ಕೋಟ: ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತ್ಯು
ಕೋಟ, ಜೂ.4: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ನಡೆದ ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಬೆಳಗಿನ ಜಾವ 6ಗಂಟೆಗೆ ಗುಂಡ್ಮಿ ಗ್ರಾಮದ ವಿಶ್ವಕರ್ಮ ಸಭಾಭವನದ ಎದುರುಗಡೆ ಉಡುಪಿ-ಕುಂದಾಪುರ ಏಕಮುಖ ಸಂಚಾರದ ರಾಪ್ಟ್ರೀಯ ಹೆದ್ದಾರಿ 66ರ ಮಣ್ಣು ರಸ್ತೆಯಲ್ಲಿ ಪಾರಂಪಳ್ಳಿಗೆ ಮೀನುಗಾರಿಕೆಗಾಗಿ ಸೈಕಲಿನಲ್ಲಿ ಹೋಗುತ್ತಿದ್ದ ಹಂಗಾರಕಟ್ಟೆಯ ಕೃಷ್ಣ (45)ರಿಗೆ ಉಡುಪಿಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಕಾರು ಢಿಕ್ಕಿ ಹೊಡೆಯಿತು. ಇದರಿಂದ ಸೈಕಲ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕೃಷ್ಣ ಸ್ಥಳದಲ್ಲೇ ಮೃತಪಟ್ಟರು. ಬೆಳಗ್ಗೆ 7ಗಂಟೆಗೆ ತೆಕ್ಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಮೈದಾನಕ್ಕೆ ನಡೆದುಕೊಂಡು ಹೋಗುತ್ತಿದ್ದ ತೆಕ್ಕಟ್ಟೆಯ ಸೀತಾರಾಮ ಶೆಟ್ಟಿ (70)ಗೆ ತೆಕ್ಕಟ್ಟೆ ಜಂಕ್ಷನ್‌ನಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಕೋಟೇಶ್ವರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





