ಬಸ್‌ಗಳಿಗೆ ಕಲರ್ ಕೋಡಿಂಗ್ ವ್ಯವಸ್ಥೆ ಪರಿಶೀಲನೆ: ಡಾ.ವಿಶಾಲ್
ಉಡುಪಿ: ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ

ಉಡುಪಿ, ಜೂ.4: ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳಿಗೆ ಕಲರ್ ಕೋಡಿಂಗ್ ವ್ಯವಸ್ಥೆ ಅಳವಡಿಸುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಎಲ್ಲ ಖಾಸಗಿ ಮತ್ತು ಸರಕಾರಿ ಬಸ್‌ಗಳು ಕಡ್ಡಾಯವಾಗಿ ಸಮಯಪಾಲನೆ ಮಾಡಬೇಕು ಮತ್ತು ನಿಗದಿತ ರೂಟ್‌ಗಳಲ್ಲಿ ಸಂಚರಿಸಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ನ.14ರಿಂದ ಈವರೆಗೆ 12 ಆರ್‌ಟಿಎ ಸಭೆಗಳು ನಡೆದಿದ್ದು, 700ಕ್ಕೂ ಹೆಚ್ಚು ಪ್ರಕರಣಗಳು ವಿಚಾರಣೆಗೆ ಬಂದಿವೆ. ಇವುಗಳಲ್ಲಿ 360 ಇತ್ಯರ್ಥಗೊಳಿಸಲಾಗಿದ್ದು, ಉಳಿದ ಪ್ರಕರಣಗಳನ್ನು ಹಂತ ಹಂತವಾಗಿ ಮುಕ್ತಾಯಗೊಳಿಸಲಾಗುತ್ತದೆ. ಇಂದು 75 ವಿಷಯಗಳ ಬಗ್ಗೆ ಸಭೆೆ ನಡೆಯಲಿದ್ದು, 61 ಹೊಸ ಪರವಾನಿಗೆಯಲ್ಲಿ 59 ಮಂಜೂರು ಮಾಡಲಾಗಿದ್ದು, ಎರಡನ್ನು ಮುಂದೂಡಲಾಗಿದೆ. 14 ಪರವಾನಿಗೆ ವಿಭಿನ್ನತೆಯಲ್ಲಿ 13 ಮಂಜೂರು, ಒಂದು ತಿರಸ್ಕೃತಗೊಳಿಸಲಾಯಿತು. ಮುಂದಿನ ಸಭೆಯನ್ನು ಜು.16ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಸ್ ಪ್ರಯಾಣ ದರ ಹೆಚ್ಚಿಸುವ ಪ್ರಸ್ತಾಪವನ್ನು ಕೆನರಾ ಬಸ್ ಮಾಲಕರ ಸಂಘ ಸಭೆಯಲ್ಲಿ ಮುಂದಿಟ್ಟಿತ್ತು. ಕೊನೆಯ ಬಸ್ ದರ ಪರಿಷ್ಕಣೆಯ ಬಳಿಕ ಈವರೆಗೆ ಡಿಸೇಲ್ ಲೀಟರ್ ಒಂದಕ್ಕೆ 10 ರೂ. ಏರಿಕೆಯಾಗಿದೆ ಮತ್ತು ಶೇ.40ರಷ್ಟು ತೆರಿಗೆ ಜಾಸ್ತಿಯಾಗಿದೆ ಎಂದು ಸಂಘದ ಪರ ವಕೀಲರು ತಿಳಿಸಿದರು. ಈ ಬಗ್ಗೆ ಮುಂದೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಖಾಸಗಿ ವಾಹನಗಳಲ್ಲಿ ಅಕ್ರಮವಾಗಿ ಬಾಡಿಗೆ ಮಾಡುತ್ತಿರುವ ಬಗ್ಗೆ ಟ್ಯಾಕ್ಸಿಮೆನ್ ಅಸೋಸಿಯೇಶನ್‌ನ ರಮೇಶ್ ಕೋಟ್ಯಾನ್ ಸಭೆಗೆ ದೂರು ನೀಡಿದರು. ಅದೇ ರೀತಿ ಬಸ್‌ಗಳು ಕೂಡ ತಮ್ಮ ನಿಗದಿತ ರೂಟ್ ಬಿಟ್ಟು ಬೇರೆ ಕಡೆ ಬಾಡಿಗೆಗಳನ್ನು ವಹಿಸಿಕೊಳ್ಳುತ್ತಿದೆ. ಆಟೋರಿಕ್ಷಾಗಳು ವ್ಯಾಪ್ತಿ ಮೀರಿ ಸಂಚರಿಸುತ್ತಿವೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅಂತಹ ವಾಹನಗಳ ಮಾಹಿತಿ ಪಡೆದು ಪರವಾನಿಗೆ ರದ್ದುಗೊಳಿಸುವಂತೆ ಆರ್‌ಟಿಒ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೋಲ್ವೊ ಬಸ್‌ಗಳು ಸರಿಯಾದ ಸಮಯ ಪಾಲನೆ ಮಾಡದ ಬಗ್ಗೆ ಕೆನರಾ ಬಸ್ ಮಾಲಕರ ಸಂಘ ದೂರು ನೀಡಿತು. ಅಂಬಾಗಿಲು -ಕಲ್ಸಂಕ-ಉಡುಪಿ ಮಾರ್ಗವಾಗಿ ಸಂಚರಿಸುವ ಬಸ್‌ಗಳು ತಮ್ಮ ರೂಟ್‌ಗಳನ್ನು ಬಿಟ್ಟು ಬೇರೆ ಮಾರ್ಗವಾಗಿ ಸಂಚರಿಸುತ್ತಿವೆ ಎಂದು ಸದಾಶಿವ ಅಮೀನ್ ದೂರಿದರು. ಸಭೆಯಲ್ಲಿ ಜಿಲ್ಲಾ ಎಸ್ಪಿ ಅಣ್ಣಾಮಲೈ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸುರೇಂದ್ರಪ್ಪ ಉಪಸ್ಥಿತರಿದ್ದರು.





