ವರದಕ್ಷಣೆ ಕಿರುಕುಳ ಆರೋಪ: ಶಾಸಕ ಸಂಭಾಜಿ ಪಾಟೀಲ್ ವಿರುದ್ಧ ದೂರು

ಬೆಳಗಾವಿ, ಜೂ 5: ವರದಕ್ಷಣೆ ಕಿರುಕುಳ ಆರೋಪದಡಿ ಬೆಳಗಾವಿಯ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಸೇರಿ ಅವರ ಕುಟುಂಬದ ಹತ್ತು ಮಂದಿಯ ವಿರುದ್ಧ ಇಲ್ಲಿನ ಬೆಳಗಾವಿ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಾಸಕ ಸಂಭಾಜಿ ಪಾಟೀಲ್ ಅವರ ಸೊಸೆ ಶೀತಲ್ ಸಾಗರ್ ಎಂಬವರು ರವಿವಾರ ಮಧ್ಯಾಹ್ನ ತಮ್ಮ ಪೋಷಕರೊಂದಿಗೆ ಆಗಮಿಸಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಣೆ ಕಿರುಕುಳ ಆರೋಪದ ಮೇಲೆ ಶಾಸಕ ಸಂಭಾಜಿ ಪಾಟೀಲ್, ಪುತ್ರ ಸಾಗರ್ ಪಾಟೀಲ್ ಸೇರಿ ಅವರ ಕುಟುಂಬ ಹತ್ತು ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಶೀತಲ್ ಸಾಗರ್, ತಾನು ಮಹಾರಾಷ್ಟ್ರದ ಸೊಲ್ಲಾಪುರದಿಂದ ಬಂದಿದ್ದು, ಎಲ್ಲರ ಸಮ್ಮತಿಯೊಂದಿಗೆ 2011 ಮೇ 30ರಂದು ಶಾಸಕ ಸಂಭಾಜಿ ಪಾಟೀಲ್ ಪುತ್ರ ಸಾಗರ್ ಪಾಟೀಲ್ ಅವರನ್ನು ವಿವಾಹವಾದೆ. ಆದರೆ, ನಾಲ್ಕು ವರ್ಷಗಳಾದರೂ ಮಕ್ಕಳಾಗದ ಕಾರಣ ಕುಟುಂಬಸ್ಥರು ನಿತ್ಯ ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದರು.
ಮಕ್ಕಳಾಗದ ಕಾರಣ ಸಾಗರ್ ಪಾಟೀಲ್ ಕೆಲ ದಿನಗಳ ಹಿಂದೆ ಮತ್ತೊಂದು ಮದುವೆಯಾಗಿದ್ದಾರೆ. ಅಲ್ಲದೆ, ಎರಡನೆ ಮದುವೆಗೆ ಬಂದು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಲಾಗಿತ್ತು. ತವರು ಮನೆಯಿಂದ 50 ಲಕ್ಷ ರೂ.ಹಣ ತರುವಂತೆ ಒತ್ತಾಯಿಸುತ್ತಿದ್ದರು ಎಂದು ಶೀತಲ್ ದೂರಿದರು.
ಶಾಸಕನ ಪುತ್ರನ ಕಿರುಕುಳದಿಂದ ಬೇಸತ್ತು ಪೊಲೀಸರಿಗೆ ದೂರು ನೀಡಿದ್ದು, ತನಗೆ ನ್ಯಾಯ ದೊರಕಿಸಿಕೊಡಬೇಕೆಂಬುದು ನನ್ನ ಮನವಿ ಎಂದ ಅವರು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಇದೇ ವೇಳೆ ಆಗ್ರಹಿಸಿದರು. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಇಲ್ಲಿನ ಬೆಳಗಾವಿ ಮಹಿಳಾ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.







