ಬೆಂಗಳೂರಿನಲ್ಲಿ ಬೆಲೆ ಕಳೆದುಕೊಳ್ಳುತ್ತಿವೆ ಡೀಸೆಲ್ ಕಾರುಗಳು

ಬೆಂಗಳೂರು,ಜೂ.5-ಒಂದು ವಾರಕ್ಕಿಂತ ಹೆಚ್ಚು ನಿಲ್ಲಿಸಿದರೆ ಸ್ಟಾರ್ಟ್ ಆಗುವುದು ಕಷ್ಟ ಮಳೆಗಾಲದಲ್ಲಿ ನೆನೆಯುವಂತಿಲ್ಲ, ಚಳಿಗೆ ಮೈ ಒಡ್ಡಿದರೆ ಇನ್ನೂ ಕಷ್ಟ ನಿರ್ವಹಣೆ ಖರ್ಚು ಇಂತಹ ಗುಣಗಳನ್ನು ಹೊಂದಿರುವ ಡೀಸೆಲ್ ಕಾರುಗಳು ಬೆಂಗಳೂರಿನಲ್ಲಿ ಬೆಲೆ ಕಳೆದುಕೊಳ್ಳುತ್ತಿವೆ.!
ಕಾರು ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿದ್ದರೂ ಅದು ಪೆಟ್ರೋಲಿಗೆ ಸೀಮಿತವಾಗುತ್ತಿದೆ. ಈ ಹಿಂದೆ ಡೀಸೆಲ್ ಕಾರುಗಳಿಗೆ ಮುಗಿ ಬೀಳುತ್ತಿದ್ದ ಜನರೀಗ ಪೆಟ್ರೋಲ್ ಕಾರುಗಳನ್ನೇ ಹೆಚ್ಚು ನೆಚ್ಚಿಕೊಳ್ಳುತ್ತಿದ್ದಾರೆ. ಕಾರು ತಯಾರಿಕಾ ಕಂಪೆನಿಗಳು ಕೂಡ ಪೆಟ್ರೋಲ್ ಕಾರುಗಳ ಉತ್ಪಾದನೆ ಹೆಚ್ಚು ಮಾಡುತ್ತಿವೆ. ನಿಧಾನಕ್ಕೆ ಡೀಸೆಲ್ ಕಾರುಗಳ ಉತ್ಪಾದನೆ ಕಡಿಮೆಯಾಗುತ್ತಿದ್ದು, ಮುಂದೊಂದು ದಿನ ಸ್ಥಗಿತಗೊಂಡರೆ ಅಚ್ಚರಿ ಪಡಬೇಕಿಲ್ಲ.
ಐದು ವರ್ಷಗಳ ಅಂಕಿ ಅಂಶ ಇದಕ್ಕೆ ಪುಷ್ಠಿ ನೀಡುತ್ತದೆ. ಮೊದಲೆರಡು ವರ್ಷ ಡೀಸೆಲ್ ಕಾರು ಮಾರಾಟ ಹೆಚ್ಚಾಗಿದ್ದರೆ, ನಂತರದ ಮೂರು ವರ್ಷ ಪೆಟ್ರೋಲ್ ಕಾರುಗಳೇ ಅಧಿಪತ್ಯ ಸಾಧಿಸಿವೆ.
2011-12ರಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳ ಮಾರಾಟದ ಪ್ರಮಾಣ ಕ್ರಮವಾಗಿ ಶೇ. 52 ಮತ್ತು ಶೇ. 48 ಆಗಿದ್ದರೆ 2012-13ರಲ್ಲಿ ಈ ಪ್ರಮಾಣ ಶೇ. 42 ಹಾಗೂ ಶೇ. 58 ಆಗಿತ್ತು. 2013-14ರಲ್ಲಿ ಶೇ. 47ಕ್ಕೆ ಜಿಗಿದ ಪೆಟ್ರೋಲ್ ಕಾರುಗಳ ಮಾರಾಟ ಪ್ರಮಾಣ, 2014-15ರಲ್ಲಿ ಮತ್ತೆ ಶೇ. 52 ಹಾಗೂ 2015-16ರಲ್ಲಿ ಶೇ. 56ಕ್ಕೆ ಹೆಚ್ಚಾಗಿದೆ ಈ ಮೂರು ವರ್ಷಗಳಲ್ಲಿ ಡೀಸೆಲ್ ಕಾರುಗಳ ಮಾರಾಟ ಕ್ರಮವಾಗಿ ಶೇ. 53, ಶೇ. 48 ಮತ್ತು ಶೇ. 44ಕ್ಕೆ ಕುಸಿದಿದೆ.
ಕೋರ್ಟ್ ಭಯ
ಹೆಚ್ಚು ಹೊಗೆಯುಗುಳುವ ವಾಹನದ ವಿರುದ್ಧ ಸುಪ್ರಿಂ ಕೋರ್ಟ್ ಸಮರ ಸಾರಿದೆ. ಡೀಸೆಲ್ ಕಾರುಗಳು ಸಾಮಾನ್ಯವಾಗಿ ಹೊಗೆಯುಗುಳುವುದು ಹೆಚ್ಚು.ಹಾಗಾಗಿ, ಆ ಕಾರುಗಳ ಮಾರಾಟವನ್ನೇ ನಿಷೇಧಿಸಬಾರದೇಕೆ ಎನ್ನುವ ಪ್ರಶ್ನೆಯನ್ನು ಕೂಡ ಹಿಂದೊಮ್ಮೆ ಎತ್ತಿತ್ತು ಸುಪ್ರಿಂ ಕೋರ್ಟ್. ಅದೇನಾದರೂ ಜಾರಿಗೆ ಬಂದರೆ ಕಾರನ್ನು ಕೊಳ್ಳುವವರೂ ಇರಲ್ಲ, ಓಡಿಸಲೂ ಅಗಲ್ಲ ಅನ್ನುವ ಭಯ ಜನರಲ್ಲಿ ಮೂಡಿದೆ. ಇದರಿಂದಲೂ ಖರೀದಿ ಇಳಿಮುಖವಾಗಿದೆ.
ಅಬ್ಬಬ್ಬಾ ಅಂದರೆ ಡೀಸೆಲ್ ಕಾರುಗಳನ್ನು ಒಂದು ಲಕ್ಷ ಕಿ.ಮೀ.ವರೆಗಷ್ಟೇ ನೆಮ್ಮದಿಯಾಗಿ ಚಲಾಯಿಸಲು ಸಾಧ್ಯವಂತೆ. ನಂತರ ಅದನ್ನು ರಿಪೇರಿ ಮಾಡಿಸಿದರೂ ಹೆಚ್ಚು ಹೆಚ್ಚು ಹೊಗೆ ಉಗುಳುವುದನ್ನು ತಪ್ಪಿಸುವುದಕ್ಕಾಗುವುದಿಲ್ಲ. ಇದು ವಾಯು ಮಾಲಿನ್ಯಕ್ಕೆ ಎಡೆ ಮಾಡಿಕೊಡುತ್ತದೆ. ಇದು ಯಾವತ್ತಿದ್ದರೂ ಅಪಾಯ. ಅದಕ್ಕೇ ಮೂರು ವರ್ಷಕ್ಕೊಮ್ಮೆ ಡೀಸೆಲ್ ಕಾರು ಮಾಲೀಕರು ವಾಹನ ಬದಲಾಯಿಸುತ್ತಿರುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಇನ್ನೊಂದೆಡೆ ಡೀಸೆಲ್ ಹಾಗೂ ಪೆಟ್ರೋಲ್ ಪ್ರತಿ ಲೀಟರ್ ಬೆಲೆಯಲ್ಲಿ ಹೆಚ್ಚೇನು ವ್ಯತ್ಯಾಸ ಇಲ್ಲ. ರಿಪೇರಿಗೆ ಬರುವ ವೆಚ್ಚದಲ್ಲಿ ಪೆಟ್ರೋಲ್ ಸರಿದೂಗಿಸಬಹುದು ಎನ್ನುವುದು ಹಲವರ ವಾದ.
ರಾಜಧಾನಿಯಲ್ಲಿ ಕೆಲ ವರ್ಷಗಳ ಹಿಂದೆ ಶೇ. 40 ಡೀಸೆಲ್ ಮತ್ತು ಶೇ. 60 ಮಂದಿ ಪೆಟ್ರೋಲ್ ಕಾರು ಉಪಯೋಗಿಸುತ್ತಿದ್ದರು. ಆ ಪ್ರಮಾಣವೀಗ 55 ಮತ್ತು 45ಕ್ಕೆ ಬಂದಿದೆ. ಇದು ಗಣನೀಯವಾಗಿ ಬದಲಾಗುತ್ತಿರುವುದು ಜನ ಡೀಸೆಲ್ ಕಾರಿಗಿಂತ ಪೆಟ್ರೋಲ್ ಕಾರಿನ ಮೇಲೆ ಹೆಚ್ಚು ವ್ಯಾಮೋಹ ಹೊಂದುತ್ತಿದ್ದಾರೆ ಎನ್ನುವುದನ್ನು ತಿಳಿಸುತ್ತದೆ.







