ವಾಟ್ಸ್ಆ್ಯಪ್ ಮೂಲಕ ಪೊಲೀಸ್ ಪ್ರತಿಭಟನೆಗೆ ಸಂಚು?

ದೇಶಾದ್ಯಂತ ಗಮನ ಸೆಳೆದಿದ್ದ ಕರ್ನಾಟಕದಲ್ಲಿ ಪೊಲೀಸರ ಪ್ರತಿಭಟನೆಯ ಪ್ರಯತ್ನದ ಹಿಂದೆ ರಾಜಕಾರಣಿಗಳ ಕೈವಾಡವಿದ್ದು, ವಾಟ್ಸ್ಆ್ಯಪ್ ಮೂಲಕ ಪೊಲೀಸ್ ಪ್ರತಿಭಟನೆಯ ಸಂಚು ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಗುಪ್ತಚರ ಇಲಾಖೆಯಲ್ಲಿ ತೀವ್ರ ತನಿಖೆ ನಡೆಯುತ್ತಿದ್ದು, ಬಂದ್ ಗೆ ಪ್ರಚೋದನೆ ನೀಡಿದ ಹಲವರ ಬಂಧನವಾಗುವ ಸಾಧ್ಯತೆಯಿದೆಯೆಂದು ಕನ್ನಡಪ್ರಭ ವರದಿ ಮಾಡಿದೆ.
ತಂಡವೊಂದು ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ಪೊಲೀಸ್ ಪ್ರತಿಭಟನೆ ಬೀಜ ಬಿತ್ತಿದೆ. ಪ್ರತಿಭಟನೆಯ ಬಗ್ಗೆ ವ್ಯಾಪಕ ಪ್ರಚಾರ ನಡೆಸಿ, ಮಾಧ್ಯಮಗಳನ್ನು ಬಳಸಿಕೊಂಡು ದಿನದಿನಕ್ಕೆ ಪ್ರತಿಭಟನೆಯ ಕಾವು ಏರುವಂತೆ ಮಾಡಿದೆ. ಇದೆಲ್ಲಾ ವಾಟ್ಸ್ಆ್ಯಪ್ ಹರಿದಾಡಿದ ಸಂದೇಶಗಳಿಂದ ವ್ಯಕ್ತವಾಗಿದೆ.
ಈ ವಿಚಾರ ರಾಜ್ಯ ಪೊಲೀಸ್ ಇಲಾಖೆಗೂ ತಿಳಿದಿದ್ದು ಇಲಾಖೆ ಈಗ ತನಿಖೆಯನ್ನು ಚುರುಕುಗೊಳಿಸಿದೆ. ಜತೆಗೆ ಹಲವು ವ್ಯಾಟ್ಸ್ಆಪ್ ಗ್ರೂಪ್ ಗಳಲ್ಲಿ ಪ್ರತಿಭಟನೆಗೆ ಉತ್ತೇಜನೆ ನೀಡಿದ ವ್ಯಕ್ತಿಗಳನ್ನು ಪೊಲೀಸ್ ಇಲಾಖೆ ಬಂಧಿಸಲು ಚಿಂತನೆ ನಡೆಸುತ್ತಿದೆ ಎಂದು ಕನ್ನಡಪ್ರಭದಲ್ಲಿ ಜೂ.6ರಂದು ಪ್ರಕಟವಾದ ವರದಿ ತಿಳಿಸಿದೆ.
ರಾಜ್ಯಾದ್ಯಂತ ಮುಷ್ಕರ ಮಾಡುವಂತೆ ಪೊಲೀಸ್ ಸಿಬ್ಬಂದಿಗೆ ಕೆಲ ಸಂಘಟನೆಗಳು ಕೊಟ್ಟಿದ್ದ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಗುಪ್ತಚರ ಇಲಾಖೆ ಮಹತ್ವದ ಮಾಹಿತಿಯನ್ನು ಸರಕಾರಕ್ಕೆ ನೀಡಿದೆ. ಪೊಲೀಸ್ ಮುಷ್ಕರವೊಂದು ವ್ಯವಸ್ಥಿತ ಹುನ್ನಾರ, ಇದರ ಹಿಂದೆ ಪ್ರಭಾವಿ ವ್ಯಕ್ತಿಗಳಿದ್ದಾರೆ ಎಂಬ ವರದಿಯನ್ನು ಸಿದ್ಧಪಡಿಸಿ ಗುಪ್ತಚರ ಇಲಾಖೆ ವರದಿ ನೀಡಿದೆ.





