ಫ್ರೆಂಚ್ ಓಪನ್: ಮುಗುರುಝಾ ಚೊಚ್ಚಲ ಚಾಂಪಿಯನ್
ಸೆರೆನಾಗೆ 22ನೆ ಗ್ರಾನ್ ಸ್ಲಾಮ್ ನಿರಾಕರಿಸಿದ ಸ್ಪೇನ್‌ನ ತಾರೆ

ಪ್ಯಾರಿಸ್, ಜೂ.4: ಇಲ್ಲಿ ನಡೆದ ಫ್ರೆಂಚ್ ಓಪನ್ ಟೆನಿಸ್‌ನ ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ಇಂದು ಅಮೆರಿಕದ ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ವಿರುದ್ಧ 7-5, 6-4 ಅಂತರದಿಂದ ಜಯಿಸಿದ ಸ್ಪೇನ್‌ನ ಗಾರ್ಬೈನ್ ಮುಗುರುಝಾ ಮೊದಲ ಬಾರಿ ಫ್ರೆಂಚ್ ಓಪನ್ ಕಿರೀಟವನ್ನು ಧರಿಸಿದ್ದಾರೆ.
ಈ ಸೋಲಿನೊಂದಿಗೆ ಸೆರೆನಾ ವಿಲಿಯಮ್ಸ್‌ಗೆ 22 ಗ್ರಾನ್ ಸ್ಲಾಮ್ ಜಯಿಸಿ ಸ್ಟೇಫಿಗ್ರಾಫ್ ದಾಖಲೆಯನ್ನು ಸರಿಗಟ್ಟುವ ಕನಸು ಈಡೇರಲಿಲ್ಲ.
ಕಳೆದ ವರ್ಷ ವಿಂಬಲ್ಡನ್‌ನಲ್ಲಿ ಸೆರೆನಾಗೆ ಶರಣಾಗಿದ್ದ 22ರ ಹರೆಯದ ವಿಶ್ವದ 4ನೆ ಶ್ರೇಯಾಂಕದ ಆಟಗಾರ್ತಿ ಮುಗುರುಝಾ ಫ್ರೆಂಚ್ ಓಪನ್‌ನಲ್ಲಿ ಸೆರೆನಾಗೆ ಗೆಲ್ಲಲು ಅವಕಾಶ ನೀಡಲಿಲ್ಲ.
ಮುಗುರುಝಾ ಈ ಹಿಂದೆ ರೊನಾಲ್ಡ್ ಗಾರೊಸ್‌ನಲ್ಲಿ ಸೆರೆನಾ ವಿಲಿಯಮ್ಸ್ ವಿರುದ್ಧ ಜಯ ಗಳಿಸಿದ್ದರು. ಈಗ ಮತ್ತೊಮ್ಮೆ ಜಯ ಸಾಧಿಸಿದರು. 2014ರಲ್ಲಿ ಸೆರೆನಾ ಅವರನ್ನು ಎರಡನೆ ಸುತ್ತಿನಲ್ಲಿ ಮುಗುರುಝಾ ಕಣದಿಂದ ಹೊರದಬ್ಬಿದ್ದರು.
2015ರ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಗ್ರಾಂಡ್ ಸ್ಲಾಮ್ ಸಂಖ್ಯೆಯನ್ನು 21ಕ್ಕೆ ಏರಿಸಿದ್ದ ಸೆರೆನಾಗೆ ಅನಂತರ ಒಂದು ಗ್ರಾನ್ ಸ್ಲಾಮ್‌ನ್ನು ಜಯಿಸಲು ಸಾಧ್ಯವಾಗಲಿಲ್ಲ.
ಕಳೆದ ವರ್ಷ ಯುಎಸ್ ಓಪನ್‌ನ ಸೆಮಿಫೈನಲ್‌ನಲ್ಲಿ ಸೆರೆನಾ ಅವರು ರಾಬೆರ್ಟಾ ವಿನ್ಸಿ ವಿರುದ್ಧ ಸೋತಿದ್ದರು. ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ನಲ್ಲಿ ಕೆರ್ಬೆರ್ ಅವರು ಸೆರೆನಾಗೆ ಪ್ರಶಸ್ತಿ ಗೆಲ್ಲಲು ಅವಕಾಶ ನೀಡಲಿಲ್ಲ. ಇದೀಗ ಮುಗುರುಝಾ ಅವರು ಸೆರೆನಾ ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ. ಮುಗುರುಝಾ 18 ವರ್ಷಗಳ ಬಳಿಕ ಫ್ರೆಂಚ್ ಓಪನ್ ಜಯಿಸಿದ ಮೊದಲ ಸ್ಪೆನ್‌ನ ಆಟಗಾರ್ತಿ ಎನಿಸಿಕೊಂಡಿದ್ದಾರೆ.





