ಭಟ್ಕಳ: ನಿಧನರಾದ ಪತ್ರಕರ್ತರಿಗೆ ಶ್ರದ್ಧಾಂಜಲಿ
ಭಟ್ಕಳ, ಜೂ. 5: ಗುರುವಾರ ನಿನರಾದ ಸಂಘದ ಮಾಜಿ ಅಧ್ಯಕ್ಷ ಪ್ರೊ.ಎನ್. ಎ. ಲೋಹಾನಿ ಹಾಗೂ ಹಿರಿಯ ವರದಿಗಾರ ಎಸ್. ವಿ. ಹೆಗಡೆ ಹಾಸ್ಪುರರಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್, ಪ್ರೊ.ಎನ್. ಎ. ಲೋಹಾನಿ ಬಹುಮುಖ ಪ್ರತಿಭೆಯಾಗಿದ್ದರು. ಉಪನ್ಯಾಸಕರಾಗಿ, ಪತ್ರಕರ್ತರಾಗಿ, ತರ್ಜುಮೆದಾರರಾಗಿ ಹಲವಾರು ಸಂಘ ಸಂಸ್ಥೆಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಅತ್ಯಂತ ಸರಳ ಹಾಗೂ ಸ್ನೇಹಜೀವಿಯಾಗಿದ್ದ ಅವರ ನಿಧನದಿಂದ ತುಂಬಲಾರದ ನಷ್ಟವುಂಟಾಗಿದೆ ಎಂದರು. ಸಂಘದ ಸ್ಥಾಪನೆಯ ಸಂದರ್ಭದಲ್ಲಿ ಸಹಕರಿಸಿದ್ದ ಹಿರಿಯ ವರದಿಗಾರ ಎಸ್.ವಿ.ಹೆಗಡೆ ಹಾಸ್ಪುರರ ನಿಧನವು ಜಿಲ್ಲೆಗೆ ದೊಡ್ಡ ನಷ್ಟವನ್ನುಂಟು ಮಾಡಿದೆ. ಅವರ ಹೆಸರಿನಲ್ಲಿ ದತ್ತಿ ಸ್ಥಾಪಿಸಲು ಮುಂದಾಗಿರುವುದು ಸ್ವಾಗತಾರ್ಹ ಎಂದರು.
ಸಂಘದ ಉಪಾಧ್ಯಕ್ಷ ಎಂ.ಆರ್.ಮಾನ್ವಿ ಮಾತನಾಡಿ, ಪ್ರೊ.ಲೋಹಾನಿ ಭಟ್ಕಳದಲ್ಲಿ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನಾನುರಾಗಿಗಳಾಗಿದ್ದರು. ಪತ್ರಿಕಾ ಜೀವನದಲ್ಲಿಯೂ ಉತ್ತಮ ಹೆಸರು ಗಳಿಸಿದ್ದ ಅವರು ಅಂಜುಮಾನ್‌ಉರ್ದು ತರಖ್ಖೀ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ನಾಡು ನುಡಿಗೆ ಸೇವೆ ಸಲ್ಲಿಸಿದ್ದರು ಎಂದರು.ಸಂಘದ ಸಲಹೆಗಾರ ಸತೀಶ್‌ಕುಮಾರ್ ಮಾತನಾಡಿ ಹಲವಾರು ಪತ್ರಿಕೆಗಳಲ್ಲಿ ಹವ್ಯಾಸಿ ವರದಿಗಾರರಾಗಿ ವರದಿಗಳನ್ನು, ಲೇಖನಗಳನ್ನು ಬರೆಯುವ ಮೂಲಕ ಸಮಾಜಮುಖಿಯಾಗಿದ್ದ ಲೋಹಾನಿ, ಹಿರಿಯ ವರದಿಗಾರರಾಗಿ, ಅನೇಕ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಾ ಜಿಲ್ಲೆಗೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದ ಎಸ್.ವಿ. ಹೆಗಡೆ ಹಾಸ್ಪುರರ ನಿಧನದಿಂದ ತೀವ್ರ ದುಃಖವಾಗಿದೆ ಎಂದರು.
ಇತ್ತೀಚೆಗೆ ನಿಧನರಾದ ಮಹೇಶ ಹೆಗಡೆ ಅವರಿಗೂ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ನಾಯ್ಕ, ಜೊತೆ ಕಾರ್ಯದರ್ಶಿ ಮೋಹನ ಆರ್. ನಾಯ್ಕ, ಮಾಜಿ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್, ನಿಸ್ಸಾರ್‌ಅಹಮ್ಮದ್, ಫಯಾಜ್ ಮುಲ್ಲಾ, ಭವಾನಿಶಂಕರ ನಾಯ್ಕ, ಸಾಲಿಕ್ ಅಹಮ್ಮದ್, ಇನಾಯತುಲ್ಲಾ ಗವಾಯಿ ಮುಂತಾದವರು ಉಪಸ್ಥಿತರಿದ್ದರು.







