ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿ ನಿಧನಕ್ಕೆ ಭಾರತದ ಬಾಕ್ಸರ್‌ಗಳಿಂದ ಸಂತಾಪ

ಹೊಸದಿಲ್ಲಿ, ಜೂ.4: ಬಾಕ್ಸಿಂಗ್ ದಂತಕತೆ ಮುಹ್ಮಮದ್ ಅಲಿ (74 ವರ್ಷ) ಶನಿವಾರ ಅಮೆರಿಕದ ಆಸ್ಪತ್ರೆಯೊಂದರಲ್ಲಿ ಅನಾರೋಗ್ಯ ಕಾರಣದಿಂದ ನಿಧನರಾಗಿದ್ದು, ಬಾಕ್ಸಿಂಗ್ ಚಾಂಪಿಯನ್ ನಿಧನಕ್ಕೆ ಭಾರತದ ಬಾಕ್ಸರ್‌ಗಳು ಶೋಕ ವ್ಯಕ್ತಪಡಿಸಿದ್ದಾರೆ.
ಹಿರಿಯ ಮಹಿಳಾ ಬಾಕ್ಸರ್ ಮೇರಿಕೋಮ್, ಒಲಿಂಪಿಯನ್ ವಿಜೇಂದರ್ ಸಿಂಗ್, ಕಿರಿಯ ಬಾಕ್ಸರ್ ಶಿವ ಥಾಪ, ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಬಾಕ್ಸಿಂಗ್ ಕಲಿ ಅಲಿ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
‘‘ವಿಶ್ವದ ಹೆಚ್ಚಿನ ಬಾಕ್ಸರ್‌ಗಳು ಮುಹಮ್ಮದ್ ಅಲಿ ಅವರಿಂದ ಸ್ಫೂರ್ತಿ ಪಡೆದಿದ್ದಾರೆ. ನಾನು ಅದಕ್ಕೆ ಹೊರತಾಗಿಲ್ಲ. ಬಾಕ್ಸಿಂಗ್ ಕ್ರೀಡೆ ಆಯ್ಕೆ ಮಾಡಲು ಅವರೇ ನನಗೆ ಪ್ರೇರಣೆ. ಅವರು ಕೂಡ ಕಷ್ಟಪಟ್ಟು ಬಾಕ್ಸಿಂಗ್ ಕ್ಷೇತ್ರದಲ್ಲಿ ಬೆಳೆದಿದ್ದಾರೆ. ಅವರ ನಿಧನದಿಂದ ನಮಗೆಲ್ಲರಿಗೂ ತುಂಬಾ ಬೇಸರವಾಗಿದೆ. ನಾವು ಯಾವಾಗಲೂ ಬಾಕ್ಸಿಂಗ್‌ಗೆ ಅವರು ನೀಡಿರುವ ಕಾಣಿಕೆಯನ್ನು ನೆನಪಿಸಿಕೊಳ್ಳಬೇಕಾಗಿದೆ.... ನಾನು ಅವರನ್ನು ಯಾವಾಗಲೂ ನೆನಪಿಸಿಕೊಳ್ಳುವೆ. ನನ್ನ ಹೃದಯದಲ್ಲಿ ಅವರಿಗೆ ಸ್ಥಾನ ನೀಡುವೆ’’
ಮೇರಿ ಕೋಮ್, ಭಾರತದ ಮಹಿಳಾ ಬಾಕ್ಸಿಂಗ್ ಪಟು.
‘‘ಮುಹಮ್ಮದ್ ಅಲಿ ಬಾಕ್ಸಿಂಗ್‌ಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಬಾಕ್ಸಿಂಗ್‌ನ ದಂತಕತೆ. ನಾನು ಅವರ ಆತ್ಮಚರಿತ್ರೆಯಲ್ಲಿ ಹಲವು ಬಾರಿ ಓದಿದ್ದೇನೆ. ಅವರ ಜೀವನ ಚರಿತ್ರೆ ನನಗೆ ಸ್ಫೂರ್ತಿಯಾಗಿದೆ. ಅವರು ತಾನು ನಂಬಿದ ತತ್ವವನ್ನು ಪಾಲಿಸುತ್ತಾ ಬಂದವರು. ಕರಿಯರನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಪ್ರತಿಭಟಿಸಿ 1960ರ ಒಲಿಂಪಿಕ್ಸ್‌ನಲ್ಲಿ ಜಯಿಸಿದ್ದ ಚಿನ್ನದ ಪದಕವನ್ನು ವಾಪಸ್ ನೀಡಿದ್ದು ಅವರ ಕಠಿಣ ನಿಲುವಿಗೆ ಸಾಕ್ಷಿ’’
ವಿಜೇಂದರ್ ಸಿಂಗ್( 2008ರ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರು).
‘‘ನಾನು 10ನೆ ತರಗತಿಯಲ್ಲಿ ಅಭ್ಯಾಸ ನಿರತನಾಗಿದ್ದಾಗ ಅವರ ಕುರಿತ ಪುಸ್ತಕ ಓದಿದ್ದೇನೆ. ಅವರು ನನ್ನ ಜೀವನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ನನ್ನ ಆಟದ ಶೈಲಿ, ಅಲಿ ಶೈಲಿಯನ್ನೇ ಆಧರಿಸಿದೆ. ನನ್ನ ವೃತ್ತಿಜೀವನದ ಆರಂಭದಲ್ಲಿ ಅವರ ಬಾಕ್ಸಿಂಗ್ ಶೈಲಿಯನ್ನು ಅನುಕರಣೆ ಮಾಡುತ್ತಿದ್ದೆ. ಅವರ ಮಾತುಗಳು ನನ್ನ ಮೇಲೆ ಸಾಕಷ್ಟು ಪರಿಣಾಮಬೀರಿದೆ’’
ಅಖಿಲ್ ಕುಮಾರ್(2006ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್)
ಮುಹಮ್ಮದ್ ಅಲಿ ನಮ್ಮ ಹೃದಯದಲ್ಲಿ ನೆಲೆಸಿದ್ದಾರೆ. ಅವರನ್ನೇ ಸ್ಫೂರ್ತಿಯನ್ನಾಗಿ ಪರಿಗಣಿಸಿರುವ ನನ್ನಂತಹ ಯುವ ಬಾಕ್ಸರ್‌ಗಳ ಪಾಲಿಗೆ ಅವರು ಇನ್ನೂ ಜೀವಂತವಾಗಿದ್ದಾರೆ. ನನಗೆ ಅಲಿ ಹಾಗೂ ಮೈಕ್ ಟೈಸನ್ ಇಬ್ಬರು ಶ್ರೇಷ್ಠ ಹೇವಿವೇಟ್ ಬಾಕ್ಸರ್ ಆಗಿದ್ದಾರೆ.
ಶಿವ ಥಾಪ(2015ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ)
‘‘ನಾನು ಮುಹಮ್ಮದ್ ಅಲಿ ಅವರಿಂದಲೇ ಬಾಕ್ಸಿಂಗ್ ಬಗ್ಗೆ ತಿಳಿದುಕೊಂಡಿದ್ದೇನೆ. ಬಲಿಷ್ಠ ಎದುರಾಳಿಯನ್ನು ಮಣಿಸುವ ಅವರ ಶಕ್ತಿ, ತನ್ನ ಬುದ್ದಿವಂತಿಕೆಯಿಂದ ಸಾಮಥ್ಯವನ್ನು ಪ್ರದರ್ಶಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಆರಂಭದಲ್ಲಿ ಟೀಕೆಗಳನ್ನು ಎದುರಿಸಿದ್ದರು. ಟೀಕೆಗಳಿಗೆ ಪದೇ ಪದೇ ಉತ್ತರ ನೀಡಿದ್ದರು. ಬಾಕ್ಸಿಂಗ್‌ನಲ್ಲಿ ಮಹಾನ್ ಸಾಧನೆಯಿಂದ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ತನ್ನ ತಲೆಮಾರಿನ ಎಲ್ಲ ಬಾಕ್ಸರ್‌ಗಳ ಮೀರಿಸಿದ್ದ ಅವರ ಜೀವನ ಕಥೆ ಭಾರತ ಸಹಿತ ಎಲ್ಲ ಶಾಲಾ ಪುಸ್ತಕದಲ್ಲಿ ಓದಲು ಲಭ್ಯವಾಗಿದೆ’’
ಮನೋಜ್ ಕುಮಾರ್(2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತರು)
‘‘ಮುಹಮ್ಮದ್ ಅಲಿ ನಿಧನ ಇಡೀ ಬಾಕ್ಸಿಂಗ್ ಪರಿವಾರಕ್ಕೆ ದೊಡ್ಡ ನಷ್ಟ. ಅವರು ಒಮ್ಮೆ ಜೋ ಫ್ರೆಝಿಯೆರ್ ವಿರುದ್ಧ ಸೋತಾಗ ಬಹಳಷ್ಟು ಟೀಕೆ ಎದುರಿಸಿದ್ದರು. ಆ ಬಳಿಕ ಕಠಿಣ ಪರಿಶ್ರಮಪಟ್ಟ ಅವರು ಫ್ರಝಿಯರ್‌ರನ್ನು ಮಣಿಸಿ ಸೇಡು ತೀರಿಸಿಕೊಂಡಿದ್ದರು. ಕಠಿಣ ಪರಿಸ್ಥಿತಿಯಲ್ಲೂ ಸುಲಭವಾಗಿ ಸೋಲೊಪ್ಪಿಕೊಳ್ಳದೇ ಇರುವ ಅವರ ನಿಲುವು ನನಗೆ ಸ್ಫೂರ್ತಿ’’
ವಿಕಾಸ್ ಕೃಷ್ಣನ್(ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತರು).
‘‘ಮುಹಮ್ಮದ್ ಅಲಿ ನನ್ನ ಬಾಲ್ಯದ ಹೀರೊ. ಅವರನ್ನು ಒಮ್ಮೆ ಭೇಟಿಯಾಗಬೇಕೆಂಬ ಆಸೆಯಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ’’
ಸಚಿನ್ ತೆಂಡುಲ್ಕರ್, ಭಾರತದ ಬ್ಯಾಟಿಂಗ್ ದಂತಕತೆ







