ಭಾರತದ ಮುಖ್ಯ ಕೋಚ್ ಹುದ್ದೆ: ಸಂದೀಪ್ ಪಾಟೀಲ್ ಆಕಾಂಕ್ಷಿ!

ಮುಂಬೈ, ಜೂ.4: ಟೀಮ್ ಇಂಡಿಯಾದಲ್ಲಿ ತೆರವಾಗಿರುವ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಕೆಲವೇ ದಿನಗಳ ಹಿಂದೆ ತನ್ನ ವೆಬ್‌ಸೈಟ್‌ನಲ್ಲಿ ಅರ್ಜಿ ಆಹ್ವಾನಿಸಿತ್ತು. ಇದೀಗ ಆಯ್ಕೆ ಸಮತಿಯಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಸಂದೀಪ್ ಪಾಟೀಲ್ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
‘‘ನಾನು ಮುಖ್ಯ ಕೋಚ್ ಹುದ್ದೆ ಅರ್ಜಿ ಸಲ್ಲಿಸಿದ್ದೇನೆ’’ಎಂದು ಶನಿವಾರ ಇಲ್ಲಿ ಹೇಳಿರುವ ಪಾಟೀಲ್, ಅರ್ಜಿ ಸಲ್ಲಿಸುವಂತೆ ಬಿಸಿಸಿಐ ಯಿಂದ ನಿಮಗೆ ಯಾರಾದರೂ ತಿಳಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ಭಾರತದ ಮಾಜಿ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಹಾಗೂ ಕೀನ್ಯ ತಂಡದ ಮಾಜಿ ಕೋಚ್ ಪಾಟೀಲ್‌ಗೆ ಬಿಸಿಸಿಐನ ಕೆಲವು ಅಧಿಕಾರಿಗಳೇ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದ್ದಾರೆಂಬ ವದಂತಿ ಹಬ್ಬಿದೆ. ಪ್ರಸ್ತುತ ಮುಖ್ಯ ಆಯ್ಕೆಗಾರನಾಗಿರುವ ಪಾಟೀಲ್‌ರ ಅಧಿಕಾರದ ಅವಧಿ ಸೆಪ್ಟಂಬರ್‌ಗೆ ಕೊನೆಗೊಳ್ಳಲಿದೆ.
ಒಂದು ವೇಳೆ ಸೆಪ್ಟಂಬರ್‌ಗೆ ಮೊದಲೇ ಪಾಟೀಲ್ ಕೋಚ್ ಆಗಿ ನೇಮಕಗೊಂಡರೆ, ಈಗಿನ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಮಾರ್ಚ್ ತನಕ ಭಾರತ ತಂಡದ ನಿರ್ದೇಶಕ ಹಾಗೂ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ರವಿ ಶಾಸ್ತ್ರಿ ಕೂಡ ಪ್ರಧಾನ ಕೋಚ್ ಹುದ್ದೆಯ ಆಕಾಂಕ್ಷಿಯಾಗಿದ್ದು, ಮುಂಬೈ ಹಾಗೂ ಭಾರತದ ಮಾಜಿ ಸಹ ಆಟಗಾರ ಪಾಟೀಲ್‌ಗೆ ಸ್ಪರ್ಧೆಯೊಡ್ಡುವ ನಿರೀಕ್ಷೆಯಿದೆ.
ಝಿಂಬಾಬ್ವೆಗೆ ಪ್ರವಾಸ ಕೈಗೊಳ್ಳಲಿರುವ ಎಂಎಸ್ ಧೋನಿ ನೇತೃತ್ವದ ಭಾರತ ತಂಡಕ್ಕೆ ಸಂಜಯ್ ಬಂಗಾರ್ ಹಂಗಾಮಿ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಈ ನಡುವೆ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿರುವ ಬಿಸಿಸಿಐ ಅರ್ಜಿಯನ್ನು ಜೂ.10ಕ್ಕೆ ಮೊದಲು ಸಲ್ಲಿಸುವಂತೆ ಕೇಳಿಕೊಂಡಿದೆ.
ಬಿಸಿಸಿಐ ಪ್ರಕಾರ, ಪ್ರಮುಖ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಐಸಿಸಿ ಸದಸ್ಯತ್ವ ಹೊಂದಿರುವ ಯಾವುದೇ ರಾಷ್ಟ್ರದ ಕ್ರಿಕೆಟ್ ತಂಡಕ್ಕೆ ಕೋಚ್ ನೀಡಿರುವ ಅನುಭವವಿರಬೇಕು. ಕೋಚಿಂಗ್ ಯೋಜನೆಯನ್ನು ತಯಾರಿಸಿ, ಪ್ರಸ್ತುತಪಡಿಸುವ ಸಾಮರ್ಥ್ಯವಿರಬೇಕು.







