ಹಿರಿಯ ಅಂಚೆ ಅಧೀಕ್ಷಕ ಟಿ.ಜಿ. ನಾಯ್ಕ ಅವರಿಗೆ ವಿದಾಯ ಸಮಾರಂಭ

ಮೂಡುಬಿದಿರೆ,ಜೂನ್.4: ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿರುವ ಟಿ.ಜಿ. ನಾಯ್ಕ ಅವರಿಗೆ ಬಂಟ್ವಾಳ ಉಪವಿಭಾಗದ ಅಂಚೆ ಇಲಾಖಾ ನೌಕರರು ಮತ್ತು ಗ್ರಾಮೀಣ ಅಂಚೆ ನೌಕರರ ವತಿಯಿಂದ ಮೂಡುಬಿದಿರೆಯ ಎಂಸಿಎಸ್ ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ಶನಿವಾರ ವಿದಾಯ ಕೂಟ ನಡೆಯಿತು. ಶಿವಮೊಗ್ಗ ಹಿರಿಯ ಅಂಚೆ ಅಧೀಕ್ಷಕ ಕೆ.ಆರ್.ಎನ್. ಮೂರ್ತಿ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅಧಿಕಾರ ಎಂಬುದೊಂದು ಅಮಲು ಇದ್ದಂತೆ. ಆದರೆ ಟಿ.ಜಿ. ನಾಯ್ಕಾ ಅವರು ಮಾನವೀಯ ಕಳಕಳಿಯುಳ್ಳ ವ್ಯಕ್ತಿಯಾಗಿ, ಅಧಿಕಾರವಾಧಿಯಲ್ಲಿ ಉತ್ತಮ ಗುಣ ನಡೆತೆಯೊಂದಿಗೆ ಅಧಿಕಾರಿ ಎಂಬ ಶಬ್ದಕ್ಕೆ ನೈಜತೆಯನ್ನು ನೀಡಿದವರು ಎಂದು ಹೇಳಿದರು.
ಬಂಟ್ವಾಳ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಗಣಪತಿ ಮರಡಿ ಅಧ್ಯಕ್ಷತೆ ವಹಿಸಿ ಟಿ.ಜಿ. ನಾಯ್ಕಾ ದಂಪತಿಯನ್ನು ಅವರನ್ನು ಸನ್ಮಾನಿಸಿದರು.
ಅಂಚೆ ಇಲಾಖೆಯಲ್ಲಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಟಿ.ಜಿ. ನಾಯ್ಕ ಸನ್ಮಾನಕ್ಕೆ ಪ್ರತಿಕ್ರಿಯಿಸಿ ’ಅಂಚೆ ಇಲಾಖೆಯಂತಹ ಪವಿತ್ರ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವುದು ಹೆಮ್ಮೆ ಎನಿಸುತ್ತಿದೆ’ ಎಂದರು.
ಪುತ್ತೂರು ಸಹಾಯಕ ಅಂಚೆ ಅಧೀಕ್ಷಕ ಲೋಕನಾಥ್, ಉಡುಪಿ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕೃಷ್ಣ ನಾಯ್ಕಿ, ಫ್ರಾನ್ಸಿಸ್ ಗೋವಿಯಸ್, ಸುಚರಿತ, ದಯಾನಂದ ಪೈ ಶುಭಾಶಂಸನೆಗೈದರು.
ಮೂಡುಬಿದಿರೆ ಅಂಚೆ ಪಾಲಕರಾದ ವಸಂತ ಕುಮಾರ್ ಸ್ವಾಗತಿಸಿದರು. ಹೊಸಬೆಟ್ಟು ಅಂಚೆ ಪಾಲಕ ಮನೋಜ್ ವಂದಿಸಿದರು. ದೇವರಾಜ್ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.





