ಸುಳ್ಯ: ರೋಟರಿ ವತಿಯಿಂದ ರೆಸ್ಟ್‌ರೂಂ ಸ್ಥಾಪನೆ

ಸುಳ್ಯ, ಜೂ.5: ರಾಜ್ಯ ಹೆದ್ದಾರಿ ಪ್ರಯಾಣಿಕರ ಅನುಕೂಲಕ್ಕಾಗಿ ರೋಟರಿ ಕ್ಲಬ್ ವತಿಯಿಂದ ಸುಳ್ಯದ ಓಡಬಾ ಎಂಬಲ್ಲಿ ರೆಸ್ಟ್ ರೂಂನ ಸ್ಥಾಪನೆಯಾಗಿದೆ.
ಕಳೆದ 45 ವರ್ಷದಿಂದಲೂ ಸುಳ್ಯ ಪರಿಸರದಲ್ಲಿ ಜನರ ಅನುಕೂಲಕ್ಕಾಗಿ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಸುಳ್ಯ ರೋಟರಿ ಸಂಸ್ಧೆಯು ಈ ವರ್ಷ ಆರೋಗ್ಯ, ನೈರ್ಮಲ್ಯ, ಶುಚಿತ್ವ ಮತ್ತು ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಸುಳ್ಯ ತಾಲೂಕಿನ 15ಕ್ಕಿಂತಲೂ ಹೆಚ್ಚಿನ ಪ್ರಾಥಮಿಕ ಶಾಲೆಗಳಿಗೆ ಶುದ್ಧೀಕರಣ ಯಂತ್ರಗಳನ್ನು ನೀಡಿದೆ. ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಉದ್ಧೇಶದಿಂದ ಸುಳ್ಯ ತಾಲೂಕಿನ 20 ಪ್ರಾಥಮಿಕ ಶಾಲೆಗಳಿಗೆ ಓದುವ ಪುಸ್ತಕಗಳನ್ನು ನೀಡಿದೆ. ಅಲ್ಲದೆ ಅಂಗನವಾಡಿ ಶಾಲೆಗಳಿಗೆ ಮತ್ತು ಪ್ರಾಥಮಿಕ ಶಾಲೆಗಳಿಗೆ ಫ್ಯಾನ್, ಆಟೋಟ ಸಲಕರಣೆಗಳು ಮತ್ತು ಅಡುಗೆ ಉಪಕರಣಗಳನ್ನು ನೀಡಿ ತನ್ನ ಸೇವೆಯನ್ನು ನೀಡುತ್ತಿದೆ.
ಸ್ವಚ್ಛ ಭಾರತದ ಕಲ್ಪನೆ ಸಾಕಾರಗೊಳ್ಳಲು ಎಲ್ಲರೂ ಶ್ರಮವಹಿಸಬೇಕಾಗಿರುವುದು ಇಂದಿನ ಅನಿವಾರ್ಯತೆ ಹಾಗೂ ಅವಶ್ಯಕತೆಯಾಗಿದ್ದು, ದೂರದ ಪ್ರಯಾಣಿಕರು, ಪ್ರಯಾಣದ ಸಂದರ್ಭದಲ್ಲಿ ರಸ್ತೆಬದಿಯಲ್ಲಿ ಶೌಚಮಾಡುವುದನ್ನು ತಪ್ಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ.
ಈ ನಿಟ್ಟಿನಲ್ಲಿ ಸುಳ್ಯ ರೋಟರಿ ಕ್ಲಬ್ ಸುಳ್ಯದ ಮುಖ್ಯರಸ್ತೆಯ ಓಡಬಾ ಎಂಬಲ್ಲಿ ರೆಸ್ಟ್‌ರೂಂ ನ್ನು ನಿರ್ಮಿಸಿದ್ದು, ಅದನ್ನು ಈಗಾಗಲೇ ಸುಳ್ಯ ನಗರ ಪಂಚಾಯತ್‌ಗೆ ಹಸ್ತಾಂತರಿಸಲಾಗಿದೆ. ಸುಳ್ಯ ನಗರ ಪಂಚಾಯತ್ ಅದರ ನಿರ್ವಹಣೆಯ ಜವಾಬ್ಧಾರಿಯನ್ನು ಮೂರುವರ್ಷದ ಅವಧಿಗೆ ಸುಳ್ಯ ರೋಟರಿಕ್ಲಬ್‌ಗೆ ನೀಡಿದೆ. ಈ ರೆಸ್ಟ್ ರೂಂ, ಬಸ್ ತಂಗುದಾಣ, ಪ್ರಯಾಣಿಕರ ಅನುಕೂಲಕ್ಕಾಗಿ ಪಾರ್ಕ್ ಹಾಗೂ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯವನ್ನು ಹೊಂದಿರುತ್ತದೆ. ಅಲ್ಲದೆ ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ಅಂಗಡಿ ಕೋಣೆಯನ್ನು ಸಹ ಹೊಂದಿದೆ.







