ವಿನೂತನ ಮಾಹಿತಿಗಳ ಮೂಲಕ ಹೆಚ್ಚಿನ ಜ್ಞ್ಞಾನಾರ್ಜನೆ ಪಡೆದುಕೊಳ್ಳಿ: ಎಂ.ಸತೀಶ್ ಕುಮಾರ್
ಮುಂದುವರಿಕಾ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ
ಮಡಿಕೇರಿ, ಜೂ.4: ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಬದಲಾವಣೆಯನ್ನು ಕಾಣಬಹುದಾಗಿದ್ದು, ಹೊಸ ಹೊಸ ಸಂಶೋಧನೆಗಳು ಮತ್ತು ಆವಿಷ್ಕಾರಗಳನ್ನು ಆಗುತ್ತಿರುತ್ತವೆ. ಆ ದಿಸೆಯಲ್ಲಿ ವಿನೂತನ ಮಾಹಿತಿಯನ್ನು ಪಡೆಯುವ ಮೂಲಕ ಹೆಚ್ಚಿನ ಜ್ಞಾನಾರ್ಜನೆ ಪಡೆದುಕೊಳ್ಳಲು ಪ್ರಯತ್ನಿಸುವಂತೆ ವೈದ್ಯಾಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಸಲಹೆ ನೀಡಿದ್ದಾರೆ. ನಗರದ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ಶನಿವಾರ ನಡೆದ ಮುಂದುವರಿಕಾ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮುಂದುವರಿಕಾ ವೈದ್ಯಕೀಯ ಶಿಕ್ಷಣದಿಂದ ಹೆಚ್ಚು ಹೆಚ್ಚು ವಿಷಯಗಳನ್ನು ಕಲಿಯಲು ಸಹಕಾರಿಯಾಗಲಿದೆ. ಮುಂದುವರಿಕಾ ಶಿಕ್ಷಣದ ಅವಕಾಶವನ್ನು ವೈದ್ಯರು ಬಳಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಕೆ.ಬಿ.ಮುತ್ತಪ್ಪ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಸವಾಲುಗಳನ್ನು ಎದುರಿಸಬೇಕಿದೆ. ಸವಾಲುಗಳನ್ನು ಎದುರಿಸಲು ಹೆಚ್ಚಿನ ತಿಳುವಳಿಕೆ ಅಗತ್ಯ. ಆ ನಿಟ್ಟಿನಲ್ಲಿ ವೈದ್ಯಕೀಯ ವಿಜ್ಞ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವಂತೆ ತಿಳಿಸಿದರು.
ಮಂಗಳೂರಿನ ಶ್ರೀನಿವಾಸ ವೈದ್ಯಕೀಯ ಕಾಲೇಜಿನ ಅಂಗರಚನಾ ಶಾಸ್ತ್ರದ ಮುಖ್ಯಸ್ಥೆ ಶಕುಂತಲಾ ಪೈ ಮಾತನಾಡಿ, ವೈದ್ಯರು ವೃತ್ತಿ ಕೌಶಲ್ಯ ಬೆಳೆಸಿಕೊಳ್ಳಬೇಕು. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಕಲ್ಪಿಸಲು ಪ್ರಯತ್ನಿಸಬೇಕಿದೆ ಎಂದು ಹೇಳಿದರು. ವೈದ್ಯಕೀಯ ಕಾಲೇಜಿನ ಪ್ರಭಾರ ಡೀನ್ ಡಾ.ಕಾಳಪ್ಪ ಮಾತನಾಡಿ, ಸಮಾಜದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ತನ್ನದೇ ಆದ ಸ್ಥಾನವಿದ್ದು, ಆ ನಿಟ್ಟಿನಲ್ಲಿ ವೈದ್ಯಕೀಯ ವಿಜ್ಞಾನ ವಿಷಯವನ್ನು ಅಧ್ಯಯನ ಮಾಡುವಂತೆ ಅವರು ಸಲಹೆ ನೀಡಿದರು. ಡಾ.ಮಂಜುನಾಥ್, ಡಾ. ವಿಶಾಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







