ಪೊಲೀಸರಿಂದ ಕಿರುಕುಳ: ದಲಿತ ಸಂಘಟನೆಯ ಆರೋಪ
ಮಂಗಳೂರು, ಜೂ.4: ಪ್ರಕರಣವೊಂದಕ್ಕೆ ಸಂಬಂಧಿಸಿ ಪಾಂಡೇಶ್ವರದ ಪೊಲೀಸರು ನಗರದ ಶಾಂತಾ ಆಳ್ವ ಕಾಂಪೌಂಡಿನ ದಲಿತರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಂಘಟನಾ ಸಂಚಾಲಕ ಎಸ್.ಪಿ.ಆನಂದ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು, ಯುವತಿಯರನ್ನು ಪೊಲೀಸರು ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ಜಾತಿ ನಿಂದನೆಯ ಪದಗಳನ್ನು ಬಳಸುತ್ತಿದ್ದಾರೆ. ಮನೆಗಳಿಗೆ ನುಗ್ಗಿ ಪ್ರಕರಣವೊಂದಕ್ಕೆ ಸಂಬಂಧಿಸಿ ವಿಜಯ ಎಂಬಾತನನ್ನು ಹುಡುಕುತ್ತಿದ್ದಾರೆ. ಆತ ನಮ್ಮಲ್ಲಿ ಇಲ್ಲ ಎಂದು ಹೇಳಿದರೂ ಕಾಂಪೌಂಡಿನ ನಿವಾಸಿಗಳಿಗೆ ಕಿರುಕುಳ ನೀಡುವ ಬಗ್ಗೆ ನಮ್ಮ ಆಕ್ಷೇಪ ಇದೆ ಎಂದರು.
ಕಿರುಕುಳದ ಬಗ್ಗೆ ಪೊಲೀಸ್ ಆಯುಕ್ತರಿಗೆ ಈಗಾಗಲೇ ದೂರು ನೀಡಿದ್ದೇವೆ. ಅಂತಹ ಕೃತ್ಯದಲ್ಲಿ ತೊಡಗಿರುವ ಪೊಲೀಸರ ವಿರುದ್ಧ ಕೂಡಲೇ ಕ್ರಮ ಜರಗಿಸಬೇಕು. ತಪ್ಪಿದಲ್ಲಿ ದಲಿತ ಸಂಘರ್ಷ ಸಮಿತಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಸಿದರು.
ಕಾಂಪೌಂಡಿನ ನಿವಾಸಿಗಳಾದ ಬಬಿತಾ, ಶರ್ಮಿಳಾ, ಎ.ಶಾಂತಾ ಮತ್ತು ಶೀಲಾ ಉಪಸ್ಥಿತರಿದ್ದರು.





