ಕಾರವಾರ: ಶಾಂತಿಯುತ ಪ್ರತಿಭಟನೆ
ಆಟೊ, ಧ್ವನಿ ವಧರ್ಕ ಪೊಲೀಸ್ ವಶಕ್ಕೆ

ಕಾರವಾರ, ಜೂ.4: ಪೊಲೀಸರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿ ಶನಿವಾರ ನಡೆಯಬೇಕಾಗಿದ್ದ ಪ್ರತಿಭಟನೆ ಭಾಗಶಃ ವಿಫಲವಾಗಿದೆ. ಕಾರವಾರದಲ್ಲಿ ಜನಶಕ್ತಿ ವೇದಿಕೆ ಹೊರತು ಪಡಿಸಿ ಬೇರೆ ಯಾವುದೇ ಸಂಘ ಸಂಸ್ಥ್ಥೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ. ಪ್ರತಿಭಟನೆಯ ಪೂರ್ವ ಪೊಲೀಸರಿಗೆ ವಿವಿಧ ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಪೊಲೀಸರ ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದ್ದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ನೋಟಿಸ್ ಜಾರಿ ಮಾಡಿದ್ದರಿಂದ ಯಾರೂ ಪ್ರತಿಭಟನೆಗೆ ಭಾಗಿಯಾಗಿಲ್ಲ. ಎಲ್ಲ ಪೊಲೀಸರು ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ಪೊಲೀಸ್ ನೋಟಿಸ್ ಜಾರಿಯಾಗಿದ್ದರೂ ಜನಶಕ್ತಿ ವೇದಿಕೆಯ ಕಾರ್ಯಕರ್ತರು ಪೊಲೀಸರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ನಗರದಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ತಂದಿದ್ದ ರಿಕ್ಷಾ, ಧ್ವನಿ ವರ್ಧಕಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶದ ಮೇರೆಗೆ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಮಿತ್ರ ಸಮಾಜ ಮೈದಾನದಿಂದ ಪ್ರಾರಂಭವಾಗಬೇಕಾಗಿದ್ದ ಪ್ರತಿಭಟನೆಯನ್ನು ಪಕ್ಕದ ರಸ್ತೆಯಿಂದ ಪ್ರಾರಂಭಿಸಬೇಕಾಯಿತು.
ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು. ತಕ್ಷಣವೇ ರಾಜ್ಯ ಸರಕಾರ ಪೊಲೀಸರ ಸಮಸ್ಯೆಗೆ ಸ್ಪಂದಿಸಬೇಕು. ಪೊಲೀಸರಿಗೆ ಎಂಟು ತಾಸು ಕಾರ್ಯ ನಿರ್ವಹಿಸಬೇಕು. ಅದಕ್ಕಿಂತ ಹೆಚ್ಚು ಕಾರ್ಯ ನಿರ್ವಹಿಸಿದರೆ, ಪ್ರತಿ ಗಂಟೆಗೆ ಹೆಚ್ಚುವರಿ ಹಣ ಪಾವತಿಸಬೇಕು. ವಾರಕ್ಕೊಮ್ಮೆ ರಜೆ ನೀಡಬೇಕು. ರಜೆ ದಿನ ದುಡಿಸಿಕೊಂಡರೆ ದುಪ್ಪಟ್ಟು ಹಣ ನೀಡಬೇಕು. ಆರೋಗ್ಯ ಭಾಗ್ಯದ ಯೋಜನೆ ಅಡಿಯಲ್ಲಿ ಪೊಲೀಸರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಲಭಿಸುವಂತಾಗಬೇಕು. ಪೊಲೀಸ್ ವಸತಿಗೃಹಗಳಲ್ಲಿ ಇಕ್ಕಟ್ಟಾದ ಜಾಗವಿದ್ದು ಅವುಗಳನ್ನು ನೆರೆಯ ರಾಜ್ಯವಾದ ತಮಿಳುನಾಡು, ಆಂಧ್ರಪ್ರದೇಶದ ವಸತಿಗೃಹಗಳಂತೆ ಮಾಡಬೇಕು. ಬೇರೆ ರಾಜ್ಯದಲ್ಲಿ ಪೊಲೀಸರಿಗೆ ವೇತನ ನೀಡುವಂತೆ ಕರ್ನಾಟಕ ರಾಜ್ಯ ಪೊಲೀಸರಿಗೂ ಸಿಗುವಂತಾಗಬೇಕು ಎನ್ನುವ ಬೇಡಿಕೆಗಳನ್ನು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಜನಶಕ್ತಿ ವೇದಿಕೆಯ ಮಾಧವ ನಾಯ್ಕ, ದೀಪಕ್ ನಾಯ್ಕ, ವಿಲ್ಸನ್ ಫೆರ್ನಾಂಡಿಸ್, ಬಾಬು ಅಂಬಿಗ, ಸಂಗೀತಾ ನಾಯ್ಕ, ನಗರಸಭೆ ಸದಸ್ಯ ದೇವಿದಾಸ ನಾಯ್ಕ, ಎನ್‌ಎಸ್‌ಯುಐ ಜಿಲ್ಲಾ ಉಪಾಧ್ಯಕ್ಷ ಸಿದ್ಧಾರ್ಥ ನಾಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.







