ಸುಸ್ತಿಬಾಕಿದಾರರು ನೆಮ್ಮದಿಯಿಂದ ನಿದ್ದೆ ಮಾಡುವಂತಿಲ್ಲ: ಜೇಟ್ಲಿ

ಒಸಾಕಾ (ಜಪಾನ್), ಜೂ 5: ಮಾರ್ಚ್‌ನಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ 10 ಸರ್ಕಾರಿ ಬ್‌ಯಾಂಕ್‌ಗಳು ಸುಮಾರು 15 ಸಾವಿರ ಕೋಟಿ ನಷ್ಟ ಅನುಭವಿಸಿದ್ದು, ಈ ಬ್ಯಾಂಕುಗಳಿಗೆ ಹೆಚ್ಚಿನ ಬಂಡವಾಳ ಬೆಂಬಲ ನೀಡುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಕಟಿಸಿದ್ದಾರೆ. ಇದರ ಜತೆಗೆ ಈ ನಷ್ಟಕ್ಕೆ ಮುಖ್ಯ ಕಾರಣವಾಗಿರುವ ಬಾಕಿ ಸುಸ್ತಿದಾರರಿಗೆ ನೆಮ್ಮದಿಯಿಂದ ನಿದ್ದೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸುಸ್ತಿಸಾಲಕ್ಕೆ ವಿವಿಧ ವ್ಯಾಪಾರ ಕ್ಷೇತ್ರಗಳ ನಷ್ಟ ಕಾರಣವೇ ವಿನಃ ವಂಚನೆಯಿಂದಾಗಿ ಈ ಸುಸ್ತಿ ಬಾಕಿ ಆಗಿಲ್ಲ ಎಂಬ ಬ್ಯಾಂಕ್‌ಗಳ ಹೇಳಿಕೆಯನ್ನು ಸಚಿವರು ನಿರಾಕರಿಸಿದ್ದಾರೆ.
ಬಂಡವಾಳ ಆಕರ್ಷಿಸುವ ಸಲುವಾಗಿ ಜಪಾನ್‌ಗೆ ಆರು ದಿನಗಳ ಭೇಟಿ ನೀಡಿರುವ ಸಚಿವರು, ಈ ನಷ್ಟಕ್ಕೆ ಮುಖ್ಯ ಕಾರನವೆಂದರೆ, ಸುಸ್ತಿ ಸಾಲವನ್ನು ಗಣನೆಗೆ ತೆಗೆದುಕೊಂಡಿರುವುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳು ಕಾರ್ಯಾಚರಣೆ ಮಟ್ಟದಲ್ಲಿ ಲಾಭ ಗಳಿಸಿವೆ ಎಂದು ಸ್ಪಷ್ಟಪಡಿಸಿದರು.
ಅನುತ್ಪಾದಕ ಆಸ್ತಿ ಅಥವಾ ಸುಸ್ತಿ ಸಾಲ ಸದಾ ಇರುತ್ತದೆ. ಇದನ್ನು ನೀವು ಚಾಪೆಯ ಅಡಿಯಲ್ಲಿ ಇಡುತ್ತೀರಾ ಅಥವಾ ಬ್ಯಾಲೆನ್ಸ್ ಶೀಟ್‌ನಲ್ಲಿ ತರುತ್ತೀರೋ ಎನ್ನುವುದು ಮುಖ್ಯವಲ್ಲ. ನನ್ನ ಪ್ರಕಾರ, ಪಾರದರ್ಶಕ ಬ್ಯಾಲೆನ್ಸ್‌ಶೀಟ್ ಉತ್ತಮ ವಹಿವಾಟು ನಡೆಸಲು ಅಗತ್ಯ ಎಂದು ಜೇಟ್ಲೆ ಅಭಿಪ್ರಾಯಪಟ್ಟರು.
ನಮ್ಮ ಸರ್ಕಾರ ಬ್ಯಾಂಕುಗಳನ್ನು ಬಲಗೊಳಿಸಲು ಬದ್ಧವಾಗಿದೆ. ಬ್ಯಾಂಕ್‌ಗಳಿಗೆ ಅಗತ್ಯವಿರುವ ಬೆಂಬಲ ನೀಡಲಾಗುತ್ತದೆ. ನಾನು ಬಜೆಟ್‌ನಲ್ಲಿ ಈ ಸಂಬಂಧ ಘೋಷಣೆಯನ್ನೂ ಮಾಡಿದ್ದೇನೆ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ನೆರವು ನೀಡಲೂ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಬ್ಯಾಂಕುಗಳ ಸಬಲೀಕರಣಕ್ಕೆ ದಿವಾಳಿ ಕಾನೂನಿಗೆ ತಿದ್ದುಪಡಿ ತರುವುದು ಹಾಗೂ ಪ್ರಮುಖ ಸಾಲ ಮರುಹೊಂದಾಣಿಕೆ ವ್ಯವಸ್ಥೆ ಕೂಡಾ ಸೇರಿದೆ ಎಂದರು.
ಸಾಲ ವಸೂಲಾತಿ ನ್ಯಾಯಮಂಡಳಿಯ ನೇಮಕವೇ ದೊಡ್ಡ ಸಬಲೀಕರಣದ ಅಂಶ. ಈ ಹಿನ್ನೆಲೆಯಲ್ಲಿ ಸುಸ್ತಿಬಾಕಿ ಉಳಿಸಿಕೊಂಡಿರುವವರು ನೆಮ್ಮದಿಯಿಂದ ನಿದ್ದೆ ಮಾಡುವಂತಿಲ್ಲ. ಬಾಕಿ ಉಳಿಸಿಕೊಂಡಿರುವವರು ಅದನ್ನು ತೀರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲೇಬೇಕಿದೆ ಎಂದು ಹೇಳಿದರು.
ಎಲ್ಲ ಅನುತ್ಪಾದಕ ಆಸ್ತಿಗಳು ಬ್ಯಾಂಕ್ ವಂಚನೆ ಪ್ರಕರಣಗಳಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೆಲ ಅಸಮರ್ಪಕ ಸಾಲಗಳು ಇರಬಹುದು. ದೊಡ್ಡ ಪ್ರಮಾಣದ ಸಾಲಗಳು ವ್ಯಾಪಾರಿ ನಷ್ಟ ಹಾಗೂ ಕೆಲವು ನಿರ್ದಿಷ್ಟ ವಲಯದ ನಷ್ಟದಿಂದಾಗಿವೆ ಎಂದು ಸ್ಪಷ್ಟಪಡಿಸಿದರು. ವಲಯವಾರು ಪ್ರಗತಿ ಸುಧಾರಿಸಿದಾಗ, ಪರಿಸ್ಥಿತಿ ಬದಲಾಗಬಹುದು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಉದಾಹೃನೆ ನೀಡಿದರು. ಪಿಎನ್‌ಬಿ ಕಳೆದ ವರ್ಷ 12 ಸಾವಿರ ಕೋಟಿ ವ್ಯವಹಾರ ಲಾಭ ಗಳಿಸಿದೆ. ಇದು ಕಡಿಮೆ ಲಾಭವೇನಲ್ಲ. ಆದರೆ ಎನ್‌ಪಿಎ ಕಾರಣದಿಂದ ನಷ್ಟವನ್ನು ಘೋಷಿಸಿದೆ ಎಂದು ಸ್ಪಷ್ಟಪಡಿಸಿದರು.
ನಿರ್ದಿಷ್ಟ ವಲಯಗಳ ನಷ್ಟದಿಂದ ಉಂಟಾಗಿರುವ ಅನುತ್ಪಾದಕ ಆಸ್ತಿ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಆಯಾ ವಲಯದ ಸಮಸ್ಯೆಗಳನ್ನು ಬಗೆಹರಿಸಲು ಒತ್ತು ನೀಡಲಾಗುವುದು. ಇದೀಗ ಬ್ಯಾಂಕ್‌ಗಳ ಬ್ಯಾಲೆನ್ಸ್‌ಶೀಟ್ ಬದಲಾಗುವ ಕಾಲ ಬಂದಿದೆ ಎಂದರು.
ಬ್ಯಾಂಕುಗಳ ಅನುತ್ಪಾದಕ ಆಸ್ತಿ ಪ್ರಮಾಣ ಬೆಳೆಯುವುದನ್ನು ತಡೆಯುವ ಸಲುವಾಗಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಬ್ಯಾಂಕ್‌ಗಳ ಸಾಧನೆಯನ್ನು ಪರಾಮರ್ಶೆ ಮಾಡಲಿದ್ದು, ಸೋಮವಾರ ಈ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎಲ್ಲ ಸರ್ಕಾರಿ ಬ್ಯಾಂಕುಗಳು 2015-16ರಲ್ಲಿ ನಡೆಸಿದ ವಹಿವಾಟಿನ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಕೃಷಿ ಸಾಲ, ವಿಮೆ ಹಾಗೂ ಎಂಎಸ್‌ಇ ವಲಯಗಳ ಬಗ್ಗೆ ಗಮನ ಹರಿಸುವರು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.







