ತೀರ್ಥಹಳ್ಳಿ: ಶಿಕ್ಷಕಿ ವಿರುದ್ಧ ಮಕ್ಕಳು; ಪೋಷಕರ ಪ್ರತಿಭಟನೆ

ತೀರ್ಥಹಳ್ಳಿ, ಜೂ.4: ಕಳೆದ 9 ವರ್ಷಗಳಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸದೆ ಶಾಲೆಯನ್ನು ಅಧೋಗತಿಗೆ ತಳ್ಳಿದ್ದಾರೆಂದು ಆರೋಪಿಸಿ ಶಿಕ್ಷಕಿ ಜಯಂತಿ ಎಂಬವರ ವಿರುದ್ಧ ಮಕ್ಕಳು ಮತ್ತು ಪೋಷಕ ಪ್ರತಿಭಟನೆ ನಡೆಸಿದ ಅಪರೂಪದ ಘಟನೆ ತಾಲೂಕಿನ ಕೋಣಂದೂರು ಕಲ್ಲುಗುಡ್ಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಕಳೆದ 9 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಕೆಲಸ ನಿರ್ವಹಿಸುತ್ತಿರುವ ಜಯಂತಿ ರಮೇಶ್, ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ. ಇದುವರೆಗೂ ಶಾಲಾಭಿವೃದ್ಧಿ ಸಮಿತಿ ಸಭೆಯಾಗಲಿ, ಶಿಕ್ಷಕ ರಕ್ಷಕರ ಸಭೆಯಾಗಲಿ ಕರೆದಿಲ್ಲ ಎಂದು ಪೋಷಕರು ಆರೋಪಿದ್ದಾರೆ.
ಈ ಹಿಂದೆ 30 ರಿಂದ 40 ಮಕ್ಕಳಿದ್ದ ಈ ಶಾಲೆಯಲ್ಲಿ ಈಗ ಶಿಕ್ಷಕಿಯ ಈ ಬೇಜವಾಬ್ದಾರಿತನದಿಂದ ಬೆಚ್ಚಿರುವ ಪೋಷಕರು ತಮ್ಮ ಮಕ್ಕಳನ್ನು ದೂರದ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಈ ಹಿನ್ನೆಲೆಯಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ ಕೇವಲ 10ಕ್ಕೆ ಇಳಿದಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಕಳೆದ ವಾರವಷ್ಟೇ ಶಾಲೆ ಆರಂಭ ಗೊಂಡಿದ್ದು, ಮೂವರು ವಿದ್ಯಾರ್ಥಿಗಳ ಪೊಷಕರು ತಮ್ಮ ಮಕ್ಕಳ ಟಿಸಿ ನೀಡುವಂತೆ ಶಿಕ್ಷಕಿಯನ್ನು ಒತ್ತಾಯಿಸುತ್ತಿರುವುದಾಗಿ ತಿಳಿದು ಬಂದಿದೆ. ಶಾಲೆಯ ಸಂಪೂರ್ಣ ಮೇಲುಸ್ತವಾರಿಯನ್ನು ಶಿಕ್ಷಕಿಯ ಬದಲು ಆಕೆಯ ಪತಿ ರಮೇಶ್ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ ಪೋಷಕರು, ವಿದ್ಯಾಭ್ಯಾಸ, ಶಾಲೆಯ ದುಃಸ್ತಿತಿಯ ಬಗ್ಗೆ ಪೋಷಕರು ವಿಚಾರಿಸಿದರೆ, ನನಗೆ ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾ ಕೇಂದ್ರದ ಅಧಿಕಾರಿಗಳು ಹಾಗೂ ರಾಜಕೀಯ ಬೆಂಬಲವಿದೆ ಏನುಬೇಕಾದರೂ ಮಾಡುವುದಾಗಿ ದಬಾಯಿಸುತ್ತಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯರಾದ ಕೆ.ಎಂ. ಮೋಹನ್, ಸತೀಶ್ ಶೆಟ್ಟಿ, ಚೇತನ್, ಪಾರ್ವತಿ, ಅನ್ನಪೂರ್ಣ ಮತ್ತು ಸ್ಥಳೀಯ ಮುಖಂಡರಾದ ಯೋಗಾನಂದ ಶೆಟ್ಟಿ, ಶಿವಣ್ಣ, ಸೀತಾರಾಮಾಚಾರ್, ರಾಘವೇಂದ್ರ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.







