ಭಟ್ಕಳ: ನಾಗಬನ ಕಂಪೌಂಡಿನಲ್ಲಿ ದನದ ತಲೆ; ಸ್ಥಳದಲ್ಲಿ ಬಿಗುವಿನ ವಾತಾವರಣ

ಭಟ್ಕಳ,ಜೂ 4: ಇಲ್ಲಿನ ಹನುಮಾನ್ ನಗರದ ದಿಗಂಬರ ಭವಾನಿಶಂಕರ್ ಎನ್ನುವವರ ಮನೆಯ ಜಾಗದಲ್ಲಿದ್ದ ನಾಗಬನ ಕಂಪೌಂಡಿನಲ್ಲಿ ಯಾರೋ ಕಿಡಿಗೇಡಿಗಳು ದನದ ಕತ್ತರಿಸಿದ ರುಂಡವನ್ನು ಬೀಸಾಡಿದ್ದು, ಘಟನೆಗೆ ಸಂಬಂಧಿಸಿದಂತೆ ಕೆಲ ಸಮಯ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣಗೊಂಡಿತ್ತು.
ಈ ಘಟನೆ ಶುಕ್ರವಾರ ರಾತ್ರಿ ಸಮಯದಲ್ಲಿ ಜರಗಿದ್ದು ಬೆಳಗಿನ ಜಾವ ಮನೆಯ ಮಾಲಿಕರು ನಾಗಬನಕ್ಕೆ ಪೂಜೆಸಲ್ಲಿಸಲು ಬಂದಾಗ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸಂಘ ಪರಿವಾರದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ಪದೇ ಪದೇ ನಡೆಯುವ ಇಂತಹ ಘಟನೆಗಳಿಂದಾಗಿ ಭಟ್ಕಳದಲ್ಲಿ ಶಾಂತಿ ಕದಡುತ್ತಿದೆ. ಪೊಲೀಸರು ಘಟನೆಯನ್ನು ಕಂಡೂ ನಿಷ್ಕ್ರಿಯರಾಗಿದ್ದಾರೆ. ಕೂಡಲೆ ತಪ್ಪಿತಸ್ತರನ್ನು ಬಂಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಎಸ್.ಪಿ ಮತ್ತು ಐಜಿಪಿ ಭೇಟಿ: ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಹಾಗೂ ಪಶ್ಚಿಮ ವಲಯ ಐಜಿಪಿ ಅರುಣ ಚಕ್ರವರ್ತಿ ಭಟ್ಕಳಕ್ಕೆ ಧಾವಿಸಿ ಬಂಧಿಸಿದ್ದು ಘಟನೆಯನ್ನು ಕೂಲಂಕಷವಾಗಿ ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಶನಿವಾರ ಸಂಜೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಐಜಿಪಿ ದನದ ತಲೆ ಬಿಸಾಡಿದ ಪ್ರಕರಣ ದಾಖಲಿಸಿಕೊಂಡಿದ್ದು ಸೂಕ್ತ ತನಿಖೆಯ ನಂತರವೇ ಅಪರಾಧಿ ಯಾರು ಎನ್ನುವುದು ಬಯಲಿಗೆ ಬರಲಿದೆ ಎಂದು ತಿಳಿಸಿದರು. ತಲೆಬುರುಡೆ ವಿಧಿ ವಿಜ್ಞಾನ ಪರೀಕ್ಷೆಗೆ:ಹನುಮಾನ್ ನಗರದ ನಾಗಬನದಲ್ಲಿ ದೊರೆತಿರುವ ಗೋವಿನ ರುಂಢವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ರುಂಡದ ಕುರಿತು ನಿಖರವಾದ ಮಾಹಿತಿ ಕಲೆ ಹಾಕಲು ಇಲಾಖೆ ಮುಂದಾಗಿದೆ. ಇದರಿಂದ ರುಂಡವು ಸಾಮಾನ್ಯವಾಗಿ ಸಾವನ್ನಪ್ಪಿದ ಗೋವಿನದ್ದೇ, ಹತ್ಯೆಮಾಡಲಾದ ಗೋವಿನದ್ದೇ ಎನ್ನುವ ಕುರಿತು ಮಾಹಿತಿ ಲಭ್ಯವಾಗಲಿದೆ.
ಪೊಲೀಸ್ ಮುಷ್ಕರದ ವದಂತಿಯಂದೇ ಕೃತ್ಯ
ಜೂ.4ರಂದು ರಾಜ್ಯದಲ್ಲಿ ಪೊಲಿಸ್ ಸಿಬ್ಬಂದಿಗಳು ಮುಷ್ಕರಕ್ಕೆ ಮುಂದಾಗುತ್ತಾರೆನ್ನುವ ವದಂತಿಯ ಹಿನ್ನೆಲೆಯಲ್ಲಿ ಯಾರೋ ಕಿಡಿಗೇಡಿಗಳು ಭಟ್ಕಳದಲ್ಲಿ ಅಶಾಂತಿಯನ್ನುಂಟು ಮಾಡುವ ಹುನ್ನಾರ ನಡೆಸಿ ತಾಲೂಕಿನ ಹನುಮಾನ ನಗರದಲ್ಲಿನ ಗಣೇಶೋತ್ಸವ ಮಂಟಪದ ಹಿಂದುಗಡೆಯ ದಿಗಂಬರ ಶೇಟ್ ಎನ್ನುವವರಿಗೆ ಸೇರಿದ ನಾಗಬನದಲ್ಲಿ ಗೋವಿನ ರುಂಡದ ಭಾಗವನ್ನು ಹಾಕಿರುವ ಶಂಕೆ ಕೂಡಾ ಇದೆ. ಭಟ್ಕಳದಲ್ಲಿ ಶಾಂತಿ ಕದಡುತ್ತಿರುವ ಸಮಾಜ ಘಾತುಕ ಶಕ್ತಿಗಳು: ಭಟ್ಕಳದಲ್ಲಿ ಹಲವು ದೇವಸ್ಥಾನ, ಮಂದಿರ, ಮಸೀದಿ, ಚರ್ಚುಗಳಿದ್ದು ಈ ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಷಡ್ಯಂತ್ರ ಬಹಳ ವ್ಯವಸ್ಥಿತವಾಗಿ ನಡೆಯುತ್ತಿರುವುದು ಇಂದು ನಡೆದ ಘಟನೆಯಿಂದ ಬೆಳಕಿಗೆ ಬಂದಂತಾಗಿದೆ. ಈ ಹಿಂದೆಯೂ ಎರಡು ಮೂರು ಬಾರಿ ನಾಗಬನದಲ್ಲಿ ಅಪವಿತ್ರಗೊಳಿಸುವ ಘಟನೆ ನಡೆದಿದೆ. ಇಂತಹ ಘಟನೆಗಳಿಂದ ಭಟ್ಕಳದಲ್ಲಿ ಹಿಂದೂ-ಮುಸ್ಲಿಮರಲ್ಲಿ ಸಂಶಯ ಭಾವನೆ ಮೂಡಿ ಅಶಾಂತಿ ಸೃಷ್ಟಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.










