ಪರಿಶಿಷ್ಟರಿಗೆ ನಿವೇಶನ ನೀಡಲು ಮುಖ್ಯಮಂತ್ರಿಗೆ ಮನವಿ

ಚಿಕ್ಕಮಗಳೂರು, ಜೂ.4: ಪರಿಶಿಷ್ಟ ಜಾತಿ ಮತ್ತು ಪಂಗಡದ ಬಡವರಿಗೆ ನಗರವಲಯದಲ್ಲಿ ಲೇಔಟ್ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡುವಂತೆ ಕೋರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯ್‌ಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ನಗರ ಆಶ್ರಯ ಸಮಿತಿ ಅಧ್ಯಕ್ಷ ಹಿರೇಮಗಳೂರು ರಾಮಚಂದ್ರ ಮತ್ತು ಅಕ್ರಮ ಸಕ್ರಮ ಸಮಿತಿ ಸದಸ್ಯ ಶಾಂತಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ವರ್ಗದ ಮುಖಂಡ ಸಮ್ಮುಖದಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ವಿಜಯ್‌ಕುಮಾರ ಮಾತನಾಡಿ, ಪರಿಶಿಷ್ಟ ಜನರಿಗೆ ಸರಕಾರದಿಂದಲೆ ಲೇಔಟ್ ನಿರ್ಮಾಣ ಮಾಡಿ ನೂರು ಎಕರೆಗಿಂತ ಅಧಿಕ ಜಾಗ ಲಭ್ಯವಾಗುವ ಕಡೆ ಸುಸಜ್ಜಿತ ಬಡಾವಣೆ ಮಾಡುವುದಾಗಿ ಹೇಳಿಕೆ ನೀಡಿರುವುದು ಸ್ವಾಗತಾರ್ಹವಾಗಿದೆ. ಇದರಿಂದ ರಾಜ್ಯದ ಲಕ್ಷಾಂತರ ಪರಿಶಿಷ್ಟ ವರ್ಗದವರಿಗೆ ಅನುಕೂಲವಾಗುತ್ತದೆ. ಹಿರೇಮಗಳೂರು, ಶಂಕರಪುರ, ದಂಟರಮಕ್ಕಿ, ಚಿಕ್ಕಕುರುಬರ ಹಳ್ಳಿ, ಕರ್ಕಿಪೇಟೆ, ರಾಮನಹಳ್ಳಿ, ಕೆಂಪನಹಳ್ಳಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ನಿವೇಶನ ರಹಿತ 25ಸಾವಿರಕ್ಕೂ ಹೆಚ್ಚು ಪರಿಶಿಷ್ಟ ಕುಟುಂಬಗಳು ವಾಸಿಸುತ್ತಿದ್ದಾರೆ. 50ವರ್ಷಗಳಿಂದಲೂ ಸಂದಿಗ್ಧ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಸರಕಾರದ ವತಿಯಿಂದ ಜಾಗ ಖರೀದಿಸಿ ನಿವೇಶನ ನೀಡಿದರೆ ಬಡವರಿಗೂ ಅನುಕೂಲವಾಗುತ್ತದೆ ಎಂದು ಸಿಎಂಗೆ ತಿಳಿಸಿದರು. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ಗೆ ಈ ಬಗ್ಗೆ ಮನವಿ ಸಲ್ಲಿಸಿ ಸಂಬಂಧಪಟ್ಟ ಇಲಾಖೆ ಮೂಲಕ ಬಡವರಿಗೆ ಆಶ್ರಯ ನೀಡುವಂತೆ ಮನವಿ ಮೂಲಕ ಒತ್ತಾಯಿಸಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಮನವಿ ಸ್ವೀಕರಿಸಿ ಮಾತನಾಡಿ, ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಬಡವರಿಗೆ ಅನುಕೂಲವಾಗುವ ರೀತಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಶಾಸಕ ಶ್ರೀನಿವಾಸ್,ಮಾಜಿ ಎಂಎಲ್ಸಿ ಗಾಯಿತ್ರಿಶಾಂತೇಗೌಡ ಮುಖಂಡರಾದ ಬಿ.ಎಂ.ಸಂದೀಪ್, ಮಲ್ಲೇಶ್, ಅಣ್ಣಪ್ಪ, ನೇತ್ರಾವತಿ, ಅಣ್ಣಪ್ಪ, ಮುನಿಸ್ವಾಮಿ, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.





