ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಚಾಲಕನಿಗೆ ಹಲ್ಲೆಗೈದು ಕಾರು ಕೊಂಡೊಯ್ದ ಬ್ಯಾಂಕ್ ತಂಡ
ಸಾಲ ವಸೂಲಾತಿಗೆ ಬಂದ ತಂಡದಿಂದ ಕೃತ್ಯ: ನ್ಯಾಯಾಲಯಕ್ಕೆ ದೂರು

ವಿಟ್ಲ, ಜೂ.5: ಕಾರು ಖರೀದಿಗೆ ಪಡೆದ ಸಾಲದ ಮೊತ್ತ ಮರು ಪಾವತಿಸಲು ವಿಳಂಬವಾಗಿದೆ ಎನ್ನುವ ನೆಪವೊಡ್ಡಿ ಪುತ್ತೂರಿನ ಖಾಸಗಿ ಬ್ಯಾಂಕ್ ಸಿಬ್ಬಂದಿಯ ಸುಮಾರು ಹತ್ತು ಜನರ ತಂಡವೊಂದು ಕಾರಿನಲ್ಲಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಕಾರು ಮಾಲಕನ ಮೇಲೆ ಹಲ್ಲೆ ನಡೆಸಿ ಬೆಲೆ ಬಾಳುವ ವಾಚು ಸಹಿತ ಕಾರನ್ನು ಕಸಿದುಕೊಂಡು ಹೋದ ಅತಿರೇಕದ ಘಟನೆಯೊಂದು ವಿಟ್ಲದಲ್ಲಿ ಸಂಭವಿಸಿದೆ.
ಬ್ಯಾಂಕ್ ಸಿಬ್ಬಂದಿಯ ಗೂಂಡಾ ವರ್ತನೆಯಿಂದ ಬೇಸತ್ತ ಕಾರು ಮಾಲಕ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಇತರ ಎಂಟು ಜನರ ವಿರುದ್ಧ ಬಂಟ್ವಾಳ ನ್ಯಾಯಾಲಯಕ್ಕೆ ಖಾಸಗಿ ಫಿರ್ಯಾದಿ ಸಲ್ಲಿಸಿದ್ದು, ದೂರು ಸ್ವೀಕರಿಸಿರುವ ನ್ಯಾಯಾಲಯ ಪ್ರಕರಣದ ತನಿಖೆ ನಡೆಸುವಂತೆ ವಿಟ್ಲ ಪೊಲೀಸರಿಗೆ ಆದೇಶಿಸಿದೆ. ವಿಟ್ಲ ಕಸಬಾ ಗ್ರಾಮದ ಕಾಂತಡ್ಕ ನಿವಾಸಿ ಹಸೈನಾರ್ ಎಂಬವರ ಪುತ್ರ ಮುಹಮ್ಮದ್ ಶಾಫಿ ಎಂಬವರೇ ಬ್ಯಾಂಕ್ ಸಿಬ್ಬಂದಿಯ ಗೂಂಡಾ ವರ್ತನೆಗೆ ಗುರಿಯಾದ ವ್ಯಕ್ತಿ.
ಗ್ರಾಹಕ ಮುಹಮ್ಮದ್ ಶಾಫಿಯವರು ಕುಂಬಾರರ ಸಹಕಾರ ಬ್ಯಾಂಕ್ ವಿಟ್ಲ ಶಾಖೆಯಿಂದ ಮಾ.16 ರಂದು ಸೂಕ್ತ ದಾಖಲೆ ಪ್ರಸ್ತುತಪಡಿಸಿ ತನ್ನ ಹುಂಡೈ ಐ20 (ಕೆಎ19 ಎಂಇ 9142) ಕಾರಿಗೆ 6.50 ಲಕ್ಷ ರೂ.ಸಾಲ ಪಡೆದಿದ್ದರೆನ್ನಲಾಗಿದೆ. ಕಂತು ಹಣ ಪಾವತಿಸುತ್ತ ಬಂದಿದ್ದ ಶಾಫಿ ಇತ್ತೀಚಿನ ಕೆಲ ಕಂತುಗಳನ್ನು ಪಾವತಿಸುವಲ್ಲಿ ವಿಳಂಬವಾಗಿತ್ತೆನ್ನಲಾಗಿದೆ. ಈ ಬಗ್ಗೆ ತಾನು ಸಾಲ ಪಡೆದಿದ್ದ ವಿಟ್ಲ ಶಾಖೆಯ ಮ್ಯಾನೇಜರ್‌ರಲ್ಲಿ ಮಹಮ್ಮದ್ ಶಾಫಿ ಕೆಲ ದಿನಗಳ ಹಿಂದೆ ಮಾತುಕತೆ ನಡೆಸಿದ್ದ ಕಾರಣ ಮೇ.30 ರಂದು ಬಾಕಿಯಿರುವ ಕಂತುಗಳನ್ನು ಪಾವತಿಸುವಂತೆ ಮ್ಯಾನೇಜರ್ ಸಹಿ ಮಾಡಿ ಪತ್ರ ನೀಡಿದ್ದರು.
ಹಣ ಹೊಂದಿಕೆ ಮಾಡುತ್ತಿರುವ ಮಧ್ಯೆಯೇ ಮೇ.28 ರಂದು ರಾತ್ರಿ 8:40 ರ ಸುಮಾರಿಗೆ ಶಾಫಿ ತನ್ನ ಸಹೋದರಿಯರು ಮತ್ತು ಎಳೆಯ ಮಕ್ಕಳೊಂದಿಗೆ ವಿಟ್ಲದ ವೈದ್ಯರಲ್ಲಿಗೆ ಬರುತ್ತಿದ್ದರು. ಆ ಸಮಯ ವಿಟ್ಲದ ಕೆಎಸ್ಸಾರ್ಟಿಸಿ ಬಸ್‌ಸ್ಟ್ಯಾಂಡ್ ಪರಿಸರದಲ್ಲಿ ಮಾರುತಿ ಸ್ವಿಪ್ಟ್ ಮತ್ತು ಮಾರುತಿ ರಿಟ್ಜ್ ಕಾರಿನಲ್ಲಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಪೆರುವಾಯಿ, ಕಾರ್ಯದರ್ಶಿ ಜನಾರ್ದನ ಮತ್ತು ಇತರ ಎಂಟು ಜನರು ಶಾಫಿಯ ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಲ್ಲೆ ನಡೆಸಿದ್ದರೆಂದು ಶಾಫಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ತನ್ನ ಸಹೋದರಿಯರೊಂದಿಗೆ ಮತ್ತು ಎಳೆಯ ಮಕ್ಕಳೊಂದಿಗೂ ಅಸಭ್ಯ ರೀತಿಯಲ್ಲಿ ವರ್ತಿಸಿದ ಬ್ಯಾಂಕ್ ಸಿಬ್ಬಂದಿ ತನ್ನ ಕೈಯಲ್ಲಿದ್ದ ಬೆಲೆ ಬಾಳುವ ವಾಚ್ ಕಿತ್ತುಕೊಂಡು ತನ್ನ ಹುಂಡೈ ಐ20 ಕಾರನ್ನು ಬಲಾತ್ಕಾರದಿಂದ ಕಸಿಯುತ್ತಿದ್ದಂತೆಯೆ ಸಾರ್ವಜನಿಕರು ಜಮಾಯಿಸುವಷ್ಟರಲ್ಲಿ ಪುತ್ತೂರಿನ ಕಡೆಗೆ ಪರಾರಿಯಾಗಿದ್ದಾರೆಂದು ಶಾಫಿ ದೂರಿನಲ್ಲಿ ವಿವರಿಸಿದ್ದಾರೆ.
ಬ್ಯಾಂಕ್ ಸಿಬ್ಬಂದಿಯ ರೌಡಿ ವರ್ತನೆಯಿಂದ ಕಂಗಾಲಾದ ಮುಹಮ್ಮದ್ ಶಾಫಿ ಬಂಟ್ವಾಳ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ನ್ಯಾಯಾಲಯವು ಸೂಕ್ತ ತನಿಖೆ ನಡೆಸುವಂತೆ ವಿಟ್ಲ ಪೊಲೀಸರಿಗೆ ಆದೇಶ ನೀಡಿದೆ. ಘಟನೆಂು ಬಗ್ಗೆ ವಿಟ್ಲದ ಹಲವು ಸಾಮಾಜಿಕ ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿದೆ.







