ಡ್ರಗ್ ಡೀಲರ್ ಗಳಿಗೆ ಗುಂಡಿಕ್ಕಿ ಕೊಲ್ಲಿ
ಜನರಿಗೆ ನಿಯೋಜಿತ ಫಿಲಿಪೀನ್ಸ್ ಅಧ್ಯಕ್ಷ ಕರೆ

ಮನಿಲಾ,ಜೂ.5: ಅಪರಾಧದ ವಿರುದ್ಧ ತಾನು ಸಾರಿರುವ ಸಮರದಲ್ಲಿ ಕೈಜೋಡಿಸುವಂತೆ ಫಿಲಿಪ್ಪೀನ್ಸ್‌ನ ನಿಯೋಜಿತ ಅಧ್ಯಕ್ಷ ರೊಡ್ರಿಗೊ ಡ್ಯೂಟೆರ್ಟೊ ರವಿವಾರ ದೇಶದ ಜನತೆಗೆ ಕರೆ ನೀಡಿದ್ದಾರೆ. ಹಿಂಸಾಚಾರದಲ್ಲಿ ತೊಡಗುವ ಮಾದಕದ್ರವ್ಯ ದಂಧೆಕೋರರನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಅವರು ನಾಗರಿಕರನ್ನು ಆಗ್ರಹಿಸಿದ್ದಾರೆ.
ಶನಿವಾರ ರಾತ್ರಿ ದಕ್ಷಿಣ ಫಿಲಿಪ್ಫೀನ್ಸ್‌ನ ದವಾವೊ ನಗರದಲ್ಲಿ ವಿಜಯೋತ್ಸವ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಅಪರಾಧದ ವಿರುದ್ಧ ಹೋರಾಡಲು ತನಗೆ ನೆರವಾಗುವ ಫಿಲಿಪ್ಫೀನ್ಸ್ ಪ್ರಜೆಗಳಿಗೆ ಸೂಕ್ತ ಬಹುಮಾನಗಳನ್ನು ನೀಡುವುದಾಗಿ ಘೋಷಿಸಿದರು. ಕಳೆದ ತಿಂಗಳು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರೊಡ್ರಿಗೊ ಅವರು ಭಾರೀ ಮತಗಳೊಂದಿಗೆ ಗೆಲುವು ಸಾಧಿಸಿದ್ದರು.ಡ್ಯೂಟೆರ್ಟೊ ಭಾಷಣವನ್ನು ಟಿವಿಯಲ್ಲಿ ದೇಶಾದ್ಯಂತ ಪ್ರಸಾರ ಮಾಡಲಾಗಿದೆ.
‘‘ನೀವು ನಮಗೆ, ಪೊಲೀಸರಿಗೆ ಮುಕ್ತವಾಗಿ ಕರೆ ಮಾಡಬಹುದು. ಅಥವಾ ನಿಮ್ಮಲ್ಲಿ ಗನ್ ಇದ್ದಲ್ಲಿ ಅಪರಾಧಗಳನ್ನು ಎದುರಿಸಿ. ನಿಮಗೆ ನನ್ನ ಬೆಂಬಲವಿದೆ’’ ಎಂದು ಹೇಳಿದ ಅವರು, ದೇಶದ ಪೊಲೀಸರು ಕೂಡಾ ಅಕ್ರಮ ಡ್ರಗ್ ಜಾಲದಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಿದರು. ಒಂದು ವೇಳೆ ಡ್ರಗ್ಸ್ ದಂಧೆಕೋರನನ್ನು ಬಂಧಿಸುವಾಗ ಪ್ರತಿರೋಧ ತೋರಿಸಿದಲ್ಲಿ ಅಥವಾ ಬಂಧೂಕು ಅಥವಾ ಚೂರಿಯಿಂದ ನಾಗರಿಕನನ್ನು ಕೊಲ್ಲುವ ಬೆದರಿಕೆ ಹಾಕಿದಲ್ಲಿ, ನೀವು ಆತನನ್ನು ಗುಂಡಿಕ್ಕಿ ಸಾಯಿಸಿ, ನಾನು ನಿಮಗೆ ಪದಕವನ್ನು ನೀಡುವೆ ಎಂದವರು ಘೋಷಿಸಿದರು.
ಅಪರಾಧ ಹಾಗೂ ಭ್ರಷ್ಟಾಚಾರದ ಪಿಡುಗನ್ನು ಹತ್ತಿಕ್ಕುವ ಭರವಸೆಗಳೊಂದಿಗೆ, 71 ವರ್ಷದ ಡ್ಯೂಟಾರ್ಟೊ ಮೇ 9ರ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯಗಳಿಸಿದ್ದರು.
ಆದರೆ ಡ್ಯೂಟಾರ್ಟೊ ಅವರ ಅಪರಾಧ ವಿರೋಧಿ ಅಭಿಯಾನದ ಬಗ್ಗೆ ವಿವಿಧ ಮಾನವಹಕ್ಕು ಸಂಘಟನೆಗಳು ಬಾರೀ ಆತಂಕ ವ್ಯಕ್ತಪಡಿಸಿವೆ. ಈ ಅಭಿಯಾನವು ವ್ಯಾಪಕವಾದ ಮಾನವಹಕ್ಕುಗಳ ಉಲ್ಲಂಘನೆಗೆ ಕಾರಣವಾಗುವ ಸಾಧ್ಯತೆಯಿದೆಯೆಂದು ಅವು ಹೇಳಿವೆ.
‘ದವಾವೊ ಮೃತ್ಯು ದಳಗಳು’ ಎಂದೇ ಹೆಸರಾದ ಮೋಟಾರ್‌ಸೈಕಲ್‌ಧಾರಿ ಹಂತಕರು, ದವಾವೊ ನಗರದಲ್ಲಿ ಅನೇಕ ಶಂಕಿತ ಕ್ರಿಮಿನಲ್‌ಗಳನ್ನ ಹತ್ಯೆಗೈದುದರ ಹಿಂದೆ ಡ್ಯೂಟಾರ್ಟೊ ಅವರ ಕೈವಾಡವಿದ್ದುದಾಗಿ ಶಂಕಿಸಲಾಗಿದೆ. ಡ್ಯೂಟಾರ್ಟೊ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷ ನೀಡುವ ಧೈರ್ಯ ಯಾರಿಗೂ ಇಲ್ಲದೆ ಇದ್ದುದರಿಂದ, ಅವರ ವಿರುದ್ಧ ಈವರೆಗೆ ದೋಷಾರೋಪ ಹೊರಿಸಲು ಸಾಧ್ಯವಾಗಿಲ್ಲವೆಂದು ಮಾನವಹಕ್ಕು ಸಂಘಟನೆಗಳು ಆಪಾದಿಸಿವೆ.
ವಿವಿಧ ಅಪರಾಧಗಳಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿರುವ ದೇಶದ ಮೂವರು ಪ್ರಮುಖ ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡುವಂತೆಯೂ ಡ್ಯೂಟೆರ್ಟೊ ತನ್ನ ಭಾಷಣದಲ್ಲಿ ಆಗ್ರಹಿಸಿದ್ದಾರೆ. ಒಂದು ವೇಳೆ ಈ ಪೊಲೀಸ್ ಅಧಿಕಾರಿಗಳು ಅಧಿಕಾರ ತ್ಯಜಿಸದೇ ಇದ್ದಲ್ಲಿ, ಅವರನ್ನು ಸಾರ್ವಜನಿಕವಾಗಿ ಅಪಮಾನಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜೂನ್ 30ರಿಂದ ಆರು ವರ್ಷಗಳ ಅವಧಿಗೆ ಡ್ಯೂಟೆರ್ಟ್ ಫಿಲಿಪ್ಪೀನ್ಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.







