ವೇತನ ನೀಡದ್ದಕ್ಕೆ ಕಳವು: ಉದ್ಯೋಗಿ ಈಗ ಪೊಲೀಸ್ ಅತಿಥಿ

ಮುಂಬೈ: ಮೂರು ತಿಂಗಳಿನಿಂದ ಮಾಲೀಕ ವೇತನ ನೀಡದೇ ಸತಾಯಿಸುತ್ತಿದ್ದುದರಿಂದ ಬೇಸತ್ತ ಮನೆ ಸಹಾಯಕಿಯೊಬ್ಬಳು ಮಾಲೀಕನ ಮನೆಯಿಂದ ಮೂರು ತಿಂಗಳ ವೇತನದಷ್ಟು ಮೊತ್ತವನ್ನು ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಲಕ್ಷಾಂತರ ರೂಪಾಯಿ ನೋಟಿನ ಕಂತೆಯಿಂದ 9000 ರೂಪಾಯಿಗಳನ್ನು ಕಳವು ಮಾಡಿದ ಊರ್ಮಿಳಾ ಗುಪ್ತಾ ಎಂಬಾಕೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನನಗೆ ನನ್ನ ವೇತನದಷ್ಟು ಮೊತ್ತವನ್ನು ಕದಿಯುವುದು ಅನಿವಾರ್ಯವಾಗಿತ್ತು. ಅಲ್ಲಿ ಬೇರೆ ಸಾಕಷ್ಟು ಹಣ ಇದ್ದರೂ ನಾನು ಕದಿಯಲು ಮುಂದಾಗಲಿಲ್ಲ ಎಂದು 23 ವರ್ಷ ವಯಸ್ಸಿನ ಗುಪ್ತಾ ಸಮರ್ಥಿಸಿಕೊಂಡಿದ್ದಾರೆ.
ಉದ್ಯೋಗದಾತ ಸುರೇಶ್ ಬೆಹ್ರಾಂ ದಾರುವಾಲಾ (53) ಅವರು ನೀಡಿದ ದೂರಿನ ಮೇರೆಗೆ ಚರ್ಕೋಪ್ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ. ನಿರ್ಮಾಣ ಸಂಸ್ಥೆ ಹೊಂದಿರುವ ದಾರುವಾಲಾ, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಖಂಡಿವಿಲಿ (ಪಶ್ಚಿಮ) ಪ್ರದೇಶದ ಶಿಟ್ಜಿ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು.
ಗುಪ್ತಾ ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 7ರವರೆಗೆ ಮನೆಯಲ್ಲಿ ಸಹಾಯಕಿಯಾಗಿ ದುಡಿಯುತ್ತಿದ್ದಳು. ತಮ್ಮ ವ್ಯಾಪಾರ ಪಾಲುದಾರ 2.5 ಲಕ್ಷ ರೂಪಾಯಿಯನ್ನು ಸೋಮವಾರ ನೀಡಿದ್ದು, ಪತ್ನಿ ಇದನ್ನು ದಿಂಬಿನ ಕೆಳಗೆ ಇಟ್ಟಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದರುವಾಲಾ ವಿವರಿಸಿದ್ದಾರೆ. ಆ ಹಣದಲ್ಲಿ 500 ರೂಪಾಯಿಯ 18 ನೋಟುಗಳು ನಾಪತ್ತೆಯಾಗಿದ್ದವು. ಕೆಲಸದಾಕೆಯನ್ನು ಪ್ರಶ್ನಿಸಿದಾಗ ಆಕೆ ಒಪ್ಪಿಕೊಂಡಿದ್ದಳು. ಮಹಿಳೆ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾಳೆ.





