ಅಫ್ಘಾನ್-ಭಾರತ ಸ್ನೇಹ ಅಣೆಕಟ್ಟು ಉದ್ಘಾಟಿಸಿದ ಮೋದಿ, ಘನಿ
1,700 ಕೋಟಿ ರೂ. ವೆಚ್ಚದ ಭಾರತ ನಿರ್ಮಿತ ಯೋಜನೆಯಿಂದ 75,000 ಹೆಕ್ಟೇರ್ ಜಮೀನಿಗೆ ನೀರು

ಹೆರಾತ್ (ಅಫ್ಘಾನಿಸ್ತಾನ), ಜೂ. 4: ಅಫ್ಘಾನಿಸ್ತಾನದ ಆಯಕಟ್ಟಿನ ಹೆರಾತ್ ಪ್ರಾಂತದಲ್ಲಿ ಭಾರತ ನಿರ್ಮಿಸಿರುವ 1,700 ಕೋಟಿ ರೂಪಾಯಿ ವೆಚ್ಚದ ಮಹತ್ವದ ಅಣೆಕಟ್ಟೊಂದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಶನಿವಾರ ಜಂಟಿಯಾಗಿ ಉದ್ಘಾಟಿಸಿದರು.
ಇರಾನ್‌ನೊಂದಿಗೆ ಗಡಿ ಹಂಚಿಕೊಂಡಿರುವ ಪಶ್ಚಿಮ ಹೆರಾತ್‌ನಲ್ಲಿ ಹರಿಯುವ ಚಿಸ್ತೆ ಶರೀಫ್ ನದಿಗೆ ಅಡ್ಡಲಾಗಿ ಕಟ್ಟಿರುವ ಅಫ್ಘಾನ್-ಭಾರತ ಸ್ನೇಹ ಅಣೆಕಟ್ಟು 75,000 ಹೆಕ್ಟೇರ್ ಜಮೀನಿಗೆ ನೀರುಣಿಸುತ್ತದೆ ಹಾಗೂ 42 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಹಿಂದೆ ಈ ಅಣೆಕಟ್ಟಿಗೆ ಸಲ್ಮಾ ಅಣೆಕಟ್ಟು ಎಂದು ಕರೆಯಲಾಗುತ್ತಿತ್ತು.
ತನ್ನ ಐದು ದೇಶಗಳ ಪ್ರವಾಸದ ಭಾಗವಾಗಿ ಮೋದಿ ಅಫ್ಘಾನಿಸ್ತಾನಕ್ಕೆ ಆಗಮಿಸಿದ್ದಾರೆ. ಇದು ಆರು ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಅವರ ಎರಡನೆ ಅಫ್ಘಾನಿಸ್ತಾನ ಭೇಟಿಯಾಗಿದೆ.
ಮಹತ್ವದ ಮೂಲಸೌಕರ್ಯ ಯೋಜನೆಯೊಂದು ಬಣ್ಣಿಸಲಾಗಿರುವ ಈ ಅಣೆಕಟ್ಟು ಪ್ರಾಂತದ ಕೃಷಿ ಆರ್ಥಿಕತೆಗೆ ಗಣನೀಯ ಉತ್ತೇಜನ ನೀಡುವುದೆಂದು ನಿರೀಕ್ಷಿಸಲಾಗಿದೆ.
ಉದ್ಘಾಟನೆಯ ಬಳಿಕ ಮಾತನಾಡಿದ ಮೋದಿ, ‘‘ಈ ಅಣೆಕಟ್ಟನ್ನು ಕಲ್ಲು ಮತ್ತು ಸಿಮೆಂಟ್‌ನಿಂದ ನಿರ್ಮಿಸಲಾಗಿಲ್ಲ, ನಮ್ಮ ಸ್ನೇಹದ ನಂಬಿಕೆ ಮತ್ತು ಅಫ್ಘಾನೀಯರು ಮತ್ತು ಭಾರತೀಯರ ಶೌರ್ಯದಿಂದ ನಿರ್ಮಿಸಲಾಗಿದೆ’’ ಎಂದರು.
ಜಲ ಸಂಪನ್ಮೂಲಗಳು, ನದಿ ಅಭಿವೃದ್ಧಿ ಮತ್ತು ಗಾಂಗಾ ಶುದ್ಧೀಕರಣ ಸಚಿವಾಲಯದಡಿ ಕಾರ್ಯನಿರ್ವಹಿಸುವ ಭಾರತ ಸರಕಾರದ ಸಂಸ್ಥೆ ಡಬ್ಲುಎಪಿಸಿಒಎಸ್ ಲಿ. ಈ ಯೋಜನೆಯನ್ನು ಜಾರಿಗೊಳಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಘನಿ, ಮೋದಿಯನ್ನು ಅವರ ಎರಡನೆ ಮನೆ ಅಫ್ಘಾನಿಸ್ತಾನಕ್ಕೆ ಸ್ವಾಗತಿಸಿದರು. ದೇಶದ ಸುದೀರ್ಘ ಕನಸೊಂದು 30 ವರ್ಷಗಳ ಬಳಿಕ ಭಾರತದ ಸಹಾಯದೊಂದಿಗೆ ನೆರವೇರಿದೆ ಎಂದು ಅವರು ಹೇಳಿದರು.







