ಪೊಲೀಸರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ

ಕುಶಾಲನಗರ, ಜೂ.5: ಪೊಲೀಸ್ ಸಿಬ್ಬಂದಿಯರ ಬೇಡಿಕೆಗಳಿಗೆ ಸರಕಾರ ಕೂಡಲೇ ಸ್ಪಂದಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ಗೆಳೆಯರ ಬಳಗದ ಸದಸ್ಯರು ಶನಿವಾರ ಸೋಮವಾರಪೇಟೆ ಡಿವೈಎಸ್ಪಿ ಮುಖಾಂತರ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಗೆಳೆಯರ ಬಳಗದ ಅಧ್ಯಕ್ಷ ವಿ.ಎಸ್. ಆನಂದಕುಮಾರ್, ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಪೊಲೀಸರು ತುಂಬಾ ಹೀನಾಯ ಸ್ಥಿತಿಯಲ್ಲಿದ್ದಾರೆ, ವೇತನ ಸಾಕಷ್ಟು ಕಡಿಮೆ. ವಾಸಕ್ಕೆ ಸರಿಯಾದ ಮನೆಗಳಿಲ್ಲ. ಇಷ್ಟಪಟ್ಟಾಗ ರಜೆ ಸಿಗುವುದಿಲ್ಲ. ಹಬ್ಬ ಹರಿದಿನಗಳನ್ನು ಮನೆ ಮಂದಿಯೊಂದಿಗೆ ಸಂತಸದಿಂದ ಕಳೆಯುವಂತಿಲ್ಲ. ಮೇಲಧಿಕಾರಿಗಳ ಕಿರುಕುಳ ಮಿತಿಮೀರಿದೆ. ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಇನ್ನಾದರೂ ಪೊಲೀಸರತ್ತ ದಯೆ ತೋರುವಂತಾಗಲಿ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಟಿ. ಕುಮಾರ್, ಪೊಲೀಸರ ಬಗ್ಗೆ ಸಾರ್ವಜನಿಕರು ತೋರಿಸುತ್ತಿರುವ ಕಾಳಜಿಗೆ ನಾವು ಅಭಾರಿಯಾಗಿದ್ದೇವೆ. ಸರಕಾರ ಕೂಡ ನಮ್ಮ ಪರವಾಗಿ ಸಕರಾತ್ಮಕವಾಗಿ ಸ್ಪಂದಿಸುತ್ತಿದೆ. ನಮ್ಮ ಎಲ್ಲ ಬೇಡಿಕೆಗಳು ಈಡೇರಲು ಸ್ವಲ್ಪಕಾಲಾವಕಾಶ ಬೇಕಾಗಬಹುದು. ಪೊಲೀಸರು ಎಂದರೆ ಶಿಸ್ತಿಗೆ ಪರ್ಯಾಯ ಹೆಸರು. ಹಾಗಾಗಿ ತಾಳ್ಮೆಯಿಂದ ಕಾಯಬೇಕಾಗುತ್ತದೆ ಎಂದರು.
ಗೆಳೆಯರ ಬಳಗದ ಪ್ರಮುಖರಾದ ಇಬ್ರಾಹೀಂ, ಜಗದೀಶ್, ವಿನು, ಚಂದ್ರು, ಸಂದೇಶ್, ಸುರೇಶ್, ರಾಜು, ಖಲೀಲ್, ಎಚ್.ಟಿ. ವಸಂತ, ಕುಮಾರ್, ಎಚ್.ಆರ್. ಕುಮಾರ್ ಮತ್ತಿತರರು ಹಾಜರಿದ್ದರು.







