ಶ ಮಾದರಿ ವ್ಯಕ್ತಿತ್ವ ಹೊಂದಿದವರು. ಮಧುಶ್ರೀ ಸಾಧನೆಗೆ ಬೆಂಬಲವಾಗಿ ನಿಂತ ಪೋಷಕರು, ಶಿಕ್ಷಕರು ಕೂಡ ಅಭಿನಂದನಾರ್ಹರು’ ಎಂದ ಅವರು ‘ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ವ್ಯವಸ್ಥೆ, ವಾತಾವರಣ ಕಲ್ಪಿಸಲು ಯೆನೆಪೊಯ ಬದ್ದವಾಗಿದ್ದು ವಿದ್ಯಾರ್ಥಿಗಳು ಇಲ್ಲಿರುವ ಸೌಕರ್ಯ, ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಯಶಸ್ವಿಯಾಗಿ ಸಂಸ್ಥೆಗೂ ನಾಡಿಗೂ ಕೀರ್ತಿ ತರಲು ಪ್ರಯತ್ನಿಸಬೇಕು’ ಎಂದು ಕರೆ ನೀಡಿದರು.
ಇಸ್ಲಾಮಿಕ್ ಎಕಾಡೆಮಿ ಆಫ್ ಎಜ್ಯುಕೇಶನ್‌ನ ನಿರ್ದೇಶಕ ಯೆನೆಪೊಯ ಅಬ್ದುಲ್ಲಾ ಜಾವೇದ್ , ಯೆನೆಪೊಯ ವಿ.ವಿ. ಅಡಿಶನಲ್ ರಿಜಿಸ್ಟ್ರಾರ್ ಡಾ ಶ್ರೀಕುಮಾರ್ ಮೆನನ್ ಮುಖ್ಯ ಅತಿಥಿಗಳಾಗಿದ್ದರು. ಮಧುಶ್ರೀ ಅವರು ಪ್ರತಿಕ್ರಿಯೆ ನೀಡಿ, ‘ ಕಲಿಕೆಗೆ ಹೇಳಿ ಮಾಡಿಸಿದಂಥ ಇಲ್ಲಿನ ಪರಿಸರ, ಮಾರ್ಗದರ್ಶನ ನೀಡುವ ಶಿಕ್ಷಕರು, ಪ್ರಾಚಾರ್ಯರು, ಉತ್ತಮ ಪ್ರಯೋಗಾಲಯ, ಆಡಳಿತಮಂಡಳಿಯ ಪ್ರೋತ್ಸಾಹ ಎಲ್ಲವೂ ತಮ್ಮ ಸಾಧನೆಯ ಹಿಂದೆ ಇದೆ’ ಎಂದು ಹೇಳಿ ಇಲ್ಲೇ ಇ ಆ್ಯಂಡ್ ಸಿ ಕಲಿತ ತಮ್ಮ ಸಹೋದರಿಯ ಪ್ರೇರಣೆ ಮತ್ತು ಪೋಷಕರ ಬೆಂಬಲವನ್ನೂ ಸ್ಮರಿಸಿಕೊಂಡರು. ಯೆನೆಪೊಯ ನಿರ್ದೇಶಕ ರಾಮಚಂದ್ರ ಶೆಟ್ಟಿ, ಯೋಜನಾ ಸಲಹೆಗಾರ ರಾಘವೇಂದ್ರ ಎಂ. ಎಸ್., ಮಧುಶ್ರೀ ಅವರ ಪಿತ ಜಯರಾಜ್ ಎಸ್. ರಾವ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೆಎಸ್‌ಸಿಎಸ್‌ಟಿಯಲ್ಲಿ ಯೆನೆಪೊಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿದ 9 ತಾಂತ್ರಿಕ ಯೋಜನೆಗಳಿಗೆ ಮಾರ್ಗದರ್ಶನವಿತ್ತ ಪ್ರಾಧ್ಯಾಪಕರನ್ನು ಪುರಸ್ಕರಿಸಲಾಯಿತು.
ಇ ಆ್ಯಂಡ್ ಸಿ ಪ್ರಾಧ್ಯಾಪಕಿ ಶ್ವೇತಾ ಕಾಮತ್ ಸ್ವಾಗತಿಸಿದರು. ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕಿ ವಾಣಿ ಅವರು ಮಧುಶ್ರೀ ಅವರ ಶೈಕ್ಷಣಿಕ ಸಾಧನೆಗಳ ಪರಿಚಯ ನೀಡಿದರು. ನಾಝಿಯ ಮತ್ತು ಪ್ರಜ್ಞಾ ಉಪಾಧ್ಯಾಯ ನಿರೂಪಿಸಿದರು. ಪ್ರಾಚಾರ್ಯ ಡಾ ಸಂದೀಪ್ ಜೆ. ನಾಯಕ್ ವಂದಿಸಿದರು.







