ಭಾರತವು ಅವಕಾಶಗಳ ದೇಶ,ಅವನ್ನು ಬಾಚಿಕೊಳ್ಳಿ.... : ಕತರ್ ಉದ್ಯಮಿಗಳಿಗೆ ಮೋದಿ ಕರೆ

ದೋಹಾ, ಜೂ.5: ಭಾರತವು ವಿಪುಲವಾದ ಅವಕಾಶಗಳಿರುವ ದೇಶವಾಗಿದ್ದು, ಈ ಅವಕಾಶಗಳನ್ನು ಬಾಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕತರ್‌ನ ಉದ್ಯಮಸಂಸ್ಥೆಗಳಿಗೆ ಕರೆ ನೀಡಿದ್ದಾರೆ. ತೈಲ ಸಮೃದ್ಧ ದೇಶವಾದ ಕತರ್ ಪ್ರವಾಸದ ಎರಡನೆಯ ದಿನವಾದ ರವಿವಾರ ಮೋದಿ ಆ ದೇಶದ ಉನ್ನತ ಉದ್ಯಮಿಗಳ ಜೊತೆ ಒಂದು ತಾಸಿಗೂ ಹೆಚ್ಚು ಸಮಯ ರಹಸ್ಯ ಮಾತುಕತೆ ನಡೆಸಿದ ಸಂದರ್ಭ, ಭಾರತದಲ್ಲಿ ಹೂಡಿಕೆ ಮಾಡುವಂತೆ ಅವರಿಗೆ ಆಹ್ವಾನ ನೀಡಿದರು. ಉದ್ಯಮ ವ್ಯವಹಾರಗಳ ಸುಗಮ ನಿರ್ವಹಣೆ ಸಾಧ್ಯವಾಗುವಂತೆ ಮಾಡಲು ತನ್ನ ಸರಕಾರವು ಕಳೆದ ಎರಡು ವರ್ಷಗಳಲ್ಲಿ ಕೈಗೊಂಡಿರುವ ಕ್ರಮಗಳನ್ನು ಅವರಿಗೆ ವಿವರಿಸಿದರು.
ರೈಲ್ವೆ, ರಕ್ಷಣೆ, ಉತ್ಪಾದನೆ ಹಾಗೂ ಆಹಾರ ಸಂಸ್ಕರಣೆಯಂತಹ ವಲಯಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಅನುಕೂಲ ಮಾಡಿಕೊಡಲು ಭಾರತ ಕೈಗೊಂಡಿರುವ ಹಲವಾರು ಸುಧಾರಣಾ ಕ್ರಮಗಳನ್ನು ಪ್ರಧಾನಿ ಕತರ್‌ನ ಗಣ್ಯ ಉದ್ಯಮಿಗಳಿಗೆ ವಿವರಿಸಿದರು.
‘‘ ನೀವೆಲ್ಲರೂ ಭಾರತದ ಸಾಮರ್ಥ್ಯವನ್ನು ಪರಿಗಣಿಸಬೇಕಾಗಿದೆ. ನೀವು ಗುರುತಿಸಿರುವ ಭಾರತದ ಉದ್ಯಮ ವಲಯದಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಕ್ರಮಕೈಗೊಳ್ಳಲಾಗುವುದು’’ ಎಂದು ಮೋದಿ ಕತರ್ ಉದ್ಯಮಿಗಳಿಗೆ ಭರವಸೆ ನೀಡಿದರು.
ಕತರ್‌ನ ಅಲ್‌ಫೈಸಲ್ ಹೋಲ್ಡಿಂಗ್ ಸಂಸ್ಥೆಯ ಸಿಇಓ, ಶೇಖ್ ಫೈಸಲ್ ಬಿನ್ ಖಾಸಿಮ್ ಅಲ್-ತಾನಿ, ದೋಹಾ ಬ್ಯಾಂಕ್‌ನ ಚೇರ್‌ಮನ್ ಶೇಖ್ ಫಾಹಿದ್ ಎಂ.ಜೆ. ಅಲ್ ತಾನಿ ಹಾಗೂ ಕತರ್ ಶೇರು ವಿನಿಮಯ ಕೇಂದ್ರದ ಸಿಇಓ ರಶೀದ್‌ಅಲ್ ಅಲಿ-ಮನ್ಸೂರಿ ಸೇರಿದಂತೆ 10 ಮಂದಿ ಪ್ರಮುಖ ಉದ್ಯಮಿಗಳು ಮೋದಿ ಜೊತೆ ಮಾತುಕತೆಯಲ್ಲಿ ಪಾಲ್ಗೊಂಡರು.
ಜಪಾನ್ ಹಾಗೂ ದಕ್ಷಿಣ ಕೊರಿಯಾದ ಬಳಿಕ ಕತರ್‌ಗೆ ಭಾರತ ಅತಿ ದೊಡ್ಡ ರಫ್ತು ಮಾರುಕಟ್ಟೆಯಾಗಿದೆ. ಕತರ್ ಪ್ರಮುಖವಾಗಿ ನೈಸರ್ಗಿಕ ಅನಿಲವನ್ನು ರಫ್ತು ಮಾಡುತ್ತಿದೆ.. ಭಾರತವು ಕತರ್‌ನಿಂದ ಎಥಿನೇಲ್, ಪ್ರೊಪಿಲಿನ್,ಅಮೋನಿಯಾ,ಯೂರಿಯಾ ಹಾಗೂ ಪೊಲಿಥೀನ್ ಖರೀದಿಸುತ್ತಿದೆ. ಪಂಚ ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಮೋದಿ, ಶನಿವಾರ ಅಫ್ಘಾನಿಸ್ತಾನದಿಂದ ಕತರ್‌ಗೆ ಆಗಮಿಸಿದ್ದರು. ತನ್ನ ಪ್ರವಾಸದ ಭಾಗವಾಗಿ ಅವರು ಸ್ವಿಟ್ಜರ್‌ಲ್ಯಾಂಡ್ ಹಾಗೂ ಅಮೆರಿಕವನ್ನು ಸಂದರ್ಶಿಸಲಿದ್ದಾರೆ.







