ಅಂಗನವಾಡಿ ಕೇಂದ್ರಗಳು ಮಾತೃ ಪ್ರೀತಿಯ ಕೇಂದ್ರಗಳಿದ್ದಂತೆ : ಅಭಯಚಂದ್ರ

ಮೂಡುಬಿದಿರೆ: ಅಂಗನವಾಡಿ ಕೇಂದ್ರಗಳು ಮಕ್ಕಳಿಗೆ ಮಾತೃಪ್ರೀತಿಯ ಕೇಂದ್ರಗಳಿದ್ದಂತೆ. ಜನಸಾಮಾನ್ಯರ ಮಕ್ಕಳು ತಮ್ಮ ಎಳವೆಯಲ್ಲಿ ಶಿಕ್ಷಣ ಜ್ಞಾನ ಮತ್ತು ಸಂಸ್ಕೃತಿ ಪ್ರೀತಿಯಿಂದ ವಂಚಿತರಾಗದಂತೆ ಕಾಳಜಿ ವಹಿಸುತ್ತಿರುವ ಜನಸೇವಾ ಕೇಂದ್ರಗಳಾಗಿವೆ ಎಂದು ರಾಜ್ಯ ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಅವರು ಇಲ್ಲಿನ ಬಸ್ ನಿಲ್ದಾಣದ ಬಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ನಾಗರಕಟ್ಟೆ ಅಂಗನವಾಡಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿಯ ಮೂಲದಿಂದ ಉದ್ದಿಮೆಗಳು ಬೆಳೆಯುತ್ತಿರುವ ನಮ್ಮ ಸಮಾಜದಲ್ಲಿ ಉದ್ಯೋಗಾವಕಾಶಗಳಿಗೆ ಪೂರಕವಾಗಿ ನಮ್ಮ ಮಕ್ಕಳನ್ನೂ ಸ್ಪರ್ಧಾತ್ಮಕವಾಗಿ ಬೆಳೆಸಬೇಕಾಗಿದೆ ಎಂದರು.
ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ನಾಮ ಫಲಕ ಅನಾವರಣಗೈದರು. ಉಪಾಧ್ಯಕ್ಷೆ ಶಕುಂತಲಾ ಹರೀಶ್, ಸ್ಥಾಯೀ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಸದಸ್ಯ ಮನೋಜ್ ಶೆಟ್ಟಿ, ಎಂ. ಬಾಹುಬಲಿ ಪ್ರಸಾದ್, ರತ್ನಾಕರ ದೇವಾಡಿಗ, ಸುಪ್ರಿಯಾ ಡಿ.ಶೆಟ್ಟಿ, ಅಬ್ದುಲ್ ಬಶೀರ್, ದಿನೇಶ್ ಮಾರೂರು, ಉಮೇಶ್ ದೇವಾಡಿಗ. ಅಂಗನವಾಡಿ ಕಾರ್ಯಕರ್ತೆ ಶಶಿಕಲಾ, ಸಹಾಯಕಿ ಲಲಿತಾ ಮತ್ತಿತರರು ಉಪಸ್ಥಿತರಿದ್ದರು.
ಇಲಾಖಾ ಮೇಲ್ವಿಚಾರಕಿ ನಾಗರತ್ನ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.







