ರಕ್ಷಣಾ ಕ್ಷೇತ್ರದಲ್ಲಿ ನೂತನ ಸಹಕಾರಕ್ಕೆ ಭಾರತ, ಅಮೆರಿಕ ಒತ್ತು
ಅಮೆರಿಕ ರಕ್ಷಣಾ ಕಾರ್ಯದರ್ಶಿ

ವಾಶಿಂಗ್ಟನ್, ಜೂ. 4: ಮುಂದಿನ ವಾರದ ಪ್ರಧಾನಿ ನರೇಂದ್ರ ಮೋದಿಯ ಅಮೆರಿಕ ಪ್ರವಾಸಕ್ಕೆ ಮುನ್ನ, ರಕ್ಷಣಾ ಕ್ಷೇತ್ರದಲ್ಲಿನ ಸಹಕಾರದ ನೂತನ ವಿಧಾನಗಳನ್ನು ತಾನು ಮತ್ತು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಜಂಟಿಯಾಗಿ ಗುರುತಿಸುವುದಾಗಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಶ್ಟನ್ ಕಾರ್ಟರ್ ಇಂದು ಹೇಳಿದ್ದಾರೆ.
ಸಿಂಗಾಪುರದಲ್ಲಿ ಇಂದು ನಡೆದ ವಾರ್ಷಿಕ ಶಾಂಗ್ರಿ-ಲಾ ಮಾತುಕತೆಯ ವೇಳೆ ಅವರು ಈ ವಿಷಯವನ್ನು ತಿಳಿಸಿದರು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರ ಏಶ್ಯ ಪೆಸಿಫಿಕ್ ಮರುಸಮತೋಲನ ಪ್ರಕ್ರಿಯೆಯಲ್ಲಿ ಭಾರತಕ್ಕೆ ಮಹತ್ವದ ಸ್ಥಾನವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಅನಾಮಧೇಯರ ಗೋರಿಗೆ ಹೂಮಾಲೆ ಹಾಕಲು ಮೋದಿ ಆ್ಯರ್ಲಿಂಗ್ಟನ್ ರಾಷ್ಟ್ರೀಯ ಸಮಾಧಿಗೆ ಭೇಟಿ ನೀಡುವಾಗ ಕಾರ್ಟರ್ ಅವರ ಜೊತೆಯಲ್ಲಿರುತ್ತಾರೆ ಎಂದು ಪೆಂಟಗನ್ ಶುಕ್ರವಾರ ತಿಳಿಸಿದೆ. ಮೋದಿಯ ಮೂರು ದಿನಗಳ ಅಮೆರಿಕ ವಾಸ್ತವ್ಯದ ವೇಳೆಯೂ ಅವರನ್ನು ಕಾರ್ಟರ್ ಭೇಟಿಯಾಗಲಿದ್ದಾರೆ.
ಭಾರತ ಮತ್ತು ಅಮೆರಿಕಗಳ ನಡುವಿನ ಸೇನಾ ಬಾಂಧವ್ಯ ಉತ್ತಮವಾಗಿಯೇ ಮುಂದುವರಿದಿದೆ ಎಂದು ಕಾರ್ಟರ್ ನುಡಿದರು.
‘‘ಭಾರತ ಮತ್ತು ಅಮೆರಿಕಗಳು ಹೆಚ್ಚು ಗಾಢ ಹಾಗೂ ವೈವಿಧ್ಯ ರಕ್ಷಣಾ ಅಭಿವೃದ್ಧಿ ಮತ್ತು ಉತ್ಪಾದನೆಯತ್ತ ದಾಪುಗಾಲಿಟ್ಟಿವೆ. ಅವುಗಳು ವಿಮಾನವಾಹಕ ನೌಕೆಗಳ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಕೈಜೋಡಿಸಿವೆ’’ ಎಂದರು.







