ಟ್ಯಾಲ್ಗೋ ಕೋಚ್‌ಗಳ ರೈಲು ಸಂಚಾರಕ್ಕೆ ಮುಖ್ಯಮಂತ್ರಿ ಒತ್ತಾಯ
ಬೆಂಗಳೂರು-ಮೈಸೂರು ಹಾಗೂ ಮೈಸೂರು-ಹುಬ್ಬಳ್ಳಿ ನಡುವೆ

ಬೆಂಗಳೂರು, ಜೂ. 4: ಬೆಂಗಳೂರು- ಮೈಸೂರು ಹಾಗೂ ಮೈಸೂರು-ಹುಬ್ಬಳ್ಳಿ ನಡುವೆ ಪ್ರಯಾಣ ಅವಧಿಯನ್ನು ಗಣನೀಯವಾಗಿ ಕಡಿತಗೊಳಿಸುವ ಅತ್ಯಾಧುನಿಕ ಸೌಲಭ್ಯಗಳ ಹೊತ್ತ ಹಗುರ ತೂಕದ ಟ್ಯಾಲ್ಗೋ ಬೋಗಿಗಳ (ಟ್ಯಾಲ್ಗೋ ಕೋಚ್) ರೈಲು ಸಂಚಾರವನ್ನು ಪ್ರಾರಂಭಿಸುವತ್ತ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭಾಕರ್ ಪ್ರಭು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ. ಸ್ಪೇನ್‌ನಿಂದ ಆಮದು ಮಾಡಿಕೊಂಡ ಒಂಭತ್ತು ಟ್ಯಾಲ್ಗೋ ಕೋಚ್‌ಗಳ ಹೊತ್ತ ರೈಲನ್ನು ಮೇ 29 ರಂದು ಬರೇಲಿ ಮತ್ತು ಮುರಾದಾಬಾದ್ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಕಾರ್ಯಾಚರಣೆ ಮಾಡಲಾಗಿದೆ. ಪ್ರತಿ ಗಂಟೆಗೆ 115 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವಿರುವ ಈ ರೈಲು ಸಂಚಾರದಲ್ಲಿ ಇಂಧನ ಬಳಕೆಯಲ್ಲೂ ಶೇ. 30 ರಷ್ಟು ಉಳಿಕೆಯಾಗಲಿದೆ ಎಂದು ತಿಳಿದು ಬಂದಿದೆ. ಬೆಂಗಳೂರು ಮಹಾನಗರದ ಕ್ಷಿಪ್ರಗತಿಯ ಬೆಳವಣಿಗೆಗೆ ಕಡಿವಾಣ ಹಾಕಲು ಮೈಸೂರಿನಂತಹ ಉಪ ನಗರಗಳನ್ನು ಅಭಿವೃದ್ಧಿಪಡಿಸುವ ಆವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು ಹಾಗೂ ಮೈಸೂರು ನಡುವೆಯೂ ಪ್ರಯಾಣ ಸಮಯವನ್ನು ಕಡಿತಗೊಳಿಸುವ ಅಗತ್ಯವಿದೆ.
ಟ್ಯಾಲ್ಗೋ ರೈಲು ಸಂಚಾರ ಪ್ರಾರಂಭಿಸಿದರೆ ಉದ್ಯಾನ ನಗರಿಯಿಂದ ಅರಮನೆ ನಗರಿಗೆ ಕೇವಲ ಒಂದು ಗಂಟೆಯೊಳಗೆ ತಲುಪಬಹುದಾಗಿದೆ. ಅಲ್ಲದೆ, ಬೆಂಗಳೂರು ಮತ್ತು ಮೈಸೂರು ನಗರಗಳ ಅಭಿವೃದ್ಧಿ ಹಾಗೂ ಪ್ರಗತಿಗೆ ಇದು ಪೂರಕವಾಗಲಿದೆ. ಆದಕಾರಣ, ಬೆಂಗಳೂರು ಹಾಗೂ ಮೈಸೂರು ವಲಯದಲ್ಲಿ ಟ್ಯಾಲ್ಗೋ ಕೋಚ್‌ಗಳ ರೈಲನ್ನು ಕೂಡಲೇ ಪ್ರಾಯೋಗಿಕವಾಗಿ ಪ್ರಾರಂಭಿಸುವಂತೆ ಕೇಂದ್ರ ರೈಲ್ವೇ ಸಚಿವರಲ್ಲಿ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ಇದರಿಂದ ಬೆಂಗಳೂರು ಹಾಗೂ ಮೈಸೂರು ನಡುವೆ ಅಧಿಕ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿದೆ. ಅಲ್ಲದೆ, ಈ ಎರಡೂ ನಗರಗಳಲ್ಲಿನ ಆರ್ಥಿಕ ಚಟುವಟಕೆಗಳು ವೃದ್ಧಿಸಿ ಸರ್ವಾಂಗೀಣ ಅಭಿವೃದ್ಧಿಗೆ ವೇದಿಕೆ ಸಜ್ಜುಗೊಳ್ಳಲಿದೆ. ಬೆಂಗಳೂರು ಭೇಟಿಯ ಸಂದರ್ಭದಲ್ಲಿ ಬೆಂಗಳೂರು ಮತ್ತು ಮೈಸೂರು ಹಾಗೂ ಮೈಸೂರು ಮತ್ತು ಹುಬ್ಬಳ್ಳಿಯ ನಡುವೆ ಹೈ-ಸ್ಪೀಡ್ ರೈಲು ಅಳವಡಿಸುತ್ತೇವೆ ಎಂದು ತಾವು ಭರವಸೆ ನೀಡಿದ್ದೀರಿ. ಇದೀಗ ಅದರ ಬದಲು ಈ ಎರಡೂ ಮಾರ್ಗಗಳಲ್ಲಿ ಟ್ಯಾಲ್ಗೋ ಕೋಚ್‌ಗಳ ರೈಲು ಸಂಚಾರಕ್ಕೆ ಅನುವುಮಾಡಿಕೊಟ್ಟರೆ ಪ್ರಯಾಣ ಅವಧಿಯನ್ನು ಕಡಿಮೆ ಮಾಡುವುದರ ಜೊತೆಗೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ವಿಸ್ತರಿಸಬಹುದಾಗಿದೆ ಎಂದು ಕೇಂದ್ರ ರೈಲ್ವೆ ಸಚಿವರಿಗೆ ಶುಕ್ರವಾರ ಬರೆದಿರುವ ತಮ್ಮ ಪತ್ರದಲ್ಲಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.





