ಸಂಜೋತಾ ಸ್ಫೋಟಕ್ಕೆ ‘ಸಿಮಿ ಸಂಬಂಧ ಹೆಣೆದ’ ನ್ಯೂಸ್ ಎಕ್ಸ್!
ಹಿಂದುತ್ವ ಸಂಘಟನೆಗಳ ಪಾತ್ರ ಕುರಿತ ಸಿಟ್ ಮುಖ್ಯಸ್ಥನ ಸಂದರ್ಶನ ಬ್ಲಾಕ್

ಹೊಸದಿಲ್ಲಿ, ಜೂ. 4: 2007ರ ಫೆಬ್ರವರಿಯಲ್ಲಿ ನಡೆದ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡದ (ಸಿಟ್) ಮಾಜಿ ಮುಖ್ಯಸ್ಥ ವಿಕಾಸ್ ನಾರಾಯಣ್ ಸಿಂಗ್ ಎಂಬ ಹಿರಿಯ ಪೊಲೀಸ್ ಅಧಿಕಾರಿ ಸುದ್ದಿ ವಾಹಿನಿ ನ್ಯೂಸ್ ಎಕ್ಸ್ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದಾರೆ. ಸ್ಫೋಟ ಪ್ರಕರಣದ ಕುರಿತು ನಡೆಸಿದ ತನ್ನ ಸಂದರ್ಶನದಲ್ಲಿ ತಾನು ಸುದ್ದಿ ವಾಹಿನಿಯ ಸಂಪಾದಕನ ನಿಲುವಿಗೆ ತದ್ವಿರುದ್ಧವಾಗಿದ್ದ ವಾಸ್ತವವನ್ನು ಹೇಳಿದ್ದಕ್ಕೆ ತನ್ನ ಸಂದರ್ಶನವನ್ನು ಆ ಸುದ್ದಿ ವಾಹಿನಿ ಬ್ಲಾಕ್ ಮಾಡಿ ತನ್ನ ಪೂರ್ವಗ್ರಹ ಪೀಡಿತ ನಿಲುವನ್ನೇ ಸುದ್ದಿಯಾಗಿ ಪ್ರಸಾರ ಮಾಡಿದೆ ಎಂದು ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ‘‘ನ್ಯೂಸ್ ಎಕ್ಸ್ ಸುದ್ದಿ ವಾಹಿನಿಯ ತಂಡ ಕ್ಯಾಮರಾದೊಂದಿಗೆ ನನ್ನ ಮನೆಗೆ ಬಂದು ಸ್ಟುಡಿಯೋಗೆ ಕನೆಕ್ಟ್ ಮಾಡಿ ಸಂದರ್ಶನ ನಡೆಸಿದರು. ಆಗ ಸಂಜೋತಾ ಸ್ಫೋಟ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇನೆ. ಆ ಸಂದರ್ಭದಲ್ಲಿ ಸ್ಫೋಟದಲ್ಲಿ ಪಾಕ್ ಅಥವಾ ಸಿಮಿ ಕೈವಾಡ ಇಲ್ಲವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಆ ಸ್ಫೋಟದಲ್ಲಿ ಹಿಂದುತ್ವ ಸಂಘಟನೆಗಳ ವ್ಯಕ್ತಿಗಳ ಶಾಮೀಲಾತಿ ಇರುವುದು ಕಂಡು ಬಂದಿದೆ ಎಂದೂ ನಾನು ಹೇಳಿದ್ದೇನೆ. ಸುನೀಲ್ ಜೋಷಿ ಮತ್ತಿ ತರರ ಪಾತ್ರ ಇದರಲ್ಲಿ ಇರುವುದು ಕಂಡು ಬಂದಿದೆ ಎಂದು ತನಗೆ ದಿವಂಗತ ಹೇಮಂತ್ ಕರ್ಕರೆ ಜೊತೆಗಿನ ಚರ್ಚೆಯಲ್ಲಿ ಖಚಿತವಾಯಿತು ಎಂದೂ ಹೇಳಿದ್ದೆ. ಆದರೆ ಸಂಜೆ ‘ನ್ಯೂಸ್ ಎಕ್ಸ್’ ಕಾರ್ಯಕ್ರಮದಲ್ಲಿ ನನ್ನ ಸಂದರ್ಶನವನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಿದ್ದು ಮಾತ್ರವಲ್ಲದೆ ಸ್ಫೋಟಕ್ಕೆ ಸಿಮಿ ಸಂಬಂಧ ಇರುವುದಾಗಿ ಸಿಟ್ ಹೇಳಿದೆ ಎಂದು ಹಸಿ ಹಸಿ ಸುಳ್ಳು ಹೇಳಲಾಗಿದೆ’’ ಎಂದು ಸಿಂಗ್ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ರಾಹುಲ್ ಶಿವಶಂಕರ್ ಅವರು ನಿರಾಕರಿಸಿದ್ದಾರೆ.





