ಮಡಿಕೇರಿಯಲ್ಲಿ ವಿವಿಧ ಸಂಘಟನೆಗಳಿಂದ ಸಾಂಕೇತಿಕ ಪ್ರತಿಭಟನೆ
ಕರ್ತವ್ಯಕ್ಕೆ ಹಾಜರಾದ ಕೊಡಗು ಪೊಲೀಸರು
ಮಡಿಕೇರಿ, ಜೂ.4: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಪೊಲೀಸರು ಶನಿವಾರ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಕೊಡಗು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಜಿಲ್ಲೆಯ ಪೊಲೀಸರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಗೃಹ ಸಚಿವ ಡಾ.ಪರಮೇಶ್ವರ್ ಅವರು ಪೊಲೀಸರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿರುವ ಹಿನ್ನೆಲೆ ಮತ್ತು ಕೊಡಗು ಎಸ್ಪಿ ರಾಜೇಂದ್ರ ಪ್ರಸಾದ್ ಅವರ ಮನವಿಗೆ ಸ್ಪಂದಿಸಿದ ಸಿಬ್ಬಂದಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾದರು.
ಸಂಘಟನೆಗಳಿಂದ ಪ್ರತಿಭಟನೆ: ಪೊಲೀಸರು ಮುಷ್ಕರದಿಂದ ಹಿಂದೆ ಸರಿದರೂ ವಿವಿಧ ಸಂಘಟನೆಗಳು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪೊಲೀಸರ ಪರ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಪ್ರಮುಖರು ರಾಜ್ಯ ಸರಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಸಾರ್ವಜನಿಕ ಹಿತ ರಕ್ಷಣಾ ಸಮಿತಿಯ ಪ್ರಮುಖ ಎಂ.ಎಸ್.ಪ್ರಸನ್ನ ಭಟ್ ಮಾತನಾಡಿ, ರಾಜ್ಯದ ಪೊಲೀಸರು ಮೂಲಭೂತ ಸೌಕರ್ಯಗಳ ನಡುವೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಪ್ರತಿ ದಿನ 12ರಿಂದ 18ಗಂಟೆಗಳ ಕಾಲ ದುಡಿಯುತ್ತಿರುವ ಪೊಲೀಸ್ ಸಿಬ್ಬಂದಿಗೆ ದುಡಿಮೆಗೆ ಕ್ಕ ವೇತನ ಸಿಗುತ್ತಿಲ್ಲ. ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭ ಜೀವ ಭದ್ರತೆ ಇಲ್ಲದಾಗಿದೆ. ಹಿರಿಯ ಅಧಿಕಾರಿಗಳು ನೀಡುವ ಮಾನಸಿಕ ಕಿರುಕುಳ ಮತ್ತು ಒತ್ತಡವನ್ನು ಸಹಿಸಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪೊಲೀಸರಿಗೆ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದ್ದು, ಈ ತಾರತಮ್ಯ ನಿವಾರಣೆಯಾಗಬೇಕೆಂದು ಪ್ರಸನ್ನ ಭಟ್ ಒತ್ತಾಯಿಸಿದರು.
ಸಿಬ್ಬಂದಿಯ ಕೊರತೆಯ ನಡುವೆಯೂ ಇರುವಷ್ಟು ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ. ಇದನ್ನು ಸರಕಾರ ಪರಿಗಣಿಸಿ ಇತರ ರಾಜ್ಯಗಳಂತೆ ಇಲ್ಲಿನ ಪೊಲೀಸರಿಗೆ ಕೂಡ ಸೂಕ್ತ ವೇತನ ಮತ್ತು ಮೂಲಭೂತ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿದರು. ಬೆರಳೆಣಿಕೆಯ ಪ್ರತಿಭಟನಾಕಾರರು, ನೂರಾರು ಪೊಲೀಸರು: ಜಿಲ್ಲಾ ಕೇಂದ್ರ ಮಡಿಕೆೇರಿಯ ಜ. ಕೆ.ಎಸ್.ತಿಮ್ಮಯ್ಯ ವೃತ್ತದಲ್ಲಿ ಶನಿವಾರ ಬೆಳಗ್ಗೆ ಸಾರ್ವಜನಿಕ ಹಿತರಕ್ಷಣಾ ಸಮಿತಿ, ದೇಶ ಪ್ರೇಮಿ ಯುವಕ ಸಂಘ, ಜಿಲ್ಲಾ ಆಟೊ ಚಾಲಕ ಹಾಗೂ ಮಾಲಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಬೆರಳೆಣಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಾದರು.
ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ವೌನ ಮೆರವಣಿಗೆ ಮಾಡುವ ಮೂಲಕ ಪೊಲೀಸರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭ ನಗರ ಸೇರಿದಂತೆ ಇತರೆ ಠಾಣೆಗಳ ನೂರಾರು ಪೊಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ವೌನ ಮೆರವಣಿಗೆಯ ನಂತರ ಪ್ರತಿಭಟನಾಕಾರರು ಮನವಿ ಪತ್ರವನ್ನು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ನೀಡಿದರು.
ಈ ಸಂದರ್ಭ ಜಿಲ್ಲಾ ಆಟೊ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಡಿ.ಹೆಚ್. ಮೇದಪ್ಪ ಮಾತನಾಡಿ, ರಾಷ್ಟ್ರದ ಗಡಿಗಳನ್ನು ಕಾಯುವ ಮೂಲಕ ನಮ್ಮೆಲ್ಲರ ನೆಮ್ಮದಿಯ ಬದುಕಿಗೆ ಯೋಧರು ಶ್ರಮಿಸುತ್ತಿದ್ದಾರೆ. ರಾಷ್ಟ್ರದ ಆಂತರಿಕ ಶಾಂತಿ ಸುವ್ಯವಸ್ಥೆಗಳಿಗೆ ಜೀವದ ಹಂಗು ತೊರೆದು ಶ್ರಮಿಸುತ್ತಿರುವವರು ಪೊಲೀಸರು. ಇಂತಹ ಪೊಲೀಸರಿಗೆ ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುವ ಸ್ವಾತಂತ್ರವೂ ಇಲ್ಲವಾಗಿದೆ. ಸರಕಾರ ತಕ್ಷಣ ಪೊಲೀಸರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದೇಶಪ್ರೇಮಿ ಯುವಕ ಸಂಘದ ಅರುಣ್ ಶೆಟ್ಟಿ, ನಿವೃತ್ತ ಪೊಲೀಸ್ ಕಾವೇರಪ್ಪ, ವಿವೇಕಾನಂದ ಜನಸೇವಾ ಸಂಘದ ಅಧ್ಯಕ್ಷ ಗಣೇಶ್ ಮೊದಲಾದವರು ಪಾಲ್ಗೊಂಡಿದ್ದರು.







