ಕಾಲೇಜು ಪದವಿ ಪಡೆದ 96ರ ಜಪಾನಿ ವೃದ್ಧ

ಟೋಕಿಯೊ: ಸೆರಾಮಿಕ್ ಆರ್ಟ್ಸ್ ವಿವಿಯಲ್ಲಿ ಪದವಿ ಪಡೆದ 96 ವರ್ಷದ ಜಪಾನಿ ವೃದ್ಧರೊಬ್ಬರು ಇದೀಗ ವಿಶ್ವದಲ್ಲೇ ಕಾಲೇಜು ಪದವಿ ಪಡೆದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಿಂಗೇಮಿ ಹಿರಾತಾ ಎಂಬ ಈ ವ್ಯಕ್ತಿ ಕ್ಯೂಟೊ ಕಲೆ ಮತ್ತು ವಿನ್ಯಾಸ ವಿಶ್ವವಿದ್ಯಾನಿಲಯದಿಂದ ಸೆರಾಮಿಕ್ಸ್ ಕಲೆಯಲ್ಲಿ ಕಳೆದ ಮಾರ್ಚ್ ನಲ್ಲಿ ಸ್ನಾತಕ ಪದವಿ ಪಡೆದಿದ್ದಾರೆ.
1919ರಲ್ಲಿ ಹಿರೊಶಿಮಾದಲ್ಲಿ ಜನಿಸಿದ ಇವರು, ಕ್ಯಾಂಪಸ್ ನಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ನನ್ನನ್ನು ಅಭಿನಂದಿಸಲು ಕರೆ ಮಾಡಿದ ವಿದ್ಯಾರ್ಥಿಗಳ ಹೆಸರು ಕೂಡಾ ನನಗೆ ಗೊತ್ತಿಲ್ಲ ಎಂದು ಜಪಾನ್ ನ ಯೊಮ್ಯುರಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಇದು ನನಗೆ ದೊಡ್ಡ ಶಕ್ತಿ ನೀಡಿದೆ ಎಂದು ಹಿರಾಟಾ ಹೇಳಿದ್ದಾರೆ. ನಿವೃತ್ತಿಯ ಬಳಿಕ ಮಡಕೆ ತಯಾರಿಕೆ ಕಲೆ ಕಲಿತಿದ್ದ ಇವರು ಸೆರಾಮಿಕ್ಸ್ ಕಲೆ ಪದವಿ ಪಡೆಯಲು 11 ವರ್ಷ ತೆಗೆದುಕೊಂಡಿದ್ದಾರೆ. ನನ್ನ ಗುರಿ ಬದುಕಿನ ಶತಕ ಬಾರಿಸುವುದು. ನಾನು ಸಮರ್ಥನಾಗಿದ್ದು, ಪದವಿ ಶಾಲೆಗೆ ಹೋಗುವುದು ಖುಷಿ ನೀಡುತ್ತಿದೆ ಎಂದು ಹಿರಾಟಾ ಹೇಳಿದ್ದಾರೆ. ಎರಡನೇ ಮಹಾಯುದ್ಧ ಸಂದರ್ಭದಲ್ಲಿ ನೌಕಾಪಡೆಯಲ್ಲಿ ಇವರು ಸೇವೆಯಲ್ಲಿದ್ದರು. ಇವರಿಗೆ ನಾಲ್ವರು ಮರಿಮಕ್ಕಳಿದ್ದಾರೆ. ಈ ವಯಸ್ಸಿನಲ್ಲಿ ಹೊಸದನ್ನು ಕಲಿಯುವುದು ಖುಷಿ ನೀಡುತ್ತದೆ ಎಂದು ಹೇಳಿದ್ದಾರೆ. ಜಪಾನ್ನಲ್ಲಿ ಇಂಥ ಸಾಧಕ ಧೀರ್ಘಾಯುಷಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ವರ್ಷ 100 ವರ್ಷದ ಮಿಯಾಕೊ ನಗೋಕಾ ಎಂಬುವವರು 1500 ಮೀಟರ್ ಫ್ರೀಸ್ಟೈಲ್ ಈಜು ಪೂರೈಸಿ ದಾಖಲೆ ನಿರ್ಮಿಸಿದ್ದರು.





