ಮಲಿನ ಗಾಳಿಯನ್ನು ಸೇವಿಸಿದಿರಿ ಜೋಕೆ
ವಾಯುಮಾಲಿನ್ಯದಿಂದ ರಕ್ತದೊತ್ತಡ ಸಾಧ್ಯತೆ
ಕಲ್ಲಿದ್ದಲು ಉರಿಸುವುದು, ವಾಹನದ ಹೊಗೆ, ಗಾಳಿಯಲ್ಲಿರುವ ಧೂಳು ಮತ್ತು ಕೊಳೆಗಳು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ತರಬಹುದು ಎಂದು ಹೊಸ ಅಧ್ಯಯನವೊಂದು ಎಚ್ಚರಿಸಿದೆ. ಅಧಿಕ ರಕ್ತದೊತ್ತಡವನ್ನು ಸಿಸ್ಟೋಲಿಕ್ ಬ್ಲಡ್ ಪ್ರೆಶರ್ ಎಂದು ವ್ಯಾಖ್ಯಾನಿಸಬಹುದು. ಅಧ್ಯಯನ ಹೇಳಿರುವ ಪ್ರಕಾರ ಅಲ್ಪಾವಧಿ ಮತ್ತು ಧೀರ್ಘಾವಧಿಯಲ್ಲಿ ವಾಯು ಸಂಬಂಧಿತ ಮಾಲಿನ್ಯಗಳಿಗೆ ತೆರೆದುಕೊಳ್ಳುವುದು ಆರೋಗ್ಯಕ್ಕೆ ಅಪಾಯಕಾರಿ.
ಉರಿಯುವ ಇದ್ದಿಲಿನ ಇಂಧನದಿಂದ ಗಾಳಿಗೆ ಸೇರುವ ಸಲ್ಫರ್ ಡೈ ಆಕ್ಸೈಡ್ ಮತ್ತು ಗಾಳಿಯಲ್ಲಿರುವ ಕಣಗಳಿಂದ, ಕೊಳೆ, ಧೂಳು, ಹೊಗೆ ಮತ್ತು ದ್ರವರೂಪದ ಭಾಷ್ಪಗಳಿಂದ ನೈಟ್ರೋಜನ್ ಆಕ್ಸೈಡ್ ಗಾಳಿಯಿಂದ ಮಾನವ ದೇಹಕ್ಕೆ ಹೋಗುತ್ತದೆ. ಇವುಗಳು ಅತಿಯಾಗಿ ರಕ್ತದ ಒತ್ತಡದ ಮಟ್ಟವನ್ನು ಏರಿಸಲಿವೆ. ವಾಯು ಮಾಲಿನ್ಯದಿಂದ ರಕ್ತದೊತ್ತಡ ಹೆಚ್ಚಾಗುವ ಬಗ್ಗೆ ಅಧ್ಯಯನದಲ್ಲಿ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ ಎಂದು ಅಧ್ಯಯನ ಮಾಡಿರುವ ಚೀನಾದ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಸಂಶೋಧಕ ತಾವೋ ಲಿಯು ಹೇಳಿದ್ದಾರೆ. ಇಷ್ಟೇ ಅಲ್ಲದೆ, ವಾಯು ಮಾಲಿನ್ಯವು ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡಕ್ಕೂ ಕಾರಣವಾಗಬಹುದು. ರಕ್ತನಾಳಗಳಲ್ಲಿ ಬದಲಾವಣೆಗಳನ್ನೂ ತರುವ ಸಾಧ್ಯತೆಯಿದೆ. ಅಧಿಕ ರಕ್ತದೊತ್ತಡವನ್ನು ಹೃದಯ ರೋಗಗಳು ಮತ್ತು ಹೃದಯಾಘಾತಗಳಿಗೆ ಕಾರಣವಾಗುವ ಅಪಾಯವೆಂದು ಈಗಾಗಲೇ ಗುರುತಿಸಲಾಗಿದೆ. ಹೀಗಾಗಿ ಜನರು ಅಧಿಕ ವಾಯು ಮಾಲಿನ್ಯ ಮಟ್ಟಗಳಿರುವ ದಿನಗಳಲ್ಲಿ ಹೊರಗೆ ಹೋಗುವುದನ್ನು ಕಡಿಮೆ ಮಾಡಬೇಕು. ಮುಖ್ಯವಾಗಿ ಈಗಾಗಲೇ ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರು ಸಣ್ಣ ಮಟ್ಟಿಗೆ ವಾಯುಮಾಲಿನ್ಯದ ಸ್ಥಿತಿಯನ್ನು ಎದುರಿಸಿದರೂ ಸಮಸ್ಯೆಗೆ ಒಳಗಾಗುತ್ತಾರೆ ಎಂದು ಲಿಯು ಹೇಳಿದ್ದಾರೆ.
ಸಂಶೋಧಕರ ತಂಡವು 17 ಅಧ್ಯಯನಗಳ ವಿಶ್ಲೇಷಣೆ ಮಾಡಿದೆ. ಅದರಲ್ಲಿ 1,08,000 ಅಧಿಕ ರಕ್ತದೊತ್ತಡ ಇರುವ ರೋಗಿಗಳು ಮತ್ತು 2,20,000 ರಕ್ತದೊತ್ತಡ ಸಮಸ್ಯೆ ಇಲ್ಲದವರನ್ನು ವಿಶ್ಲೇಷಿಸಲಾಗಿದೆ. ಹಾಗೆ ರಕ್ತದೊತ್ತಡದ ಅಪಾಯದ ಮೇಲೆ ಪರಿಣಾಮ ಬೀರುವ ಎಲ್ಲಾ ರೀತಿಯ ವಾಯು ಮಾಲಿನ್ಯದ ಬಗ್ಗೆ ಅಧ್ಯಯನ ನಡೆಸಲಾಗಿದೆ. ಸಮೀಪದ ವಾಯು ಮಾಲಿನ್ಯ ನಿಯಂತ್ರಣ ನಿಲ್ದಾಣಗಳ ವಿವರಗಳನ್ನು ಪಡೆದು ವಾಯು ಮಾಲಿನ್ಯವನ್ನು ವಿಶ್ಲೇಷಿಸಲಾಗಿದೆ.
ಕೃಪೆ: indianexpress.com