ಶಿವಮೊಗ್ಗದಲ್ಲಿ ಠುಸ್ಸಾದ ಪೊಲೀಸ್ ಸಿಬ್ಬಂದಿಯ ಮುಷ್ಕರ
: ನಿಟ್ಟುಸಿರು ಬಿಟ್ಟ ಅಧಿಕಾರಿಗಳು!
ಶಿವಮೊಗ್ಗ, ಜೂ. 4: ಸಾಕಷ್ಟು ಕುತೂಹಲ ಮೂಡಿಸಿದ್ದ ಪೊಲೀಸ್ ಸಿಬ್ಬಂದಿಯ ಮುಷ್ಕರಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಪೂರ್ಣ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಸಿವಿಲ್, ಡಿ.ಎ.ಆರ್ ಹಾಗೂ ಕೆಎಸ್‌ಆರ್‌ಪಿ ಪೊಲೀಸರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಯಾವೊಬ್ಬ ಪೊಲೀಸರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರತಿಭಟನೆ ನಡೆಸುವ ಧೈರ್ಯ ತೋರಲಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಪೊಲೀಸ್ ಕುಟುಂಬ ಸದಸ್ಯರೂ ಕೂಡ ಬೀದಿಗಿಳಿಯಲಿಲ್ಲ.
ಪೊಲೀಸ್ ಸಿಬ್ಬಂದಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದುದು, ಯಾವುದೇ ಇರುಸುಮುರಿಸಿಗೆ ಒಳಗಾಗುವ ಘಟನೆಗಳು ನಡೆಯದಿರುವುದು ಹಿರಿಯ ಪೊಲೀಸ್ ಅಧಿಕಾರಿಗಳನ್ನು ನಿಟ್ಟುಸಿರು ಬಿಡುವಂತೆ ಮಾಡಿತು. ಇದರಿಂದ ಕಳೆದ ಹಲವು ದಿನಗಳಿಂದ ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸಿದ ಸಿಬ್ಬಂದಿ ಮನವೊಲಿಕೆಯ ಪ್ರಯತ್ನ ಫಲ ನೀಡಿತು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.
ಮಾಹಿತಿ ಸಂಗ್ರಹ:
ಬೆಳಗ್ಗೆಯೇ ಪೊಲೀಸ್ ಠಾಣೆಗಳಿಗೆ ಆಗಮಿಸಿದ ಅಧಿಕಾರಿಗಳು ಎಂದಿನಂತೆ ತಮ್ಮ ಠಾಣಾ ವ್ಯಾಪ್ತಿಯ ಸಿಬ್ಬಂದಿಯ ರೋಲ್‌ಕಾಲ್ ನಡೆಸಿದರು. ರೋಲ್‌ಕಾಲ್‌ಗೆ ತಡವಾಗಿ ಆಗಮಿಸಿದ ಸಿಬ್ಬಂದಿಗೆ ಅಧಿಕಾರಿಗಳೇ ಮೊಬೈಲ್‌ಗಳಿಗೆ ಕರೆ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದರು. ತದನಂತರ ತಮ್ಮ ಠಾಣೆಯಲ್ಲಿ ಯಾವುದೇ ಸಿಬ್ಬಂದಿ ಮುಷ್ಕರದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ರಜೆ ಹಾಕಿಲ್ಲದಿರುವುದನ್ನು ದೃಢಪಡಿಸಿಕೊಂಡು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತಿದ್ದರು ಎಂದು ತಿಳಿದು ಬಂದಿದೆ. ಮಣಿದರು:
ಜಿಲ್ಲೆಯಲ್ಲಿ ಹಲವು ಪೊಲೀಸರು ಜೂ. 4ರಂದು ರಜೆ ಬೇಕೆಂದು ತಮ್ಮ ಮೇಲಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು. ಮತ್ತೆ ಕೆಲವರು ಅಂದು ಕರ್ತವ್ಯಕ್ಕೆ ಗೈರು ಹಾಜರಾಗಲು ನಿರ್ಧರಿಸಿದ್ದರು. ಈ ಮೂಲಕ ಪರೋಕ್ಷ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಮತ್ತೊಂದೆಡೆ ಪೊಲೀಸ್ ಸಿಬ್ಬಂದಿಯ ಕುಟುಂಬ ಸದಸ್ಯರು ನೇರವಾಗಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಒತ್ತಾಯಿಸುವ ನಿರ್ಧಾರ ಕೂಡ ಮಾಡಿದ್ದರು. ಆದರೆ ಶತಾಯಗತಾಯ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯಾಗಲಿ ಅಥವಾ ಅವರ ಕುಟುಂಬ ಸದಸ್ಯರಾಗಲಿ ಪ್ರತಿಭಟನೆ ನಡೆಸಬಾರದು ಎಂದು ಸೂಚನೆ ನೀಡಿದ್ದ ಇಲಾಖೆಯು ಕಳೆದೊಂದು ವಾರದಿಂದ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರ ಮನವೊಲಿಕೆಯ ಕೆಲಸ ನಡೆಸಿತ್ತು. ಯಾವುದೇ ಕಾರಣಕ್ಕೂ ಸಾಮೂಹಿಕ ರಜೆ ಹಾಕದಂತೆ, ಪ್ರತಿಭಟನೆ ನಡೆಸದಂತೆ ತಿಳಿ ಹೇಳಿದ್ದರು. ಆದರೆ ಕೆಲ ಪೊಲೀಸ್ ಸಿಬ್ಬಂದಿ ಮನವೊಲಿಕೆಗೆ ಜಗ್ಗದಿದ್ದಾಗ ಶಿಸ್ತುಕ್ರಮ ಜರಗಿಸುವ ಎಚ್ಚರಿಕೆಯ ಸಂದೇಶವನ್ನು ಇಲಾಖೆಯ ಅಧಿಕಾರಿಗಳು ರವಾನಿಸಿದ್ದರು. ಸಾಮೂಹಿಕ ರಜೆ ಹಾಕುವ, ಗೈರು ಹಾಜರಾಗುವ ಅಥವಾ ಮುಷ್ಕರ ನಡೆಸುವವರ ವಿರುದ್ಧ ಕಾನೂನು ರೀತಿಯ ಶಿಸ್ತುಕ್ರಮ ಜರಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಇದರಿಂದ ಎದೆಗುಂದಿದ ಕೆಲ ಸಿಬ್ಬಂದಿ ರಜೆ ಮನವಿಯನ್ನು ವಾಪಸ್ ಪಡೆದುಕೊಂಡಿದ್ದರು. ಉಳಿದ ಸಿಬ್ಬಂದಿ ಮುಷ್ಕರದ ಸಹವಾಸವೇ ಬೇಡವೆಂದು ತಟಸ್ಥ ನಿಲುವಿಗೆ ಶರಣಾಗಿದ್ದರು. ಇದರಿಂದ ಶನಿವಾರ ಜಿಲ್ಲೆಯ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳು ನಡೆಯಲಿಲ್ಲ.
ಯಶಸ್ವಿ ‘ಟ್ರಬಲ್ ಶೂಟರ್’ ಕಾರ್ಯತಂತ್ರ..: ಇಡೀ ಪೊಲೀಸ್ ಇಲಾಖೆ ಯನ್ನೇ ‘ಟ್ರಬಲ್’ಗೆ ಸಿಲುಕುವಂತೆ ಮಾಡಿದ್ದ ಪೊಲೀಸ್ ಸಿಬ್ಬಂದಿಯ ಮುಷ್ಕರದ ಬೆದರಿಕೆ ಇಲಾಖೆಯ ಹಿರಿಯ ಅಧಿಕಾರಿಗಳ ನಿದ್ದೆಗೆಡುವಂತೆ ಮಾಡಿತ್ತು. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ‘ಟ್ರಬಲ್ ಶೂಟರ್’ ಐಪಿಎಸ್ ಅಧಿಕಾರಿ ಖ್ಯಾತಿಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣವರ್‌ರವರ ಕಾರ್ಯ
ತಂತ್ರದ ಫಲವಾಗಿ, ಯಾವೊಬ್ಬ ಪೊಲೀಸ್ ಸಿಬ್ಬಂದಿಯೂ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಲಿಲ್ಲ...!
ಅಧಿಕಾರಿಗಳಿಗೆ ಸೂಚನೆ: ಇದರ ಜೊತೆಗೆ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸಂದೇಶ ರವಾನಿಸಿ, ತಮ್ಮ ಕೆಳಹಂತದ ಸಿಬ್ಬಂದಿಯ ಸಭೆ ನಡೆಸಿ ಮನವೊಲಿಕೆ ಕೆಲಸ ಮಾಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಹಾಗೆಯೇ ಅನುಮಾನಾಸ್ಪದ ಸಿಬ್ಬಂದಿಯ ಚಲನವಲನಗಳ ಮೇಲೆ ಕಣ್ಣಿಡುವಂತೆಯೂ ಸಲಹೆ ನೀಡಿದ್ದರು. ಎಸ್ಪಿಯವರ ಈ ಎಲ್ಲ ಕಾರ್ಯತಂತ್ರದಿಂದ ಶನಿವಾರ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಅಥವಾ ಅವರ ಕುಟುಂಬ ಸದಸ್ಯರಾಗಲಿ ಇಲಾಖೆಗೆ ಮುಜುಗುರ ಉಂಟು ಮಾಡುವ ಕೆಲಸ ಮಾಡಲಿಲ್ಲ ಎಂದು ಸ್ವತಃ ಇಲಾಖೆಯ ಮೂಲಗಳೇ ಪತ್ರಿಕೆಗೆ ತಿಳಿಸಿವೆ.
ಸವಾಲುಗಳನ್ನು ಧೈರ್ಯದಿಂದ ಎದುರಿಸಿ: ಎಸೆಸೆಲ್ಸಿ ಟಾಪರ್ ರಂಜನ್ ಶಿವಮೊಗ್ಗ, ಜೂ. 4: ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ. ಯಾವುದೇ ಒತ್ತಡಕ್ಕೆ ಒಳಗಾಗಬೇಡಿ. ಏಕಾಗ್ರತೆಯಿಂದ ಅಭ್ಯಾಸ ಮಾಡಿ. ಗುರುಗಳ, ಪೋಷಕರ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ. ಸತತ ಅಭ್ಯಾಸ ನಡೆಸಿದರೆ ಯಶಸ್ಸು ನಿಮ್ಮದಾಗಲಿದೆ ಎಂದು ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಭದ್ರಾವತಿಯ ಬಿ.ಎಸ್.ರಂಜನ್ ತಮ್ಮ ಸಹಪಾಠಿಗಳಿಗೆ ಕಿವಿಮಾತು ಹೇಳಿದ್ದಾರೆ. ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ‘ಟಾಕ್‌ವಿತ್‌ದಿಟಾಪರ್’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ನಡೆದ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಒತ್ತಡ ಎಂಬುದು ಸಾಮಾನ್ಯ. ಮಕ್ಕಳು 10ನೆಯ ತರಗತಿಗೆ ಕಾಲಿಡುತ್ತಿದ್ದಂತೆ ಅವರ ಮೇಲೆ ಇನ್ನಿಲ್ಲದ ಒತ್ತಡ ಹಾಕುತ್ತಾರೆ. ಇದು ಸರಿಯಲ್ಲ ಎಂದರು. ಕಾರ್ಯಕ್ರಮದಲ್ಲಿ ಡಿಡಿಪಿಐ ಟಿ. ನಾರಾಯಣಗೌಡ, ಬಿಇಒ ಪಿ. ಹಾಲನಾಯ್ಕ, ಡಯಟ್ ಉಪನಿರ್ದೇಶಕ ಜಿ.ಎಸ್.ಪ್ರಭುಸ್ವಾಮಿ, ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಅಮರೇಗೌಡ, ಬೆಂಗಳೂರಿನ ಟೌನ್ ಆಸ್ಪತ್ರೆಯ ಡಾ. ಪರಮೇಶ್ ಹಾಗೂ ಬಸವರಾಜ್ ಉಮ್ರಾ ಮತ್ತಿತರರು ಉಪಸ್ಥಿತರಿದ್ದರು.







