ದ.ಕ ಜಿಲ್ಲೆಯಲ್ಲಿ ಸಕಲೇಶಪುರ ಯುವಕನ ಮೇಲೆ ಅನೈತಿಕ ಪೊಲೀಸ್ ಗಿರಿ
ಮೀನು ವ್ಯಾಪಾರಿಮೇಲೆ ಸತತ 4 ಗಂಟೆಗಳ ಕಾಲ ಹಲ್ಲೆ

ಸಕಲೇಶಪುರ, ಜೂ.4: ಸಂಘಪರಿವಾರದ ಅನೈತಿಕ ಪೊಲೀಸ್ ಗಿರಿಗೆ ದ.ಕ. ಜಿಲ್ಲೆಯ ಬಂಟ್ವಾಳ ಗ್ರಾಮದ ಗಡಿಯಾರ್ ಎಂಬಲ್ಲಿ ಸಕಲೇಶಪುರ ಮೀನು ವ್ಯಾಪಾರಿಯೊಬ್ಬ ಸತತ 4 ಗಂಟೆಗಳ ಕಾಲ ಹಲ್ಲೆಗೊಳಗಾಗಿರುವ ಪ್ರಕರಣ ಗುರುವಾರ ತಡರಾತ್ರಿ ನಡೆದಿದೆ.
ಸಕಲೇಶಪುರ ಪಟ್ಟಣದ ಹಳೆಸಂತೆವೇರಿ ನಿವಾಸಿ ಮುನ್ನ (45) ಎಂಬವರು ಸಂಘಪರಿವಾರದ ಅನೈತಿಕ ಪೊಲೀಸ್ ಗಿರಿಗೆ ಒಳಗಾಗಿರುವ ವ್ಯಕ್ತಿಯಾಗಿದ್ದಾರೆ. ಗುರವಾರ ರಾತ್ರಿ ಸಕಲೇಶಪುರದಿಂದ ಮಂಗಳೂರಿಗೆ ಮೀನು ತರಲು ಹೊರಟಿದ್ದ ಮುನ್ನ ಎಂಬವರಿಗೆ ಐದು ಜನ ಸಂಘಪರಿವಾರದ ಗೂಂಡಾಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಘಟನೆ ವಿವರ:
ಸಕಲೇಶಪುರದಲ್ಲಿ ಮೀನು ವ್ಯಾಪಾರ ಮಾಡುವ ಮೋನುಕಾಕ ಎಂಬವರ ವಾಹನದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಮುನ್ನ ಕಳೆದ ಗುರುವಾರ ಅವರ ಮಗನಾದ ತಸ್ಲೀಮ್ ಎಂಬವರೊಂದಿಗೆ ಮೀನು ತರಲು ಮಂಗಳೂರಿಗೆ ಹೊರಟಿದ್ದರು. ವಾಹನ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಗಡಿಯಾರ್ ಎಂಬಲ್ಲಿ ಮುಂದಿನ ವಾಹನಕ್ಕೆ ಚಾಲಕನ ನಿಯಂತ್ರಣ ತಪ್ಪಿ ಸ್ವಲ್ಪ ತಾಗಿದೆ. ಇದನ್ನೆ ನೆಪವಾಗಿಟ್ಟುಕ್ಕೊಂಡ ಸಂಘಪರಿವಾರದ ಗೂಂಡಾಗಳು ಮುನ್ನ ಅವರನ್ನು ವಾಹನದಿಂದ ಹೊರಗೆಳೆದು ರಾಡ್, ದೊಣ್ಣೆಯಿಂದ ಗುಪ್ತಾಂಗ ಮತ್ತು ದೇಹ ರಕ್ತ ಹೆಪ್ಪುಗಟ್ಟುವಂತೆ ರಾತ್ರಿ 12 ಗಂಟೆಯಿಂದ ಬೆಳಗ್ಗಿನ ಜಾವ 3 ಗಂಟೆಯವರೆಗೆ ಸತತವಾಗಿ ಮೂರು ಗಂಟೆ ಅಮಾನವಿಯವಾಗಿ ಹಲ್ಲೆ ನಡೆಸಿದ್ದಾರೆ. ಕೊನೆಗೆ ಪೆಟ್ರೋಲ್ ಹಾಕಿ ಸುಡಲು ಪ್ರಯತ್ನಿಸಿದ ವೇಳೆ ಯಾರೋ ದಾರಿ ಹೋಕರು ಇವರನ್ನು ಕಾಪಾಡಿದ್ದಾರೆ. ಅಲ್ಲದೆ ಮೀನು ಖರೀದಿಯ 25 ಸಾವಿರ ರೂ. ದೋಚಿದ್ದಾರೆ. ಪೊಲೀಸರ ಜೂಟಾಟ: ಸತತವಾಗಿ ಸಂಘಪರಿವಾರದ ಗೂಂಡಾಗಳಿಂದ ಹಲ್ಲೆ ನಡೆದು ಆಸ್ಪತ್ರೆಯಲ್ಲಿ ಮುನ್ನ ಚಿಕಿತ್ಸೆ ಪಡೆಯುತ್ತಿದ್ದರೆ ಇನ್ನೊಂದು ಕಡೆ ಘಟನೆ ನಡೆದಿರುವ ಸರಹದ್ದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ವಿಟ್ಲ ಮತ್ತು ಪುತ್ತೂರು ಪೊಲೀಸರು ದೂರು ದಾಖಲಿಸಲು ಮೀನಮೇಷ ಎನಿಸಿ ಶುಕ್ರವಾರ ರಾತ್ರಿ ಹತ್ತರ ಸಮಯಕ್ಕೆ ವಿಟ್ಲ ಪೋಲಿಸರು ದೂರು ದಾಖಲಿಸಿಕೊಂಡಿದ್ದಾರೆ.
ಹಲ್ಲೆಗೊಳಗಾದ ಮುನ್ನ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.







