ಜನತಾ ವ್ಯಾಯಾಮ ಶಾಲೆಯ ಜಮೀನು ವಿವಾ: ಆರೋಪ-ಪ್ರತ್ಯಾರೋಪ
ಉಡುಪಿ, ಜೂ.4: ಕ್ಷುಲ್ಲಕ ಕಾರಣಕ್ಕಾಗಿ ಕೆಲವು ವ್ಯಕ್ತಿಗಳ ಒತ್ತಡಕ್ಕೆ ಮಣಿದು ದೊಡ್ಡಣಗುಡ್ಡೆಯಲ್ಲಿರುವ ಜನತಾ ವ್ಯಾಯಾಮ ಶಾಲೆಯ ಜಮೀನನ್ನು ವಶಪಡಿಸಿಕೊಳ್ಳಲು ನಗರಸಭೆ ಮುಂದಾಗಿದೆ ಎಂದು ವ್ಯಾಯಾಮ ಶಾಲೆಯ ಅಧ್ಯಕ್ಷ ಡಿ.ರಾಮದಾಸ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಜನತಾ ವ್ಯಾಯಾಮ ಶಾಲೆ ದೊಡ್ಡಣಗುಡ್ಡೆಯ 72 ಸೆನ್ಸ್ ಜಾಗದಲ್ಲಿ 1967ರಿಂದ ಕಾರ್ಯಾಚರಿಸುತ್ತಿದೆ. ಸಂಸ್ಥೆಯ ಕಟ್ಟಡಕ್ಕೆ ನೀಡಿದ ಡೋರ್ ನಂ.ಅನ್ನು ಸಂಸ್ಥೆಯ ಗಮನಕ್ಕೆ ತಾರದೆ ಏಕಾಏಕಿ ರದ್ದುಗೊಳಿಸಿದ್ದು, ಇದರ ಹಿಂದೆ ಕೆಲವು ವ್ಯಕ್ತಿಗಳ ಹಿತಾಸಕ್ತಿ ಅಡಗಿದೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ರಘುಪತಿ ಭಟ್, ಪ್ರಭಾಕರ ಪೂಜಾರಿ, ರಾಧಾಕೃಷ್ಣ ಶೆಟ್ಟಿ,ವಿಠಲ ಗಾಣಿಗ, ಡಿ.ಬಾಲಕೃಷ್ಣ ಶೆಟ್ಟಿ, ಡಾ.ಅಮ್ಮುಂಜೆ ಅರವಿಂದ ನಾಯಕ್, ನರಸಿಂಹ ಶೆಟ್ಟಿ, ಸೀತಾರಾಮ ಶೆಟ್ಟಿ, ಬಾಬು ಗೌಡ, ಸರಸ್ವತಿ ಡಿ.ಶೆಟ್ಟಿ, ಚಂದ್ರಾವತಿ, ರಾಮಚಂದ್ರ ತಂತ್ರಿ ಮುಂತಾದವರು ಉಪಸ್ಥಿತರಿದ್ದರು.
ಸರಕಾರಿ ಜಾಗ ತೆರವಿಗೆ ಆಗ್ರಹ: ಶಿವಳ್ಳಿ ಗ್ರಾಮದ ದೊಡ್ಡಣಗುಡ್ಡೆಯಲ್ಲಿ ಸರಕಾರಿ ಜಾಗವನ್ನು ಅತಿಕ್ರಮಿಸಿ ಅನಧಿಕೃತವಾಗಿ ಕಟ್ಟಡವನ್ನು ನಿರ್ಮಿಸಲಾಗಿದ್ದು, ಕೂಡಲೇ ತಹಶೀಲ್ದಾರ್ ಈ ಜಾಗವನ್ನು ವಶಪಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಸರಕಾರಿ ಭೂಮಿ ಸಂರಕ್ಷಣಾ ಸಮಿತಿಯ ಜನಾರ್ದನ ಭಂಡಾರ್ಕರ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಈ ಜಾಗದಲ್ಲಿ ಜನತಾ ವ್ಯಾಯಾಮ ಶಾಲೆಯನ್ನು ಮತ್ತು ಸಭಾಂಗಣವನ್ನು ನಿರ್ಮಿಸಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಅದೇ ರೀತಿ ಈ ಜಾಗದಲ್ಲಿ ಎರಡು ಅಂಗನವಾಡಿ ಕೇಂದ್ರಗಳನ್ನು ಅಕ್ರಮ ಚಟುವಟಿಕೆಗಳಿಗಾಗಿ ಬಳಸಿರುವ ಕುರಿತು ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರಿಗೆ ದಾಖಲೆ ಸಹಿತ ದೂರು ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಪೌರಾಯುಕ್ತರು ಈ ಜಮೀನಿನಲ್ಲಿರುವ ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದರು. ಅದರಂತೆ ಮೇ 19ರಂದು ಉಡುಪಿ ನಗರಸಭೆಯಿಂದ ಕಂದಾಯ ನಿರೀಕ್ಷಕರ ನೇತೃತ್ವದಲ್ಲಿ ಈ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲು ಕಾರ್ಯಾಚರಣೆ ನಡೆದಿದ್ದು, ಇದಕ್ಕೆ ಕೆಲವು ಹಿಂದುತ್ವವಾದಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಸರಕಾರಿ ಆದೇಶ ಜಾರಿ ಮಾಡಲು ತಡೆಯೊಡ್ಡಿದ್ದರು ಎಂದು ಆರೋಪಿಸಿದರು
ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಆರ್.ಕೆ.ರಮೇಶ್, ಸತೀಶ್ ಪುತ್ರನ್, ಶ್ರೀನಿವಾಸ್ ಹೆಬ್ಬಾರ್ ಉಪಸ್ಥಿತರಿದ್ದರು.





