ಮೌಲ್ಯಮಾಪಕರ ಎಡವಟ್ಟು: ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಕನ್ನಡದಲ್ಲಿ 90 ಅಂಕದ ಬದಲು 16 ಅಂಕ..!

ಬಳ್ಳಾರಿ, ಜೂ.5: ಮೌಲ್ಯಮಾಪಕರ ಎಡವಟ್ಟಿನಿಂದಾಗಿ ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಕನ್ನಡ ವಿಷಯದಲ್ಲಿ 90 ಅಂಕ ಬದಲಿಗೆ 16 ಅಂಕ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.
ಹರಪನಹಳ್ಳಿಯ ಎಸ್ಎಸ್ಎಚ್ ಜೈನ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಎಸ್.ಎಂ. ರಿಯಾಝ್ ಎಂಬವರೇ ಮೌಲ್ಯಮಾಪಕರ ಎಡವಟ್ಟಿನಿಂದಾಗಿ ಫೈಲ್ ಆಗಿ ತೊಂದರೆಗೊಳಗಾದ ವಿದ್ಯಾರ್ಥಿ. ಬೇರೆ ಎಲ್ಲ ವಿಷಯಗಳಲ್ಲಿ ಉತ್ತೀರ್ಣಗೊಂಡಿದ್ದರೂ, ಕನ್ನಡ ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದಾರೆ.
ಬೇರೆ ಎಲ್ಲ ವಿಷಯಗಳಲ್ಲಿ ಉತ್ತೀರ್ಣಗೊಂಡಿದ್ದರೂ, ಕನ್ನಡ ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದಾರೆ.
ರಿಯಾಝ್ ಈ ಬಗ್ಗೆ ಉತ್ತರಪತ್ರಿಕೆಯ ಸ್ಕ್ಯಾನ್ ಕಾಪಿಗಾಗಿ ಅರ್ಜಿ ಸಲ್ಲಿಸಿ, ಉತ್ತರ ಪತ್ರಿಕೆಯ ಪ್ರತಿ ಪಡೆದಾಗ ಮೌಲ್ಯಮಾಪಕರು ಮಾಡಿರುವ ಎಡವಟ್ಟು ಗೊತ್ತಾಗಿದೆ. ರಿಯಾಝ್ ಕನ್ನಡದಲ್ಲಿ 90 ಅಂಕ ಪಡೆದಿದ್ದರೂ, ಅವರ ಅಂಕಪಟ್ಟಿಯಲ್ಲಿ 16 ಅಂಕ ದಾಖಲಾಗಿದೆ.
ಪಿಯು ಮಂಡಳಿಯ ವೆಬ್‌ಸೈಟ್ ನಲ್ಲಿ ಹಾಕಲಾಗಿರುವ ಫಲಿತಾಂಶದಲ್ಲಿ ಈತ (ನೊಂದಣಿ ಸಂಖ್ಯೆ 323377) ಕನ್ನಡ-16, ಇಂಗ್ಲಿಷ್-57, ರಸಾಯನಶಾಸ್ತ್ರ-51, ಭೌತಶಾಸ್ತ್ರ- 66, ಗಣಿತ-45 ಹಾಗೂ ಜೀವಶಾಸ್ತ್ರ -74 ಸೇರಿ ಒಟ್ಟು 309 ಅಂಕಗಳನ್ನು ತೋರಿಸುತ್ತದೆ. ಆದರೆ, ಉತ್ತರ ಪತ್ರಿಕೆಯಲ್ಲಿ 90 ಅಂಕಗಳು ನಮೂದಾಗಿವೆ.
ರಿಯಾಝ್ ಸಿಇಟಿ ಬರೆದಿದ್ದರೂ ಅವರ ಫಲಿತಾಂಶವನ್ನು ಈ ಕಾರಣಕ್ಕಾಗಿ ತಡೆ ಹಿಡಿಯಲಾಗಿದೆ. ರಿಯಾಝ್‌ಗೆ ಅನ್ಯಾಯವಾಗಿದ್ದರೂ ಪಿಯು ಪರೀಕ್ಷಾ ಮಂಡಳಿ ಈ ನಿಟ್ಟಿನಲ್ಲಿ ಗಮನ ಹರಿಸಿಲ್ಲ.







