ಪೊಲೀಸರ ಬೇಡಿಕೆ ಈಡೇರಿಕೆಗೆ ಉನ್ನತ ಮಟ್ಟದ ಸಮಿತಿ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಜೂ.4: ರಾಜ್ಯದ ಪೊಲೀಸ್ ಸಿಬ್ಬಂದಿಯ ಬೇಡಿಕೆ ಈಡೇರಿಕೆಗಾಗಿ ಉನ್ನತಮಟ್ಟದ ಸಮಿತಿಯನ್ನು ರಚನೆ ಮಾಡಲು ಉದ್ದೇಶಿಸಿದ್ದು, ಈ ಸಂಬಂಧ ಸರಕಾರದ ಮುಖ್ಯಕಾರ್ಯದರ್ಶಿಯೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶನಿವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿಯ ಬೇಡಿಕೆ ಈಡೇರಿಕೆ ಸಂಬಂಧ ಹಣಕಾಸು ಇಲಾಖೆಯ ಅನುಮತಿ ಪಡೆಯುವ ಬಗ್ಗೆಯೂ ಚರ್ಚೆ ನಡೆಸಲಾಗುವುದು. ಕಾಲಮಿತಿಯಲ್ಲಿ ಅವರ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ ಎಂದರು.
ಕೆಲವರನ್ನು ಹೊರತುಪಡಿಸಿ ವಿವಿಧ ಸಂಘ ಸಂಸ್ಥೆಗಳು ಸರಕಾರಕ್ಕೆ ಸಹಕಾರ ನೀಡಿವೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಅಧಿಕಾರಿಗಳಿಂದ ಪೊಲೀಸ್ ಸಿಬ್ಬಂದಿಯ ಮನವೊಲಿಕೆ ನಡೆದಿದೆ. ನಮ್ಮ ಮೇಲೆ ನೀವು ಇಟ್ಟಿರುವ ಭರವಸೆಯಿಂದಾಗಿ ಸರಕಾರದ ಹೊಣೆಗಾರಿಕೆ ಮತ್ತಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.
ರಾಮನಗರ ಜಿಲ್ಲಾಧಿಕಾರಿ ಕಚೇರಿ ಬಳಿ ಪೊಲೀಸ್ ಸಮವಸ್ತ್ರ ಧರಿಸಿ ಪ್ರತಿಭಟನೆ ನಡೆಸುತ್ತಿದ್ದ ರಮೇಶ್‌ಗೌಡ ಎಂಬಾತನನ್ನು ಐಪಿಸಿ ಸೆಕ್ಷನ್ 177 ಅಡಿಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಮಂಡ್ಯದಲ್ಲಿ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದ ಡಿಎಆರ್ ಪೇದೆ ರಾಮಕೃಷ್ಣರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು. ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ರಾಜ್ಯ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ.ಶಶಿಧರ್ ಪತ್ನಿ ಪೂರ್ಣಿ ಮಾರನ್ನು ಫ್ರೀಡಂಪಾರ್ಕ್‌ನಲ್ಲಿ ವಶಕ್ಕೆ ಪಡೆದು ಆನಂತರ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರದ ಮನವಿಗೆ ಸ್ಪಂದಿಸಿದ ಪೊಲೀಸ್ ಸಿಬ್ಬಂದಿಯ ಕುಟುಂಬದ ಎಲ್ಲ ಸದಸ್ಯರಿಗೂ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ಯಾವ ಪೊಲೀಸ್ ಸಿಬ್ಬಂದಿಯೂ ಪ್ರತಿಭಟನೆ ನಡೆಸಿಲ್ಲ. ರಾಜ್ಯಾದ್ಯಂತ ಪೊಲೀಸರು ತಮ್ಮ ಪ್ರತಿಭಟನೆಯನ್ನು ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ರಾಜ್ಯದ ಪೊಲೀಸ್ ಇಲಾಖೆಯು ದೇಶಕ್ಕೆ ಮಾದರಿಯಾಗಿದೆ. ಮುಂದಿನ ವಾರ ಹಿರಿಯ ಅಧಿಕಾರಿಗಳ ಸಭೆ ಕರೆದು, ಈ ಕೂಡಲೇ ಮಾಡಲು ಸಾಧ್ಯವಿರುವಂತಹ ಬೇಡಿಕೆಗಳ ಈಡೇರಿಕೆ ಕುರಿತು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ಪೊಲೀಸ್ ಇಲಾಖೆಯ ಸಂಘದವರು ಸರಕಾರದ ಮುಂದೆ 30 ಬೇಡಿಕೆಗಳನ್ನಿಟ್ಟಿದ್ದಾರೆ. ಸಿಬ್ಬಂದಿಗೆ ವಾರದ ರಜೆ ಕಡ್ಡಾಯಗೊಳಿಸಿ ಶುಕ್ರವಾರವೇ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ 80 ಸಾವಿರ ಐಪಿಎಸ್‌ಯೇತರ ಅಧಿಕಾರಿಗಳಿದ್ದಾರೆ. ಶಶಿಧರ್ ಸಿಪಾಯಿ ದಂಗೆ ಮಾಡಿಸುವುದಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಸಂದೇಶ ಹಾಕಿದ್ದರು. ಅಲ್ಲದೆ, ಸರಕಾರವನ್ನು ಕೆಡವುಹುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಹಾಗೂ ಇಲಾಖೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಸರಕಾರದ ಮೇಲೆ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಇಟ್ಟಿರುವ ಭರವಸೆ ಯನ್ನು ಉಳಿಸಿಕೊಳ್ಳುತ್ತೇವೆ. ಇದೇ ಸಂದರ್ಭದಲ್ಲಿ ನಮ್ಮ ಮನವಿಗೆ ಸ್ಪಂದಿಸಿದ ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳು, ರಾಜಕೀಯ ಪಕ್ಷಗಳಿಗೂ ಅಭಿನಂದನೆ ಸಲ್ಲಿಸುವುದಾಗಿ ಪರಮೇಶ್ವರ್ ತಿಳಿಸಿದರು.
ನೂರಕ್ಕೆ ನೂರು ಹಾಜರು: ಓಂ ಪ್ರಕಾಶ್
ಬೆಂಗಳೂರು, ಜೂ.4: ರಾಜ್ಯದಲ್ಲಿ ಯಾವುದೇ ಪ್ರತಿಭಟನೆಗಳು ನಡೆದಿರುವುದು ಕಂಡು ಬಂದಿಲ್ಲ. ಅಲ್ಲದೆ, ಎಂದಿನಂತೆಯೇ ಪೊಲೀಸರು ನೂರಕ್ಕೆ ನೂರರಷ್ಟು ಹಾಜರಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ತಿಳಿಸಿದ್ದಾರೆ.
ಶನಿವಾರ ಪೊಲೀಸರ ಪ್ರತಿಭಟನೆ ಕುರಿತು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಪ್ರತಿಭಟನೆ ಹಾಗೂ ಸಮಸ್ಯೆ ನಮ್ಮ ಮನೆಯ ವಿಚಾರವಾಗಿದ್ದು, ನಮ್ಮ ಸಮಸ್ಯೆಯನ್ನು ನಾವು ಬಗೆಹರಿಸಿಕೊಂಡಿದ್ದೇವೆ. ಇಂದು ಶೇ.100ಕ್ಕೆ ನೂರರಷ್ಟು ಪೊಲೀಸರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಯಾವ ಜಿಲ್ಲೆಯಲ್ಲೂ ಪೊಲೀಸ್ ಸಿಬ್ಬಂದಿ ರಜೆ ಹಾಕಿರುವುದು ಕಂಡು ಬಂದಿಲ್ಲ ಎಂದರು.
ವಾಟಾಳ್ ಬಂಧನ
ಪೊಲೀಸರ ವಿರುದ್ಧ ಶಿಸ್ತು ಕ್ರಮ ಬೇಡ, ಮಾನವೀಯತೆಯ ನೆಲೆಯಲ್ಲಿ ಅವರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಶನಿವಾರ ನಗರದ ವಿಧಾನಸೌಧದ ಎದುರು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಪೊಲೀಸರ ವೇಷಧಾರಿಯಾಗಿ ಪ್ರತಿಭಟನೆ ನಡೆಸಲು ಹೋದಾಗ ಪೊಲೀಸರು ಬಂಧಿಸಿದರು.







