ವಿಟ್ಲ: ಮನೆಯ ಅಂಗಳದಲ್ಲಿ ಮಲಗಿದ್ದ ನಾಯಿಗಳಿಗೆ ವಿಷವುಣಿಸಿ ಅಡಿಕೆ ಕಳವುಗೈದ ಕಳ್ಳರು

ವಿಟ್ಲ : ಮನೆಯಂಗಳದಲ್ಲಿ ಮಲಗಿದ್ದ ನಾಯಿಗಳಿಗೆ ವಿಷವುಣಿಸಿದ ಕಳ್ಳರು ಅಡಿಕೆ ಕಳವುಗೈದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಕುಡ್ತಮುಗೇರು-ಕುಳಾಲು ರಸ್ತೆಯ ಮಂಕುಡೆ ಶ್ರೀನಿವಾಸ್ ಆಚಾರ್ ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಶುಕ್ರವಾರ ರಾತ್ರಿ ಎಂದಿನಂತೆ ಮನೆ ಮಂದಿ ನಿದ್ರಿಸಿದ್ದ ವೇಳೆ ಮನೆಯಂಗಳಕ್ಕೆ ಪ್ರವೇಶಿಸಿದ ಕಳ್ಳರು ಅಂಗಳದಲ್ಲಿದ್ದ ಸಾಕು ನಾಯಿಗಳಿಗೆ ಕೀಟ ನಾಶಕ ಬೆರೆಸಿದ ಆಹಾರ ನೀಡಿ ಅಸ್ವಸ್ಥಗೊಳಿಸಿ ಮನೆಯಂಗಳದಲ್ಲಿದ್ದ ಎಂಟು ಮೂಟೆ ಅಡಿಕೆಗಳನ್ನು ಕಳವುಗೈದಿದ್ದಾರೆ.
ಮನೆ ಮಂದಿ ಬೆಳಿಗ್ಗೆ ಎದ್ದು ನೋಡಿದಾಗ ನಾಯಿಗಳು ಅಸ್ವಸ್ಥಗೊಂಡು ಬಿದ್ದಿರುವುದನ್ನು ಕಂಡು ಅನ್ವೇಷಿಸಿದಾಗ ಈ ಕಳವು ಕೃತ್ಯ ಬೆಳಕಿಗೆ ಬಂದಿದೆ. ಕಳ್ಳರು ತಮ್ಮ ದುಷ್ಕೃತ್ಯದ ವೇಳೆ ನಾಯಿಗಳು ಬೊಗಳುವುದನ್ನು ತಪ್ಪಿಸಲು ಗೋಳಿಬಜೆ ಹಾಗೂ ಕೋಳಿ ತ್ಯಾಜ್ಯಗಳಲ್ಲಿ ವಿಷ ಬೆರೆಸಿ ನೀಡಿರುವುದು ಅಂಗಳದಲ್ಲಿ ದೊರೆತ ಅವಶೇಷಗಳಿಂದ ಗೊತ್ತಾಗಿದೆ.
ಕಳೆದ ವರ್ಷ ಇಲ್ಲಿನ ಅಡಿಕೆ ಖರೀದಿ ಅಂಗಡಿಯ ಶಟರ್ ಮುರಿದ ಕಳ್ಳರು 15 ಮೂಟೆ ಅಡಿಕೆ ಮತ್ತು ನಗದು 15 ಸಾವಿರ ಹಣವನ್ನು ಕಳವುಗೈದಿದ್ದರು. ಇದೀಗ ಮತ್ತೆ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿದ್ದು, ಜನ ಆತಂಕಗೊಳ್ಳುವಂತೆ ಮಾಡಿದೆ. ಘಟನಾ ಸ್ಥಳಕ್ಕೆ ವಿಟ್ಲ ಎಸೈ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.







